ಅನಸೂಯ ಜಹಗೀರದಾರ ಕವಿತೆ-ಹವೆ

ಹೊತ್ತಿಕೊಂಡು ಉರಿವ
ಒಂದು ಕಿಡಿಯ ಮೇಲೆ
ಮಂಜಿನ ಒಂದು ಹನಿ
ಬಿತ್ತು

ಕಿಡಿ ತಣ್ಣಗಾಯಿತೆ‌.?
ಹನಿ ಒಣಗಿತೆ…?
ಪ್ರಶ್ನೆಯ ಜೊತೆಗೆ
ಕುತೂಹಲವಂತೂ
ಹಲವರಲಿ
ಇತ್ತು

ಕೆಲವರು
ಕಿಡಿ ತಣ್ಣಗಾಗದೇ ಇದ್ದೀತೆ
ಎಂದು ತಮ್ಮ ತಮ್ಮಲ್ಲಿ
ಮಾತಾಡಿಕೊಂಡರು

ಮತ್ತೇ ಕೆಲವರು
ಮಂಜು ಹನಿ
ಅಂತಹ ಬಿಸಿಗೆ
ಒಣಗದೇ ಇದ್ದೀತೆ..
ಚರ್ಚಿಸಿಕೊಂಡರು

ಹಲವರು
ಕಿಡಿ ಉರಿದಿದ್ದಕ್ಕೆ
ಮಂಜು ಹನಿ ಇದ್ದದ್ದಕ್ಕೆ
ಸಬೂತು ಕೇಳಿದರು

ಮತ್ತೇ ಹಲವರು
ಸಬೂತು ನಾಶ ಮಾಡಿದ್ದಕ್ಕೆ
ಮಂಜು ಹನಿಯನ್ನೂ
ಕಿಡಿಯನ್ನೂ
ವಾಚಾಮಗೋಚರ
ಟೀಕಿಸಿ,ಅಣಕಿಸಿ,
ಬೈಯ್ದರು

ಕೆಲವೇ ಕೆಲವರು
ದೃಶ್ಯ ಮಾಧ್ಯಮಗಳಲ್ಲಿ
ಚರ್ಚಾಕೂಟದಲ್ಲಿ
ಭಾಗವಹಿಸಿ
ಮಂಜು ಹನಿ ಇಂಗುತ್ತದೆಂದು,
ಕಿಡಿ ಹೊತ್ತಿ ಉರಿಯುತ್ತದೆಂದು,
ಸಾಕ್ಷ್ಯಗಳ ಸಮೇತ ಹೇಳಿದರು
ಹಲ ಕೆಲವು ಪ್ರಸಂಗಗಳ
ಸಮೀಕರಿಸಿ
ಉದಾಹರಣೆ ಸಹಿತ
ವಿವರಿಸಿದರು

ಅಲೆಯುತ್ತ ಬಂದ
ಪ್ರೇಮಿಗಳು
ಅದೇ ಸ್ಥಳದಲ್ಲಿ
ಎರಡೂ ಕಾಣದ್ದಕ್ಕೆ
ಪರಿತಪಿಸಿದರು..!
ಪರಸ್ಪರ ಚುಂಬಿಸುತ್ತ
ಇಂಗಿದ ಹನಿಯನ್ನೂ
ಉರಿವ ಕಿಡಿಯನ್ನೂ
ಬಹು ಚರ್ಚೆಗೆ ಒಳಗಾಗಿದ್ದ
ಈ ಎರಡನ್ನೂ
ತಮ್ಮೊಳಗೆ ಕಂಡರು..!


4 thoughts on “ಅನಸೂಯ ಜಹಗೀರದಾರ ಕವಿತೆ-ಹವೆ

Leave a Reply

Back To Top