ಕಾವ್ಯ ಸಂಗಾತಿ
ಮಧು ವಸ್ತ್ರದ್
ವೀರಕೇಸರಿ ವಿವೇಕಾನಂದ
ವಿಶ್ವನಾಥ ಭುವನೇಶ್ವರಿಯ ಸುತ ಅಸಾಮಾನ್ಯ ನಾಯಕ ನರೇಂದ್ರನಾಥ ದತ್ತ
ತಾಯಿ ಶಾರದೆ ಗುರು ಪರಮಹಂಸರ ಪ್ರಭಾವಕೆ ಒಲಿದು ನಡೆದರು ಅಧ್ಯಾತ್ಮದತ್ತ
ಭವ್ಯ ಭಾರತದ ದಿವ್ಯ ಸಂಸ್ಕೃತಿಯನು ವಿಶ್ವದಲಿ ಎಲ್ಲೆಡೆ ಅರುಹಿದ ಹೆಮ್ಮೆಯ ಪುತ್ರ
ಹಿಂದೂಸ್ಥಾನದ ಊರ್ಧ್ವಗಮನ ಹಿರಿಗುರುವಿನ ನಮನವೇ ಇವರ ಧ್ಯೇಯ ಮಂತ್ರ
ನೀಡಿದರು ನಾಡಿನ ಯುವ ಜನತೆಗೆಲ್ಲ ಸುಜ್ಞಾನ ಸ್ಪೂರ್ತಿಯ ಜಾಗೃತ ಸ್ಪರ್ಶ
ಬೆಳೆಸುತೆಲ್ಲರ ಮನದಿ ಆತ್ಮವಿಶ್ವಾಸ ತಾವಾದರು
ಅಧ್ಯಾತ್ಮದ ದಿವ್ಯಾಮೃತ ಕಳಶ
ಏಳಿ ಎದ್ದೇಳಿ ಸಿಂಹಗಳೇ,ಬಲಾಢ್ಯರಾಗಿ ಬೆಳೆದು ನಿರ್ಭೀತರಾಗಿರೆಂದ ಕ್ರಾಂತಿಕಾರಿ
ಶಕ್ತಿ ಸಂಜೀವಿನಿಯ ಭೋಧಿಸಿ ಯುವಕರ ಮನ ಗೆದ್ದ ಮೇರುವ್ಯಕ್ತಿತ್ವದ ಸುವಿಚಾರಿ
ಶಿರದಲಿ ವಿವೇಕ ಮನದಲಿ ಆನಂದವ ಹೊಂದಿದ ಪ್ರಭಾವಶಾಲಿ ಅಪ್ರತಿಮ ವಾಗ್ಮಿ
ಸಾಗರದಾಚೆಯ ನಾಡಲೂ ಹಿಂದುತ್ವ ಭ್ರಾತೃತ್ವದ ಶ್ರೇಷ್ಠತೆ ಸಾರಿದ ದೇಶಪ್ರೇಮಿ
ಪೂರ್ವದ ಅಧ್ಯಾತ್ಮಶಕ್ತಿಯೊಳು ಪಶ್ಚಿಮದ ನವ ಸಂಕಲ್ಪವ ಮೇಳೈಸಿದ ಮಾನವಂತ
ವಿದೇಶಿ ವನಿತೆ ಮಾರ್ಗರೆಟ್ ಳನು ಸಹೋದರಿ ನಿವೇದಿತಾಳನಾಗಿಸಿದ ಧೀಮಂತ
ಮೂಢತೆ ಬಿಟ್ಟು ಮಾಡಿ ಮಡಿಯಿರೆಂಬ ಕರೆಯಿತ್ತ ತೇಜಸ್ವಿ ವೀರಕೇಸರಿ
ವಿವೇಕಾನಂದರ ಸ್ಮಾರಕದಿಂದಲೇ ವಿಶ್ವವಿಖ್ಯಾತಿ ಹೊಂದಿ ಮೆರೆದಿದೆ ಕನ್ಯಾಕುಮಾರಿ
ಕೈಯಲಿ ಭಗವದ್ಗೀತೆ ಮೈಯಲಿ ಕಾವಿ ಉಡುಪು ಧರಿಸಿದ ಶಾಂತ ಮೂರ್ತಿ
ದಶ ದಿಕ್ಕುಗಳಲೂ ಜ್ಞಾನವನು ಹಬ್ಬಿಸಿ ಮೆರೆಸಿದರು ಹಿಂದೂಸ್ಥಾನದ ಗೌರವ ಕೀರ್ತಿ.
ಮಧು ವಸ್ತ್ರದ್