ಮಾರುತೇಶ್ ಮೆದಿಕಿನಾಳ ಕವಿತೆ-ಎಲ್ಲವೂ ಶೂನ್ಯವಿಲ್ಲಿ

ಐತೆಂದರೆ ಐತೆ ಇಲ್ಲವೆಂದರೆ ಇಲ್ಲ ಎಲ್ಲವೂ ಶೂನ್ಯವಿಲ್ಲಿ
ಯಾವುದು ಶಾಶ್ವತವಲ್ಲ ಇದರರಿವು ನಮಗಿರಲಿ
ಕಣ್ಣಿಗೆ ಕಂಡಿದ್ದು ಮಂಗಮಾಯವಾಗುವುದು ಗೊತ್ತಿರಲಿ
ಆಳಿದ ರಾಜಮಹಾರಾಜರು ಅಳಿದ ಇತಿಹಾಸ ತಿಳಿ!

ಹೇ ನರನೇ ನಾನು ನನ್ನದೆನ್ನದಿರು ಯಾವುದೂ ಸ್ಥಿರವಲ್ಲ
ನಿನ್ನ ಕಣ್ಣೆದುರೆ ಕಾಣುತ್ತಿದೆ ಸತ್ಯವದು ಸುಳ್ಳಲ್ಲ
ಹಣ ಆಸ್ತಿ ಅಂತಸ್ತು ಭೂಮಿ ಸೀಮೆ ಯಾರ ಸ್ವತ್ತಲ್ಲ
ಸುಮ್ಮನೆ ನೀನು ಸ್ಥಾನಮಾನಕ್ಕೆ ಬಡಿದಾಡುವೆಯಲ್ಲ!

ಬುದ್ಧ ಬಸವ ಅಂಬೇಡ್ಕರ್ ರು ಜಗತ್ತಿಗೆ ಸತ್ಯ ಸಾರಿದರು
ಮನಸುಳ್ಳ ಮನುಷ್ಯರಿಗೆ ಬದುಕುವ ಪರಿ ತಿಳಿಸಿದರು
ನಾವೆಲ್ಲರೂ ಒಂದೇ ಒಬ್ಬರಿಗೊಬ್ಬರು ಅರಿತು ಬಾಳಬೇಕೆಂದರು
ಆದರೆ ಅವರವರ ಸ್ವಾರ್ಥಕ್ಕೆ ಒಂದಾಗದಿರುವರು!

ಏನು ಮಾಡಿದರೇನು ಮನುಜ ಮರಣ ತಪ್ಪುವದೇನು
ಸಮಯದ ಚಕ್ರ ತೋರುತ್ತಿದೆ ಶೂನ್ಯವನ್ನು
ಶೂನ್ಯಕಾರವಾಗಿ ಸುತ್ತುತ್ತಿವೆ ಗ್ರಹಗಳು ಸೂರ್ಯನನ್ನು
ಸಾಮಾಜಿಕ ತತ್ವ ಮರೆತು ನಾನು ನನ್ನದೆನ್ನದಿರು ನೀನು!


Leave a Reply

Back To Top