ಕಾವ್ಯ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
ಎಳ್ಳು ಅಮವಾಸ್ಯೆ
ಎಳ್ಳು ಅಮವಾಸ್ಯೆ.
ಹಸಿರು ಚಿಕ್ಕಿ ಸೀರಿ ಉಟ್ಟ, ಕೆಂಪಬಳಿ ತೊಟ್ಟ
ಹೊಲಕ್ಕ ಚರಗಾ ಚಲ್ಲಾಕ ಹೋಗೋಣ
ಕೆಸರಿಲ್ಲದ ಕಲ್ಲು ಐದು ಸಾಲಕ ದೇವರಿಗಿಟ್ಟು
ನೆಲಕ್ಕಬಾಗಿ ಪೂಜಿಸಿ ಮುಂದೆ ಸಾಗೋಣ
ತುರಬುಟ್ಟಿ ತುಂಬ ತಂದೇನ ಹೊಸ ಅಡಿಗಿ
ನುಚ್ಚು,ಪಲ್ಲೇ,ಪುಂಡಿಚಟ್ನಿ, ಗುರೆಳ್ಳು ಖಾರ
ಹುರೆಕ್ಕಿ ಹೋಳಿಗೆ ತುಪ್ಪ ಗಟ್ಟಿ ಹೈನದ ಗಡಿಗಿ
ಮುಚ್ಚಿತಂದ ಜೋಳದ ವಡೆ ಬ್ಯಾಳಿ ಸಾರ
ಹೊತ್ತಾರೆ ಎದ್ದು ಮಾಡಿದ ಕಾಳಿನ ಘಮಲು
ಹಕ್ಕರಕಿ ಸೊಪ್ಪ, ಮೂಲಂಗಿ ತಂದೇನ ಹೆಚ್ಚಿ
ಕೂತರೆ ಮಾವಿನಮರದಡಿ ನಿದ್ದಿಯ ಅಮಲು
ಸೊಕ್ಕಿನಿಂತ ತೊಗರಿ ಬೆಳೆ ನಕ್ಕಾವ ಹೂ ಬಿಚ್ಚಿ
ಸುತ್ತ ದೈವಕ್ಕೆ ಕೈ ಮುಗಿದು ಭೂತಾಯಿ ಬೇಡಿ
ಮಳೆಯು ಹರವು ಹುರಪಿಲಿದೂಡು ತಾಯಿ
ಇತ್ತು ಹೊಸ ಬೆಳಿ ರೈತನಿಗೆ ಪ್ರೀತಿಲಿ ನೋಡಿ
ಕಳೆಯುತ ರೋಗಗಳ ದನಕರುಗಳ ಕಾಯಿ
ತಣ್ಣನೆ ಸುಳಿಗಾಳಿ ತೀಡುವ ಮೈ ಮನಸು
ಕೊರಳ ಬಿಚ್ಚಿದ ಬಸವನ ಗಂಟೆಯ ದನಿ
ಸುಣ್ಣವ ಎಲೆಗೆ ಬಳಿದು ಕೆಂಪಿನ ಕನಸು
ಮರುಳು ಮಾಡೇತಿ ಹಸುರಿನ ಹೊಸಮನಿ
ಹುಡಿಮಣ್ಣು ಹಿಡಿದು ಹಣೆಗೆ ತೀಡುತಲಿ
ಎಳ್ಳು ಅಮಾಸಿ ಅಡಿಗೆ ಚರಗವಚಲ್ಲಿ
ಕೂಡಿ ಉಣ್ಣುತ ಪ್ರೀತಿಯಲಿ ನೀಡುತಲಿ
ಕಳ್ಳುಬಳ್ಳಿ ಸಿಟ್ಟ ಸುಟ್ಟು ಕೂಡುವ ನಗುಚಲ್ಲಿ
( ಕಳ್ಳು ಬಳ್ಳಿ- ಬಾಂಧವರು)
( ನೀಡುತ- ಬಡಿಸುತ)
( ಕಾಯಿ- ಕಾಪಾಡು)
ಸಾಕ್ಷಿ ಶ್ರೀಕಾಂತ ತಿಕೋಟಿಕರ
Wa super kavana
Thank you
ಚೆನ್ನಾಗಿದೆ ಸೋನಾ
Thank you