ಡಾ.ಸುಮತಿ ಪಿ ಅವರ ಲೇಖನ “ಸ್ವಾಮಿ ವಿವೇಕಾನಂದರ ಜನ್ಮದಿನ -ಯುವ ದಿನ”

ಇಂದು ಜನವರಿ 12,ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ,ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿದು. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವಕರ ಅಗಾಧ ಶಕ್ತಿ, ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಅವರ ಸಹಜ ಪ್ರಜ್ಞೆಯನ್ನು ಗುರುತಿಸಿ, ಗೌರವಿಸಿ, ಗುರುತರ ಗುರಿಯತ್ತ ಕೊಂಡೊಯ್ಯುವ ಪ್ರಕ್ರಿಯೆಗೆ ಪ್ರಭೆ ತಂದ ವಿಶಿಷ್ಟ ದಿನ.ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಅಂದಿನ ಚಿಂತನೆಗಳು, ಸಂದೇಶಗಳು ಇಂದಿಗೂ ಪ್ರಸ್ತುತ.

ಸುಭದ್ರ ದೇಶದ ನಿರ್ಮಾಣದಲ್ಲಿ  ಯುವಕ ಯುವತಿಯರು ಅಂದರೆ ಯುವಶಕ್ತಿಯು ದೇಶದ ಆಸ್ತಿ . ಅತ್ಯಮೂಲ್ಯ ಮಾನವ ಸಂಪತ್ತೇ ಯುವಜನತೆ.ಯುವಶಕ್ತಿ ಮಾತ್ರ ಯಾವುದೇ ರಾಷ್ಟ್ರವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬಲ್ಲದು. ಹಾಗಾಗಿ ಯುವಜನತೆ ದೇಶದ ಶಕ್ತಿಯಾಗಬೇಕಾಗಿದೆ. ರಾಷ್ಟ್ರದ ಪ್ರತಿಯೊಬ್ಬ ಯುವಕನು ರಾಷ್ಟ್ರದ ಪ್ರಗತಿಪರ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಅವರು ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗುತ್ತದೆ.ಹಾಗೆ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

ಯುವಕರು ಬದಲಾವಣೆಯನ್ನು ತರಬಲ್ಲ ವಯಸ್ಸಿನಲ್ಲಿರುವುದರಿಂದ ಅವರನ್ನು” ರಾಷ್ಟ್ರ ನಿರ್ಮಾತೃಗಳು” ಎಂದೂ ಕರೆಯುತ್ತಾರೆ.
“ಯುವಕರೆಂದರೆ ಹಿಡಿ ಉಪ್ಪು” ಇದ್ದ ಹಾಗೆ.ಉಪ್ಪು ನಮ್ಮ ಆಹಾರದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.ಅಂತೆಯೇ ಜೀವನದಲ್ಲಿ ಉಪ್ಪಿನ ಪಾತ್ರವು ನಮ್ಮ ಯುವಕರದಾಗಿದೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ.

ನಮ್ಮ ರಾಷ್ಟ್ರದ ಚೇತನದಂತಿದ್ದ ಸ್ವಾಮಿ ವಿವೇಕಾನಂದರು ನಮ್ಮ ಯುವ ಜನಾಂಗಕ್ಕೆಸಾರ್ವಕಾಲಿಕ ಪ್ರೇರಣೆಯಾಗಿದ್ದಾರೆ. ಅವರೂ ಕೂಡ ಯುವಶಕ್ತಿಯಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದರು. “ನನಗೆ ಬಲಿಷ್ಟ ಹತ್ತು ಜನ ಯುವಕರನ್ನು ಕೊಟ್ಟರೆ ಇಡೀ ದೇಶವನ್ನೇ ನಡುಗಿಸಬಲ್ಲೆ” ಎಂದು ಗುಡುಗಿದವರು.
ಆದ್ದರಿಂದಲೇ ಅವರು “ಎದ್ದೇಳಿ ಯುವಕರೆ. ನಿಮ್ಮ ಗುರಿಯನ್ನು ತಲುಪುವವರೆಗೂ ಎಲ್ಲಿಯೂ ನಿಲ್ಲದಿರಿ” ಎಂದು ಯುವಕರ ತಲೆಯಲ್ಲಿ ಕ್ರಾಂತಿಕಾರಿ ವಿಚಾರವನ್ನು ಬಿತ್ತಿದರು.

“ಕಣ್ಣುಗಳಲ್ಲಿ ವೈಭವದ ಕನಸು, ಮನಸ್ಸಿನಲ್ಲಿ ಬಿರುಗಾಳಿಯ ವೇಗ ಇರಬೇಕು..” ಹೀಗೆ ಹೃದಯದಲ್ಲಿ ಏಳುತ್ತಿರುವ ಏರಿಳಿತಗಳು, ಪರಿವರ್ತನೆಯ ದಾಹ, ಅದಮ್ಯ ಸಾಹಸ, ಸ್ಪಷ್ಟ ಸಂಕಲ್ಪ,ಗೈಯುವ ಇಚ್ಛೆ, ಇದರ ಹೆಸರೇ ಯುವಾವಸ್ಥೆ ಎಂದು ಹೇಳಬಹುದೇನೋ.

ಸ್ವಾಮಿ ವಿವೇಕಾನಂದರು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವದು ಅತ್ಯಂತ ಮಹತ್ವದ್ದೆಂದು ತಿಳಿದಿದ್ದರು. ಅವರು ಒಂದು ವೇಳೆ ನಮ್ಮ ಯುವಕರು ತಮ್ಮ ಅಂತಃಶಕ್ತಿಯನ್ನು ದೇಶದ ಪ್ರಗತಿಗಾಗಿ ವಿನಿಯೋಗಿಸಿದಲ್ಲಿ, ನಮ್ಮ ರಾಷ್ಟ್ರವು ಅತ್ಯಂತ ಉನ್ನತಿಯತ್ತ ಸಾಗಬಹುದು ಎಂದಿದ್ದಾರೆ .ವಿಶ್ವದಲ್ಲಿ ನಡೆದಂಥ ಎಲ್ಲಾ ಮಹತ್ವಪೂರ್ಣ ಬದಲಾವಣೆಗಳೂ ಯುವಜನರ ಆಸ್ಥೆ ಹಾಗೂ ಬಲಿದಾನಗಳಿಂದಲೇ ಸಾಧ್ಯವಾದಂಥವು.
ಇತಿಹಾಸದಲ್ಲಿ ಯುವಕರು ತಮ್ಮ ಶಕ್ತಿಯ ಪತಾಕೆಯನ್ನು ಹಾರಿಸಿದ ಅನೇಕ ಸಂದರ್ಭಗಳಿವೆ. ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದಾಗ,ಅದರಲ್ಲಿ ಅನೇಕ ಯುವಕರು ಕೊಡುಗೆ ನೀಡಿದರು. ಅವರ ಸಕ್ರಿಯ ಕೊಡುಗೆಯಿಂದಾಗಿ ದೇಶವು ಅಂದು ಸ್ವತಂತ್ರವಾಯಿತು.
 ನಮ್ಮ ಯುವಶಕ್ತಿಯು ದೇಶದ ಅದೃಷ್ಟ ಹಾಗೂ ಅದರ ಚಿತ್ರಣವನ್ನೇ ಬದಲಾಯಿಸಬಲ್ಲ ಸಾಮಾರ್ಥ್ಯ ಹೊಂದಿದೆ. ಒಂದು ಹೊಸ ಪ್ರತಿಬಿಂಬವನ್ನೇ ತೋರಿಸುವಂಥ ಯೋಗ್ಯತೆಯನ್ನು ಹೊಂದಿದೆ ಎಂದಿದ್ದಾರೆ ವಿವೇಕಾನಂದರು.ಅನುಭವಿಗಳ ಮುಂದಾಳುತ್ವವು ನಮ್ಮ ಯುವಕರ ಧನಾತ್ಮಕ ಅಂತಃಶಕ್ತಿಯನ್ನು ರಾಷ್ಟ್ರದ ಹಿತಕ್ಕಾಗಿ ವಿನಿಯೋಗಿಸಲು ಪ್ರೇರಣೆಯನ್ನು ಕೂಡ ನೀಡುತ್ತದೆ. ಆದ್ದರಿಂದ ಇಂದಿನ ನಮ್ಮ ಯುವಕರು ರಾಷ್ಟ್ರದ ಎದುರು ಎಷ್ಟೇ ಸವಾಲುಗಳಿದ್ದರೂ ಅವುಗಳನ್ನು ತಾವು ಅತ್ಯಂತ ಧೈರ್ಯದಿಂದ ಎದುರಿಸಬಲ್ಲೆವೆಂಬ ಸಂಕಲ್ಪವನ್ನು ಮಾಡಬೇಕಾಗಿದೆ.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ ಅತ್ಯಂತ ಹೆಚ್ಚು ಎಂಬುವುದು ತಿಳಿದು ಬರುತ್ತದೆ.ವಿಶ್ವದಲ್ಲಿ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಪಡೆದಂಥ  ಭಾರತ ದೇಶದಲ್ಲಿ ಉದ್ಯೋಗದಲ್ಲಿರುವ ಯುವಕರ ಸಂಖ್ಯೆಯೂ ಹೆಚ್ಚೇ ಆಗಿರುವುದು. ಹೀಗಾಗಿ ಭಾರತ ದೇಶವು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಎಂದೂ ಹೇಳಬಹುದು.

“ಯುವಕರೆಂದರೆ ಪರಮಾಣು ಶಕ್ತಿಯಿದ್ದಂತೆ.” ಅದರ ಧನಾತ್ಮಕವಾದಂತಹ ಉಪಯೋಗವನ್ನು ಮಾಡಿಕೊಂಡರೆ ನಮ್ಮ ದೇಶಕ್ಕೆ ಉಪಯುಕ್ತವಾಗುವಂತಹ ಶಕ್ತಿ ಉತ್ಪನ್ನವಾಗುತ್ತದೆ. ಆದರೆ ಅದರ ಪ್ರತಿಕೂಲ ಉಪಯೋಗವನ್ನು ಮಾಡಿಕೊಂಡದ್ದೇ ಆದರೆ ಪರಮಾಣು ಬಾಂಬ್ ಕೂಡ ತಯಾರಾಗಬಹುದು!.ಇದಕ್ಕೆ ಪ್ರಸ್ತುತ ನಮ್ಮ ದೇಶದಲ್ಲಿ ನಡೆಯುವಂತಹ ಕೆಲವು ವಿಧ್ವಂಸಕ ಕೃತ್ಯಗಳೇ ಜೀವಂತ ಸಾಕ್ಷಿ.
ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ಯುವಶಕ್ತಿಯ ಕೊಡುಗೆ ನಿರ್ಣಾಯಕ, ಅಲ್ಲಿಯ ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇಂದು ಅಭಿವೃದ್ಧಿಶೀಲ ರಾಷ್ಟಗಳಷ್ಟೇ ಅಲ್ಲದೆ, ಮುಂದುವರಿದ ದೇಶಗಳೂ ಕೂಡ ಈ ಯುವಶಕ್ತಿಯನ್ನು ಒಂದು ಸಂಪತ್ತೆಂದು ಪರಿಗಣಿಸಿವೆ. ದೇಶದ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಂಡು ಎಲ್ಲೆಡೆಯೂ ದೃಷ್ಟಿ ಹಾಯಿಸಿದರೆ ಪ್ರತಿಯೊಂದು ಕ್ಷೇತ್ರದ ಅದ್ಭುತ ಪ್ರಗತಿಯ ಹಿಂದೆಯೂ ಯುವಜನರ ಸಾಧನೆ ಎದ್ದು ಕಾಣುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸೆಟೆದು ನಿಂತು, ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಿದ ನಮ್ಮ ಸಹೋದರರನ್ನು ಮರೆಯಲಾದೀತೆ?

 ಆದರೆ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ಯುವಶಕ್ತಿಯ ಬಳಕೆ ಇನ್ನೂ ಆಗಬೇಕಾದ ಅಗತ್ಯ ತುಂಬಾ ಇದೆ. ‘ಹಳೆ ಬೇರು ಹೊಸ ಚಿಗುರು’ ಸೇರಿಕೊಂಡು ಅಭಿವೃದ್ಧಿಯ ಅಭಿಯಾನ ಆರಂಭವಾಗಬೇಕಾಗಿದೆ. ವರ್ತಮಾನದಲ್ಲಿ ನಿಂತು ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಅಲ್ಲಿಯೂ ಯುವಜನಾಂಗದ ಸಾಧನೆಯೇನೂ ಕಡಿಮೆ ಇಲ್ಲ. ಪ್ರಪಂಚದಲ್ಲಿ ಆಗಿರುವ ಕ್ರಾಂತಿಗಳು, ಸಂಶೋಧನೆಗಳು, ಹೊಸತನದ ಹುಡುಕಾಟಗಳು, ಅನ್ವೇಷಣೆ, ಆವಿಷ್ಕಾರಗಳು-ಹೀಗೆ ಎಲ್ಲ ರಂಗಗಳಲ್ಲೂ ಇವರ ಉತ್ಸಾಹ, ಪ್ರಾಮಾಣಿಕತೆ ಹಾಗೂ ಸಾಹಸಗಳೇ ದೇಶಗಳ ನಿಜವಾದ ಬಂಡವಾಳವಾಗಿದೆ. ಯುವಕರೇ ದೇಶದ ಶಕ್ತಿ. ಇವರು ತಮ್ಮ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಉಪಯೋಗಿಸಿಕೊಂಡು, ಸೃಜನಶೀಲತೆಯಿಂದ ಮುಂದುವರಿದರೆ ದೇಶದ ಸಂಪತ್ತಾಗುತ್ತಾರೆ. ಇವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ ಎಂಬ ಮಾತು ಚಿರಸತ್ಯ. ಶಕ್ತಿಶಾಲಿ, ಉತ್ಸಾಹಿ, ಚೈತನ್ಯಯುಕ್ತ ಯುವಜನರಿಂದಲೇ ನಾಡುಕಟ್ಟುವ ಕಾರ್ಯವಾಗಬೇಕು.

*ಯುವಶಕ್ತಿ ಮತ್ತು ಸಮಾಜ*

ಯುವಶಕ್ತಿ ಅಥವಾ ಯುವಜನತೆ ಸಮಾಜದೊಡನೆ ಒಂದು ಅರ್ಥಪೂರ್ಣ ಸಂಬಂಧವನ್ನು ಹೊಂದಿರಬೇಕು. ಈ ವಿಚಾರದಲ್ಲಿ ವಿವೇಕಾನಂದರ ಮಾರ್ಮಿಕವಾದ ಮಾತಿಲ್ಲಿ ನೆನಪಾಗುತ್ತದೆ ”ಈ ನರಕಸದೃಶ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಹೃದಯದಲ್ಲಿ ಒಂದು ದಿನದ ಮಟ್ಟಿಗಾದರೂ ಸಂತೋಷ ಮತ್ತು ನೆಮ್ಮದಿಯನ್ನು ತರಲು ಸಾಧ್ಯವಾದರೆ ಅದೊಂದೇ ಸತ್ಯ. ಸಾಂತ್ವನದ ನುಡಿ, ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ಪರಿಪಾಲನೆ, ಶುದ್ಧ ನೈತಿಕ ಜೀವನದ ಮೂಲಕವೇ ಸಮಾಜಕ್ಕೆ ನಾವು ಅಪಾರ ಸೇವೆ ಸಲ್ಲಿಸಬಹುದು” ಎಂಬುವುದು.ಹೀಗೆ ತಮ್ಮನ್ನು ಕಡೆಗಣಿಸದೆ ಸಮಾಜದ ಹಿತವನ್ನು ಮನಸ್ಸಿನಲ್ಲಿಟ್ಟು­ಕೊಂಡು ಆದರ್ಶ ಜೀವನವನ್ನು ನಡೆಸಲು ಯುವಜನತೆ ಸ್ವಾಮಿ ವಿವೇ­ಕಾನಂದರಿಂದ ಬಹಳಷ್ಟು ಕಲಿಯುವುದಿದೆ.

ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು ಬೋಧನೆಗಳು ಇಂದಿನ ಯುವಜನತೆಗೆ ಹೆಚ್ಚು ಪ್ರಸ್ತುತವಾಗಿವೆ. ಅವರ ಸ್ವಾವಲಂಬನೆಯ ಸಂದೇಶ, ಎಲ್ಲಾ ಧರ್ಮಗಳ ಏಕತೆ ಮತ್ತು ಶಿಕ್ಷಣದ ಮಹತ್ವ ಇವೆಲ್ಲವೂ ಆಧುನಿಕ ಪ್ರಪಂಚದ ಸವಾಲುಗಳನ್ನು ಎದುರಿಸಿ,ಅವಕಾಶಗಳನ್ನು ಬಳಸಿಕೊಳ್ಳಲು ಯುವಜನರಿಗೆ ಸಹಾಯ ಮಾಡುವ ಪ್ರಮುಖ ಪಾಠಗಳಾಗಿವೆ. ಸ್ವಾಮಿ ವಿವೇಕಾನಂದರ ಬೋಧನೆಗಳು ತಮ್ಮ ಆಂತರಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮೂಲಕ, ಇತರರಿಗೆ ಸೇವೆ ಸಲ್ಲಿಸುವ ಮೂಲಕ ಮತ್ತು ಜಗತ್ತಿನಲ್ಲಿ ಶಾಂತಿ, ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಮೂಲಕ, ಭವಿಷ್ಯದ ಪೀಳಿಗೆಯನ್ನು ಹೆಚ್ಚು ತೃಪ್ತಿಕರ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಪ್ರೇರೇಪಿಸುವ ಸಾಮರ್ಥ್ಯವನ್ನು ಹೊಂದಿವೆ.
ಸ್ವಾಮಿ ವಿವೇಕಾನಂದರನ್ನು ಯುವಜನರ ಆದರ್ಶವೆಂದು ಪರಿಗಣಿಸ­ಲಾಗಿದೆ.ಏಕೆಂದರೆ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಪ್ರಾಮುಖ್ಯ ಅಂಶಗಳಿವೆ.
ಯುವಕರೆಂದರೆ ವಿವೇಕಾನಂದರಿಗೆ ಪಂಚಪ್ರಾಣ. ಸ್ವಾಮಿ ವಿವೇಕಾನಂದರು ಯುವಕರಲ್ಲಿ ಹುರುಪು- ಹುಮ್ಮಸ್ಸನ್ನು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದವರು.  ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಸಮುದಾಯ ತಮಗೆ ಎದುರಾದ ಸಂಕಷ್ಟಗಳಿಗೆ, ಎಡರು-ತೊಡರುಗಳಿಗೆ ಬೆದರದೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂದರಿತು ಗುರಿ ತಲುಪಬೇಕು. ಅಸಹಾಯಕರಾಗಿ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈಹಾಕಬಾರದು. ಹಾಗೆಯೇ, ಬರೀ ಆರಂಭಕ್ಕೆ ಶೂರರಾಗದೆ ಅಥವಾ ಅಂಜಿಕೆಯಿಂದ ಹಿಂದಡಿಯಿಡದೆ ಗುರಿ ಮುಟ್ಟುವ ತನಕ ನಿರಂತರವಾಗಿ ಹೋರಾಡುವ ಪರಿಶ್ರಮಿಗಳಾಗಬೇಕು. ‘ಹೆದರುವವನಿಗೆ ಅವನ ನೆರಳೇ ಭೂತವಾಗುತ್ತದೆ. ಹೆದರದವನಿಗೆ ಭೂತವು ಅವನ ನೆರಳಾಗಿ ಕಾಲಡಿಯಲ್ಲಿ ನೃತ್ಯ ಮಾಡುತ್ತ ಸಾಗಿಬಿಡುತ್ತದೆ’ಎನ್ನುತ್ತಾರಲ್ಲ ಹಾಗೆ. ವಿವೇಕಾನಂದರು ಇಂಥಹ ಕೆಚ್ಚನ್ನು ಯುವಕರಲ್ಲಿ ತುಂಬವ ಪ್ರಯತ್ನವನ್ನು ಮಾಡಿದರು.

ಯುವಶಕ್ತಿಯೇ ದೇಶದ ನಿರ್ಮಾಣ ಶಕ್ತಿ.ನಮ್ಮ ಯುವಕ ಯುವತಿಯರು ತಪ್ಪು ದಾರಿ ಹಿಡಿದು, ವಿಧ್ವಂಸಕ ಕೃತ್ಯ ಗಳಲ್ಲಿ ತೊಡಗದಂತೆ ಎಚ್ಚರವಹಿಸಬೇಕು.ಯುವಶಕ್ತಿಗೆ ಉದ್ಯೋಗ ನೀಡಿ, ಸಮಾಜೋಪಯೋಗಿ ಕೆಲಸದಲ್ಲಿ ನಿರತರಾಗುವಂತೆ ಮಾಡಿದರೆ.ನಮ್ಮ ದೇಶ ಬಲಿಷ್ಠ ರಾಷ್ಟ್ರವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.ಯುವಕ ಯುವತಿಯರಲ್ಲಿ ಬಿಸಿರಕ್ತ ಹರಿಯುತ್ತಿರುತ್ತದೆ.ಸಾಧನೆ ಮಾಡುವ ಹುಮ್ಮಸ್ಸು ಇರುತ್ತದೆ.ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದರೆ ಯುವಶಕ್ತಿಯ ಸದ್ಬಳಕೆ ಆಗುತ್ತದೆ.ಯುವಶಕ್ತಿ ಪೋಲಾಗಬಾರದು.ಯುವಕ ಯುವತಿಯರು ಸಮಾಜದ ಸಂಪನ್ನೂಲವಾಗಬೇಕು.ಯುವಕರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಾಗದು.ಯುವಕರ ಸಂಖ್ಯೆ ಜಾಸ್ತಿ ಇರುವ ಭಾರತ ದೇಶದಲ್ಲಿ  ಯುವಶಕ್ತಿಯ ಸದ್ಬಳಕೆ ಆಗಲಿ ಎಂದು ಆಶಿಸೋಣವೇ?.

Leave a Reply

Back To Top