ಈ ಬದುಕಿನಲ್ಲಿ ಸ್ನೇಹಕ್ಕಿಂತ ದೊಡ್ಡದಾದ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಅದು ಸತ್ಯ ಕೂಡ. ಯಾವುದೇ ರಕ್ತ ಸಂಬಂಧಕ್ಕಿಂತಲೂ ಸ್ನೇಹಕ್ಕೆ ಕೊಡುವ ಬೆಲೆ ಅತ್ಯಂತ ಅಮೂಲ್ಯ. ಸ್ನೇಹದಲ್ಲಿ ಜಾತಿ ಭೇಧ ಮೇಲು ಕೀಳು ಯಾವುದು ಇಲ್ಲ. ಸ್ನೇಹಕ್ಕೆ ಉಳಿದ ಸಂಬಂಧಗಳ ಸಂಕೋಲೆಯು ಇಲ್ಲ. ಒಂದೊಮ್ಮೆ ಸ್ನೇಹಕ್ಕೆ ಬೆಲೆ ಕೊಡುವವನು ಉಳಿದೆಲ್ಲ ಸಂಬಂಧಗಳಿಗೆಂತಲೂ ಹೆಚ್ಚು ಸ್ನೇಹಿತರನ್ನು ಇಷ್ಟಪಡುತ್ತಾನೆ ಮತ್ತು ಸ್ನೇಹಿತರಿಗಾಗಿ ತನ್ನ ಜೀವನವನ್ನೇ ಬಲಿ ಕೊಟ್ಟ ಮತ್ತು ಬದಲಾಯಿಸಿದ ಅದೆಷ್ಟೋ ವ್ಯಕ್ತಿಗಳನ್ನು ನಾವು ಕಾಣುತ್ತೇವೆ.
ಸ್ನೇಹಕ್ಕೆ ಎಷ್ಟು ಜನ ಮಹಾನ್ ತ್ಯಾಗಗಳನ್ನು ಮಾಡಿದರೂ, ಸಹಾಯಹಸ್ತ ಚಾಚಿ ತಾವು ದಿವಾಳಿ ಆದರೂ ಇನ್ನೂ ಕೆಲವು ಕಡೆ ಸ್ನೇಹಿತರಲ್ಲೂ ಹಲವಾರು ಜನ ಮೋಸಗಾರರು, ಸಿಗಬೇಕಾದ ಸ್ಥಾನಮಾನಗಳನ್ನು ಕಸಿದುಕೊಳ್ಳುವವರು, ಸ್ನೇಹಿತರಿಗೆ ಎಲ್ಲೋ ಏನೋ ಒಳ್ಳೆಯದಾಗುತ್ತದೆ ಎಂದಿದ್ದರೆ ಅದನ್ನು ತಪ್ಪಿಸಿ ತಮಗೆ ಅದನ್ನು ದಕ್ಕಿಸಿಕೊಳ್ಳುವವರು ಕೂಡ ಇದ್ದಾರೆ. ಒಂದೆಡೆ ತನಗೆ ನೋವಾದರೂ ಪರವಾಗಿಲ್ಲ ನನ್ನ ಸ್ನೇಹಿತನಿಗೆ ಒಳ್ಳೆಯದಾಗಬೇಕು ಎಂದು ಅದೆಷ್ಟೋ ಜನ ತಾನು ಪ್ರೀತಿಸಿದ ಹುಡುಗಿಯನ್ನು ಕೂಡ ಬಿಟ್ಟುಕೊಟ್ಟವರಿದ್ದರೆ, ಇನ್ನೊಂದೆಡೆ ಆತ್ಮ ದ್ರೋಹಿಗಳು, ನಯ ವಂಚಕರು, ಮಿತ್ರದ್ರೋಹಿಗಳು, ಮೋಸಗಾರರು, ಕಪಟಿಗಳು, ಲಪಂಗರು, ಸ್ನೇಹಿತರೆಂದರೆ ಹೇಗಿರಬಾರದು ಅನ್ನುವಂತವರು ಈ ಜಗದಲ್ಲಿ ಇದ್ದೇ ಇದ್ದಾರೆ. ನಾನು ತುಂಬಾ ಒಳ್ಳೆಯವನು, ನಿನಗಾಗಿ ನಾನೇನು ಬೇಕಾದರೂ ಮಾಡಲು ಸೈ, ಒಟ್ಟಿನಲ್ಲಿ ನಿನ್ನ ಬದುಕು ಒಳ್ಳೆಯದಾದರೆ ಸಾಕು, ನಿನಗಾಗಿ ನಾನು ಈ ರೀತಿ ಕಷ್ಟ ಪಡುತ್ತಿದ್ದೇನೆ, ನಾನಾದರೇನು ನೀನಾದರೇನು ನಾವಿಬ್ಬರು ಒಂದೇ.. ಈ ರೀತಿ ಬಾಯಲ್ಲಿ ಬೊಗಳೆ ಬಿಡುತ್ತಾ ಕಾರ್ಯದಲ್ಲಿ ನೀನು ಮಾಡುವ ಹಲವಾರು ಹಿತ ಶತ್ರು ಮಿತ್ರದ್ರೋಹಿಗಳಿದ್ದಾರೆ. ಇದೊಂದು ನಮಗೆ ಎಚ್ಚರಿಕೆಯ ಕರೆ ಘಂಟೆ. ಕೆಲವು ಸಲ ಮನುಷ್ಯರನ್ನು ನಾವು ಆರಾಮವಾಗಿ ನಂಬಿ ಬಿಡುತ್ತೇವೆ. ಅವರು ನಮ್ಮ ತುಂಬಾ ಒಳ್ಳೆಯ ಮಿತ್ರರು ನಮಗೆ ಏನು ಬೇಕಾದರೂ ಸಹಾಯ ಮಾಡಬಲ್ಲರು ಎಂದು ಅವರ ಹಿಂದೆ ಅವರು ಹೇಳಿದಂತೆ ಕುಣಿಯುತ್ತಿರುತ್ತೇವೆ. ಆದರೆ ಅವರು ಇನ್ನೇನೋ ಲೆಕ್ಕಾಚಾರ ಮಾಡುತ್ತಿರುತ್ತಾರೆ. ಸ್ನೇಹಿತನ ರೂಪದಲ್ಲಿ ಬಂದು ಸಿರಿವಂತರು ಎಂದು ಬಿಂಬಿಸಿ, ಏನೂ ಇಲ್ಲದೆ ಮದುವೆಯಾದವರು ಅದೆಷ್ಟೋ ಜನ. ಬಳಿಕ ಅವರ ಬಾಳು ಶೂನ್ಯ!


ಈ ಹಿತ ಶತ್ರುಗಳನ್ನು ಗುರುತಿಸುವುದು ಬಹಳವೇ ಕಷ್ಟ. ನೇರವಾದ ಶತ್ರುಗಳಾದರೆ ಅವರು ನಮ್ಮ ಶತ್ರುಗಳು ಎಂದು ಅವರತ್ತ ನೋಡದೆ ಸುಮ್ಮನಿರಬಹುದು. ನಮ್ಮ ಸಂಸಾರದೊಳಗೆ ನುಸುಳಿ ನಮ್ಮ ಕುಟುಂಬಕ್ಕೂ ಬಂದು, ನಮ್ಮ ಸಂಬಂಧದೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದ್ದು, ಮನೆಗೊಮ್ಮೆ ನಮ್ಮಿಂದ ಸತ್ಯ ಹೊರಗೆ ಬಂದಾಗ ದೂರ ಓಡುವ ಈ ರೀತಿಯ ಅಮಾಯಕರನ್ನು ಮೋಸಗೊಳಿಸುವ ಹಿತಶತ್ರುಗಳಿಗೆ ಆ ದೇವರೇ ಶಿಕ್ಷೆ ಕೊಡಬೇಕು.
ಎದುರಿದ್ರು ಬಂದು ಗುದ್ದಾಡುವವನ ಬಳಿ ಸರಿಯಾದ ಕ್ರಮದೊಂದಿಗೆ ಗುದ್ದಾಡಬಹುದು. ಅದೇ ಹಿಂದಿನಿಂದ ಬಂದು ಚಾಕು ಹಾಕುವವನ ಬಳಿ ನಾವು ಅದು ಹೇಗೆ ತಾನೇ ಗುದ್ದಾಡಲು, ಮುದ್ದಾಡಲು ಸಾಧ್ಯ? ಬದುಕೊಂದು ಸಂತೆಯಂತೆ ಇಲ್ಲಿ ಉತ್ತಮವಾದ ವ್ಯಾಪಾರವನ್ನು ಮಾಡಿದವನು ಮಾತ್ರ ಲಾಭವನ್ನು ಪಡೆಯುತ್ತಾನಂತೆ. ಸುಳ್ಳು , ಮೋಸ, ವಂಚನೆ , ಆತ್ಮ ವಂಚನೆ, ನಾನೇ , ನನ್ನದೇ, ನನಗೇ ಬೇಕು ಇವೆಲ್ಲ ಅಂಗಾಂಗಗಳು ಸರಿ ಇರುವವರೆಗೆ ಮಾತ್ರ. ಮೇಲೊಬ್ಬನಿದ್ದಾನಲ್ಲ ಪ್ರತಿಯೊಂದನ್ನೂ ಸರಿಯಾಗಿ ಲೆಕ್ಕ ಹಾಕುತ್ತಾನೆ! ನಮ್ಮ ಒಳಿತು ಕೆಡುಕುಗಳ ಲೆಕ್ಕಬಿಡುತ್ತಾ? ಯಾವ ರೀತಿಯ ಶಿಕ್ಷೆಯನ್ನು ನಮ್ಮ ಬದುಕಿಗೆ ನೀಡಬೇಕೆಂದು ಲೆಕ್ಕಾಚಾರ ಮಾಡಿ ತಪ್ಪಿಲ್ಲದೆ ಬರೆದಿಡುತ್ತಾನೆ.
ಸುಳ್ಳು , ಮೋಸ, ವಂಚನೆ , ಕಪಟತನ ಇವುಗಳಿಂದ ನಾವು ಯಾರನ್ನು ಬೇಕಾದರೂ ವಂಚಿಸಬಹುದು. ನಮ್ಮನ್ನು ನಂಬಿದವರನ್ನು ವಂಚಿಸುವುದು ತುಂಬಾ ಸುಲಭ. ಏಕೆಂದರೆ ಅವರು ನಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿರುತ್ತಾರೆ. ಆದರೆ ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವನಿಗೆ ಅದೆಂದಿಗೂ ಉತ್ತಮವಾದ ದಾರಿ ಸಿಗಲು ಸಾಧ್ಯವಿಲ್ಲ. “ನಾಗರಹಾವು ನಾಗರಹಾವೇ ಕೇರೆ ಹಾವು ಕೇರೆ ಹಾವೇ” ಎಂಬ ಗಾದೆಯೊಂದು ತುಳುವಿನಲ್ಲಿದೆ. ಅಂದರೆ ಒಳ್ಳೆಯವನು ಎಂದಿಗೂ ಒಳ್ಳೆಯವನೇ ಕೆಟ್ಟವನು ಎಂದಿಗೂ ಕೆಟ್ಟವನೆ. ಕೆಟ್ಟವನನ್ನು ಒಳ್ಳೆಯವನಾಗಿ ಬದಲಾಯಿಸಲು ಸಾಧ್ಯವಿದೆ ಆದರೆ ಅವನ ಮನಸ್ಸು ಒಪ್ಪಬೇಕು ಅಷ್ಟೇ. ಅವನನ್ನು ಒಪ್ಪಿಸುವುದು ಸುಲಭದ ಮಾತಲ್ಲ.

ಪ್ರೀತಿ ಕರುಣೆ ಸ್ನೇಹ ಸಲುಗೆ ಇವೆಲ್ಲವೂ ಕೂಡ ಹಣದ ಮುಂದೆ ಏನೂ ಇಲ್ಲ. ಹಣದ ಜೊತೆ ಮನುಷ್ಯರಿಗೆ ಜೀವನದಲ್ಲಿ ಖುಷಿ ಪಡುವ ಒಂದು ಅಂಶವೂ ಇದೆ. ತನ್ನ ಸಂತಸಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಲು ರೆಡಿಯಾಗುತ್ತಾನೆ. ಇಂತಹ ಸಮಯದಲ್ಲಿ ಅದು ಉಳಿದವರಿಗೆ ಕೆಟ್ಟದೋ ಒಳ್ಳೆಯದೋ ಎಂಬುದನ್ನು ಆಲೋಚನೆ ಮಾಡಲು ಹೋಗುವುದಿಲ್ಲ. ಕಾರಣ ಯಾವುದೇ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಇತರರನ್ನು ಅನುಗಾಲಕ್ಕು ಬಲಿ ತೆಗೆದುಕೊಂಡಿರುತ್ತಾನೆ.

       ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಸೂಕ್ಷ್ಮ ಕೆಲಸ. ಆದರ ದ್ವೇಷ ಬೆಳೆಸುವುದೆಂದರೆ ತುಂಬಾ ಸುಲಭದ ಕೆಲಸ. ಸ್ನೇಹದ ಶತ್ರು ದ್ವೇಷ ಮತ್ತು ಅಪನಂಬಿಕೆ. ಎಲ್ಲಿ ಗಾಢವಾದ, ಬಿಡಿಸಲಾರದ ಬಂಧವನ್ನು ಹೊಂದಿರುವ ಸ್ನೇಹವಿರುತ್ತದೆಯೋ ಅಲ್ಲಿ ಇವೆರಡಕ್ಕೂ ಜಾಗವಿರುವುದೇ ಇಲ್ಲ. ಸ್ನೇಹಕ್ಕೆ ಮಿಗಿಲಾದ ಪದವು ಮತ್ತೊಂದಿಲ್ಲ. ಪರಿಪೂರ್ಣ ಸ್ನೇಹವೆಂದರೆ ಅದು ಬದುಕು. ಬದುಕಲ್ಲಿ ಅಪ್ಪಟ ಸ್ನೇಹವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಜೀವನ ಸಂಗಾತಿಯು ಉತ್ತಮ ಸ್ನೇಹಿತನಾಗಿದ್ದರೆ ಅಂತಹ ಜನರ ಬದುಕು ಪರಿಪೂರ್ಣವಾಗಿ ಜೀವಿಸಲ್ಪಡುತ್ತದೆ ಅಲ್ಲವೇ? ಏನಾದರೂ ಆಗಿರಲಿ ಪ್ರಪಂಚಕ್ಕೆ ಬಂದಿದ್ದೇವೆ, ನಾಲ್ಕು ದಿನ ಚೆನ್ನಾಗಿ ಬದುಕಿ ಎಲ್ಲಿಂದ ತೆರಳಲ್ಲಿ ಇದ್ದೇವೆ, ಏನಾಗದಿದ್ದರೂ ಪರವಾಗಿಲ್ಲ, ನಾವೊಂದು ನಾಲ್ಕು ಜನಕ್ಕೆ ಉತ್ತಮ ಸ್ನೇಹಿತರಾಗಿ ತೋರಿಸಿ ಮತ್ತೆ ಈ ಭೂಮಿಯ ಮೇಲಿಂದ ತೆರಳೋಣ ಅಲ್ಲವೇ? ನೀವೇನಂತೀರಿ?
----------------------------------


Leave a Reply

Back To Top