ಕಥಾ ಸಂಗಾತಿ
ನಾಗರಾಜ ಬಿ.ನಾಯ್ಕ
‘ತವರು ಬಳ್ಳಿ’
ಸುಮುಖನ ಕಾರು ವೇಗವಾಗಿ ಓಡುತ್ತಿತ್ತು. ಪ್ರತಿ ಹಬ್ಬ ಬಂದಾಗಲೂ ‘ಹಬ್ಬಕ್ಕೆ ಏನು ವಿಶೇಷ?’ ಎನ್ನುವ ಮಾತು ಕೇಳಿರದ ದಿನಗಳಿಲ್ಲ ಅತ್ತೆಯಿಂದ. ಅತ್ತೆ ತವರಿನ ಒಂದು ಬಳ್ಳಿಯಂತೆ. ಅತ್ತೆ ನೆನಪಿಸದ ದಿನಗಳಿಲ್ಲ. ಆದರೆ ಈಗ ಅತ್ತೆ ಇಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾರು ಎತ್ತಲೋ ಸಾಗುತ್ತಿತ್ತು. ಆದರೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದ. ಅದೆಷ್ಟು ತಿರುವುಗಳು ಹಾಗೆ ತಿರುವಿ ಹೋಗಿತ್ತು. ಎಲ್ಲಿಯೂ ಎಚ್ಚರ ತಪ್ಪಿ ಎಡವಿದ್ದಿಲ್ಲ. ಆದರೆ ಇಂದು ಕೈ ನಡುಗುತ್ತಿತ್ತು . ಅತ್ತೆಯ ಮುಖ ರಸ್ತೆಯುದ್ದಕ್ಕೂ ಕಾಣುತ್ತಿತ್ತು. ಅವಳು ಬಡತನದಿ ಹುಟ್ಟಿ ಮನೆಗೆ ಬೆಳಕಾದವಳು ಎನ್ನುತ್ತಿದ್ದ ಅಪ್ಪನ ನೆನಪಾಯಿತು. ತಿಂಗಳ ಹಿಂದೆ ಬಂದು ಹೋಗಿದ್ದ ಅತ್ತೆ ನೋಡಲು. ಅವಳೆಂದರೆ ಸುಮುಖನಿಗೆ ಒಂದು ತಾಯಿಯ ಅನುಬಂಧ. ತಾಯಿ ಜನ್ಮ ಕೊಟ್ಟಿದ್ದರೆ ಅತ್ತೆ ಬದುಕು ಕೊಟ್ಟಿದ್ದಳು. ಸಂಬಂಧದ ಅನುಬಂಧ ಕೊಟ್ಟಿದ್ದಳು. ಒಂದಿಷ್ಟು ಸಂದರ್ಭಗಳಿಗೆ ಸಾಕ್ಷಿಯಾಗಿದ್ದಳು. ಹಸಿವಿಗೆ ಅನ್ನ ನೀಡಿದ್ದಳು. ಕಲಿಕೆಗೆ ಧೈರ್ಯ ನೀಡಿದ್ದಳು. ಅವಳೊಡನೆ ಕಳೆದ ದಿನಗಳ ನೆನಪಾಯಿತು. ಬಾಲ್ಯದ ಮರಳಲ್ಲಿ ಕಟ್ಟಿದ ಮನೆಯ ನೆನಪಾಯಿತು. ತಾನು ತಿನ್ನುವ ರೊಟ್ಟಿಯ ಮುರಿದು ಅತ್ತೆ ಕೊಟ್ಟ ರೊಟ್ಟಿ ಚೂರಿನ ನೆನಪಾಯಿತು. ನೆನಪೆಂದರೆ ಹಾಗೆ ಅದೊಂದು ಒಂದರ ಹಿಂದೆ ಒಂದರಂತೆ ಬರುವಂತಹ ಮೋಡದಂತೆ.
‘ನೀನು ಬರುವವರೆಗೆ ಇಡುತ್ತೇವೆ’ ಅತ್ತೆಯ ಶವವನ್ನು ಎಂದಿದ್ದು ನೆನಪಾಯಿತು. ಮತ್ತಷ್ಟು ವೇಗ ಕಾರಿನದ್ದು ಹೆಚ್ಚಾಯಿತು. ಇನ್ನು ನೆನಪಿದೆ ಸುಮುಖನಿಗೆ ಅತ್ತೆ ತರುತ್ತಿದ್ದ ತಿಂಡಿಗಳು, ಬಟ್ಟೆಗಳು, ಭರವಸೆಗಳು, ಅತ್ತೆಯ ಬರುವಿಕೆ ಒಂದು ಸಂಭ್ರಮವಾಗಿ ಇರುತ್ತಿತ್ತು ಮನೆಗೆ. ಇಡೀ ಊರಿನ ಎಲ್ಲರ ಮನೆಯ ಕಥೆಯು ಅತ್ತೆಗೆ ಆಪ್ತ. ಅವರ ಮನೆಯಲ್ಲಿ ಏನು ವಿಶೇಷ ?ಇವರ ಮನೆಯಲ್ಲಿ ಯಾರ ಮದುವೆ? ಹೀಗೆ ಅತ್ತೆ ಮಾತಾಡದ ವಿಷಯವಿರಲಿಲ್ಲ. ಹೇಳದ ಅನುಭವದ ಪಾಠಗಳಿರಲಿಲ್ಲ. ಅವಳಲ್ಲಿನ ಮಣ್ಣಿನ, ನೀರಿನ, ತವರಿನ ಬಗ್ಗೆ ಇರುವ ಕಾಳಜಿ ಅಭಿಮಾನ ಋಣಕ್ಕೆ ತುಂಬಾ ಬಾರಿ ಸುಮುಖ ಹೆಮ್ಮೆ ಪಟ್ಟಿದ್ದಿದೆ. ಅದೇನೇ ಇದ್ದರೂ ತವರಿನ ನೀರಿನ ರುಚಿ ಬೇರೆ ಊರಿಗೆ ಬಾರದು ಎಂಬ ಮಾತನ್ನು ಎಷ್ಟು ಬಾರಿ ಅವಳಿಂದ ಕೇಳಿದ್ದ. ಮನೆಯ ಬೆಕ್ಕಿನಿಂದ ಹಿಡಿದು ಆಕಳು ,ಕರು ,ತೆಂಗಿನ ಮರ ,ಅಡಿಕೆ ಮರಗಳು, ಗಿಡ ಮರ ಬಳ್ಳಿಗಳು ಎಲ್ಲವೂ ಅತ್ತೆಯ ಮಾತುಗಳಾಗಿದ್ದು ಒಮ್ಮೊಮ್ಮೆ ಮಾತಿನ ಪ್ರತಿ ವಿಚಾರವೂ ಕಾಡಿದ್ದಿದೆ. ‘ಅತ್ತೆ ನೀ ಇಲ್ಲೇ ಉಳಿದುಬಿಡು’ ಎಂದಾಗ ನಕ್ಕು ಇಲ್ಲ ಹೋಗಲೇಬೇಕು ಮನೆಗೆ ಎನ್ನುತ್ತಿದ್ದಳು. ಊರಜಾತ್ರೆಗೆ ಅತ್ತೆ ಬರಲೇಬೇಕಿತ್ತು. ತೇರಿಗೆ ಬಾಳೆಹಣ್ಣು ಎಸೆಯಲೇಬೇಕಿತ್ತು. ಬಾರದಿದ್ದರೆ ಅವಳಿಗೊಂದು ಪಾಪಪ್ರಜ್ಞೆ ಕಾಡುತ್ತಿತ್ತು. ಅಪ್ಪ ಅಮ್ಮ ಇರುವವರಿಗೆ ಬಂದು ಹೋಗುವ ಅತ್ತೆಗೆ ಒಂದು ಅಸ್ತಿತ್ವವಿತ್ತು. ಬದಲಾಗದ ಸಂಬಂಧಗಳ ಮೇಲೆ ನಂಬಿಕೆ ಇತ್ತು. ಅಪ್ಪ ಅಮ್ಮನ ನಿಧನದ ನಂತರ ಅತ್ತೆ ಒಂಟಿಯಾದಂತೆ ಎನಿಸಿತು. ಇರುವ ಅಣ್ಣಂದಿರು ಆಪ್ತರೇ. ಎಲ್ಲರೊಡನೆ ಮಾತು ನಿಲ್ಲದ ಆಪ್ತತೆ ಅವಳದ್ದು. ಆದರೆ ಅವಳಿಗೆ ಅದೇನೋ ಕಾಡುತ್ತಿತ್ತು. ಹೀಗೆ ಕಾಡಿದಾಗಲೆಲ್ಲ ನೆನಪಾಗಿದ್ದು ಅವಳಿಗೆ ಸುಮುಖ. ಬಡತನದ ನಡುವೆ ಓದು ಕಲಿತು ಭರವಸೆಯಾಗಿದ್ದವ. ಎಷ್ಟೋ ಸಂದರ್ಭದಲ್ಲಿ ಅತ್ತೆ ನೀಡಿದ ನೆರವನ್ನ ಬಳಸಿ ಕಲಿತು ಮುಂದೆ ಬಂದವ.
ಅದೆಷ್ಟೋ ವೇಗವಾಗಿ ಸಾಗುತ್ತಿತ್ತು ಕಾರು .ಅತ್ತೆ ಕೊಟ್ಟ ಹಣದಿಂದ ಕೊಂಡ ಪುಸ್ತಕಗಳ ನೆನಪಾಯಿತು. ಕಲಿತದ್ದು ನೆನಪಾಯಿತು. ಸರ್ರನೇ ಬ್ರೇಕ್ ಹಾಕಿದ ನಿಲ್ಲಿಸಿದ ಕಾರು. ಓದಲು ಅತ್ತೆ ಹಣವಿಲ್ಲ ಓದು ಬಿಡುತ್ತೇನೆ. ಎಂದಾಗ ಬೈದು ನಾನು ಓದಿಸುತ್ತೇನೆ ಎಂದು ತಾನು ಮಡಿಕೆಯಲ್ಲಿ ಗರಿಗರಿಯ ನೋಟುಗಳನ್ನು ತೆಗೆದುಕೊಟ್ಟ ಅತ್ತೆ ನೆನಪಾಯಿತು. ಹಣವಿಲ್ಲ ಎನ್ನುವುದು ಓದು ಬಿಡಲು ಕಾರಣವಾಗಬಾರದು. ಬುದ್ಧಿ ಇರುವವರು ಓದಬೇಕು. ಓದುವಾಗ ಓದಬೇಕು. ಬಿಡಬೇಡ ಛಲವ ಎಂದು ಅತ್ತೆ ಹೇಳಿದ ಮಾತು ನೆನಪಿಗೆ ಬಂತು. ಆ ಹಣ ಅಂದು ಅತ್ತೆ ಕೊಡದಿದ್ದರೆ ಇಂದು ನಾನು ಎಲ್ಲಿ ಇರುತ್ತಿದ್ದೆ ಎಂದು ಯೋಚಿಸುತ್ತಿದ್ದ ಸುಮುಖ. ಇಂದು ತಾನು ಉತ್ತಮ ಉದ್ಯೋಗದಲ್ಲಿ ಇರಲು ಕಾರಣವೇ ಅತ್ತೆ ಎನ್ನುವ ನಿಲುವು ಅವನದಾಗಿತ್ತು.
ನನಗಾಗಿ ಅವರೆಲ್ಲ ಕಾಯುತ್ತಲೇ ಇದ್ದಾರೆ. ಅತ್ತೆಯನ್ನು ಕಳುಹಿಸಿಕೊಡಬೇಕು. ಈ ಜಗತ್ತಿನ ಋಣ ಅವಳದ್ದು ಮುಗಿಯಿತು. ಅನ್ನದ ಋಣ, ಮಣ್ಣಿನ ಋಣ ಎಲ್ಲವೂ ಉಸಿರಿನ ಮೇಲೆ ನಿಂತಿದೆ ಎಂದು ಅತ್ತೆ ಹೇಳಿದ ಮಾತಿನ ನೆನಪಾಯಿತು. ಮತ್ತೆ ಕಾರು ಚಾಲು ಮಾಡಿದ ಮತ್ತೆ ಹೊರಟ. ತವರು ಎಂದರೆ ಅತ್ತೆಗೆ ಅದೆಷ್ಟು ಜೀವವಾಗಿತ್ತು. ಸಂಬಂಧಗಳ ಎಳೆಗಳನ್ನು ಜೋಡಿಸಿ ಖುಷಿಪಡುತ್ತಿದ್ದ ಅವಳ ಮಾತು ನೆನಪಿಗೆ ಬರುತ್ತಿತ್ತು. ಅತ್ತೆ ಬೆಳೆಸಿದ ಅದೆಷ್ಟು ಗಿಡ ಮರಗಳು ಇಂದು ಎತ್ತರಕ್ಕೆ ಬೆಳೆದು ನಿಂತಿದ್ದು ನೆನಪಾಯಿತು. ಅತ್ತೆ ತೋರಿಸುತ್ತಿದ್ದ ಮರಗಳ ನೆನಪಾಯಿತು. ಇದು ನಾನು ನೀರು ಹಾಕಿದ ಮರ ಎಂಬುದು ತೋರಿದಂತಾಯಿತು. ಆ ಮಾವಿನ ಗಿಡ ನಾನು ಗೆಳತಿಯರ ಮನೆಯಿಂದ ತಂದು ನೆಟ್ಟಿದ್ದೆ. ಈಗ ಅದಕ್ಕೆ ರಾಶಿ ಕಾಯಿಗಳು ಬಿಡುತ್ತವೆ. ಅದರ ಹಣ್ಣು ತುಂಬಾ ರುಚಿ ಎಂಬ ಮಾತಿನ ನೆನಪು ಬಂತು. ನೆನಪುಗಳಲ್ಲಿ ಜೀವಂತವಾಗಿ ಉಳಿದಂತೆ ಅತ್ತೆಯ ನೂರಾರು ನೆನಪುಗಳು ದಾರಿ ಉದ್ದಕ್ಕೂ ಬರುತ್ತಲೇ ಇತ್ತು .ಅಷ್ಟರಲ್ಲಾಗಲೇ ಸುಮುಖನ ಕಾರು ಅತ್ತೆಯ ಸ್ವಂತ ಮನೆಯ ಸಮೀಪ ಬಂದು ನಿಂತಿತು.
ಯಾರೋ ಬಂದರು ಸುಮುಖನ ಕರೆದುಕೊಂಡು ಹೋದರು. ಅಪ್ಪ ಅಮ್ಮ ಎಲ್ಲರೂ ಕುಳಿತಿದ್ದರು. ನಿಶ್ಯಬ್ದ ಮೌನ ಅಲ್ಲಿ ಆವರಿಸಿತ್ತು. ಅತ್ತೆಯ ದೇಹ ಮಾತ್ರ ನಿರ್ಜೀವವಾಗಿ ಮಲಗಿತ್ತು. ತವರಿನ ಬಳ್ಳಿಯಂತೆ ತೋರುತ್ತಿದ್ದ ಅವರ ಮುಖದಲ್ಲಿ ಈಗ ನಗುವಿರಲಿಲ್ಲ. ಮಾತಿರಲಿಲ್ಲ ಅಂತ್ಯದ ಕಾರ್ಯಕ್ರಮಗಳು ಶುರುವಾದವು. ಕತ್ತಲಾಗಿತ್ತು. ಅತ್ತೆಯ ಕಾಲುಗಳಿಗೆ ಸುಮುಖ ಕೊನೆಯ ಬಾರಿ ನಮಸ್ಕಾರ ಮಾಡಿದ. ಅಂತ್ಯಕ್ರಿಯೆಗಳು ಮುಗಿದವು. ಅತ್ತೆ ಎಂಬ ಜೀವಂತ ತವರು ಬಳ್ಳಿ ತವರ ಕಡೆ ನೋಡುತ್ತಾ ನೆನಪಿಸಿಕೊಳ್ಳುತ್ತಾ ಪಂಚಭೂತಗಳಲ್ಲಿ ಲೀನವಾಯಿತು. ತನ್ನ ಮಕ್ಕಳನ್ನು ಕೈ ಬಿಡಬೇಡಿ. ಅವರು ನನ್ನ ಪ್ರತಿರೂಪ. ಸಂಬಂಧಗಳ ಎಳೆಯಾಗಿ ಅವರನ್ನು ಇಟ್ಟಿರುವೆ. ಅವರು ತಪ್ಪಿದಾಗ ತಿದ್ದಿ. ಅವರ ಜೊತೆ ನನ್ನ ತವರು ಇರಲಿ ಎಂದು ಅತ್ತೆ ಹೇಳಿದ ಮಾತಿನ ನೆನಪಾಯಿತು.
ಇದ್ದಾಗ ಉಸಿರು ಪ್ರೀತಿಸುವ ನಾವುಗಳು ಸತ್ತ ಮೇಲೆ ಅಮೂರ್ತವಾಗುವ ಅಸ್ತಿತ್ವದ ವಾಸ್ತವದ ಅರಿವಾಯಿತು. ಅತ್ತೆ ಎನ್ನುವ ಜೀವಿತದ ವ್ಯಕ್ತಿತ್ವ ತವರು ಬಳ್ಳಿಯಾಗಿ ಎಲ್ಲೆಲ್ಲೋ ಹಬ್ಬಿದಂತೆ ಕಾಣಿಸಿತು. ಅವಳೇ ಬೆಳೆಸಿದ ಗಿಡಮರಗಳಲ್ಲಿ ಅತ್ತೆಯೇ ಮಾತನಾಡಿದಂತೆ ಎನಿಸಿತು. ಇದ್ದಾಗ ಅನುಭವಿಸುವ ಅನುಬಂಧದ ಕಾಳಜಿ, ಕಟ್ಟಿ ಕೊಡುವ ಬದುಕು ,ಆಡಿದ ಮಾತುಗಳು ಹೇಳಿದ ಕಥೆಗಳು ,ಪ್ರೀತಿಗೆ ಭರವಸೆಗೆ ಕಾರಣವಾದ ಸಾದೃಶ್ಯಗಳು ಸುಮುಖನಲ್ಲಿ ಜೀವಂತವಾಗಿ ಉಳಿದವು. ಅತ್ತೆ ಎನ್ನುವ ಹಿರಿ ಜೀವ ಕಲಿಸಿದ ಬದುಕು ಪ್ರೀತಿಸುವ ಪಾಠ ತವರು ಬಳ್ಳಿಯಂತೆ ಹಬ್ಬುತ್ತಲೇ ಇತ್ತು. ಸಾವಿಲ್ಲದೇ ನೆನಪಿನಲ್ಲಿ ಮತ್ತೆ ಮತ್ತೆ ದಾರಿಯುದ್ದಕ್ಕೂ…,………
ನಾಗರಾಜ ಬಿ.ನಾಯ್ಕ
ತವರ ಬಳ್ಳಿ ಹಬ್ಬುವಂತೆ.. ಸಂಬಂಧಗಳ ಚಿತ್ರಣ ಅತ್ಯಂತ ಆಪ್ತವಾಗಿ ಮೂಡಿ ಬಂದಿದೆ. ಹೆಣ್ಣು ಮಕ್ಕಳಿಗೆ ತವರು ಮತ್ತು ತವರೂರಿನ ಬಗ್ಗೆ ಪ್ರೀತಿ ಅಕ್ಕರೆ ಜಾಸ್ತಿ. ಪ್ರೀತಿಯ ಸಂಬಂಧಗಳೇ ಅವಳ ಆಸ್ತಿ. ಸುಮುಖನ ಮನಸ್ಸಿನಲ್ಲಿ ಮೂಡುವ ಪ್ಲ್ಯಾಷ ಬ್ಯಾಕ್ ಮಿಂಚಿನ ವೇಗದಿ ಸಾಗಿದೆ. ಒಂದೇ ಗುಟುಕಿಗೆ ಓದಿಸಿಕೊಂಡು ಹೋಗುತ್ತದೆ ಸಾವಿನೊಳಗಿನ ಮೌನ..ಮೌನದೊಳಗಿನ ಮಾತು .. ಮನತಟ್ಟುವಂತೆ ಮನಮುಟ್ಟುವಂತೆ… ಕಾರಿನ ವೇಗದಂತೆ ಸಾಗುತ್ತದೆ.
ಓದುವವರ ಮನಸ್ಸಿನ ನೆನಪಿನ ಬುತ್ತಿಯನ್ನು ಬಿಚ್ಚುತ್ತದೆ .
ನಾಗರಾಜ ಜಿ. ಎನ್. ಬಾಡ
ಕಥೆ ಇಷ್ಟ ಆಯಿತು.ಅಭಿನಂದನೆಗಳು ತಮಗೆ
ಸಂಬಂಧಗಳಲ್ಲಿ ಅತ್ಯಾಪ್ತವಾಗಿ ಕಂಡುಬರುವುದು ಅತ್ತೆಯ ಆಪ್ತತೆ…ಅತ್ತೆ ಯಾವತ್ತಿಗೂ ತವರಿನ ಸಿರಿಯಾಗಿ ಗೋಚರಿಸುತ್ತಾರೆ. ಇಂತಹ ಅತ್ತೆಯ ಅಕ್ಕರೆ ಕೆಲವೊಮ್ಮೆ ವಾಸ್ತವವಾಗಿ ಕಂಡು ಬರುತ್ತದೆ. ನವಿರಾದ ನಿರೂಪಣೆ ಈ ಕಥೆ(ವಾಸ್ತವ) ಯ ಜೀವಾಳ..ಅಭಿನಂದನೆಗಳು ಗೆಳೆಯ