ಮಧು ವಸ್ತ್ರದ್ ಕವಿತೆ-ಪ್ರೇಮಾನುಭೂತಿ

ಹಸಿರು ಸಿರಿ ನಡುವೆ ಆಸೀನರು ಜಾನಕಿ ರಾಮ
ಉಸಿರು ಉರದಲಿ ಬೆಸೆದಿದೆ ನಿರ್ಮಲ ಪ್ರೇಮ

ಪತಿಪ್ರೀತಿಗಾಗಿ ವನಸೇರಿದ ಸೌಂದರ್ಯರಾಣಿ
ಸತಿಧರ್ಮ ಪಾಲಿಸಿದ ಪತಿವ್ರತಾ ಶಿರೋಮಣಿ

ಪ್ರೇಮಭಾವದಿ ಶ್ರೀರಾಮ ಹೆಣೆದಿಹನು‌ ಹೆರಳು
ಕೋಮಲೆ ಸೀತೆ ನಾಚಿ ಬಾಗಿಸಿಹಳು ಕೊರಳು

ಅಪ್ಪಿದ ಕಣ್ರೆಪ್ಪೆಗಳ ಭಾವ ಅನಿರ್ವಚನೀಯ
ಒಪ್ಪಿದ ಬಾಂಧವ್ಯದ ನಿಶ್ಚಯ ಅವರ್ಣನೀಯ

ನೋಡಿ ಇವರೊಲವ ಚುಕ್ಕಿತಾರೆ ಮಂತ್ರಮುಗ್ಧ
ಕಾಡಿನ ಹಕ್ಕಿಪಕ್ಷಿ ಮೃಗಗಳೆಲ್ಲ ಕುಳಿತಿಹವು ಸ್ಥಬ್ದ

ಬಾಲರವಿಗಾಯ್ತು ಇವರೊಲವ ಕಂಡು ಪುಳಕ
ಮೇಲೇರದೆ ನಿಂತು ಚೆಲ್ಲಿಹ ತುಸು ಬೆಳ್ಳಿ ಬೆಳಕ

ಗಂಧ ಹರಡಿವೆ ಎಲ್ಲೆಡೆ ಬಿರಿದ‌ ವನಸುಮಗಳು
ಬಂಧ ಬಿಚ್ಚಿ ತೂಗಿ ತಂಗಾಳಿ ಬೀಸಿವೆ ಲತೆಗಳು

ಬತ್ತಳಿಕೆಗೆ ಅಲ್ಪವಿರಾಮವಿತ್ತಿಹನು ರಘುರಾಮ
ಬಿತ್ತರಿಸಿಹನು ಜಗಕೆ ನಿಜ ಆದರ ಪತ್ನಿ ಪ್ರೇಮ

ಏಕಪತ್ನೀವ್ರತಸ್ಥ ರಘುನಂದನನ ಈ ಸಂಪ್ರೀತಿ
ನಾಕಸದೃಶ ಭಾರತದ ಜನತೆಗೆ ಸದಾ ಸ್ಪೂರ್ತಿ


Leave a Reply

Back To Top