ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್
ಅಂತಕನೇ ಬೆನ್ನೇರಿದ ಬೇತಾಳನಂತೆ ಕಾಡಿಸದಿರು ನಾನಿನ್ನೂ ಬದುಕಬೇಕಿದೆ
ಅಂತಕನೇ ಸೂಚನೆ ನೀಡದೇ ಎಳೆದೊಯ್ಯದಿರು ನಾನಿನ್ನೂ ಬದುಕಬೇಕಿದೆ
ತಿಳಿದಿದೆ ನನಗೆ ಪ್ರತಿ ಜೀವಿಯ ಹುಟ್ಟಿನ ಜೊತೆಗೂ ನಿನ್ನ ನೆರಳಿದೆಯೆಂದು
ನಿಷ್ಕರುಣಿಯಾಗಿ ಬಾಳಕೊರಳಿಗೆ ಉರುಳಾಗದಿರು ನಾನಿನ್ನೂ ಬದುಕಬೇಕಿದೆ
ಕಷ್ಟ ಸುಖದ ಬುತ್ತಿಯಲಿ ವಿಧಿ ಈ ತನಕ ಉಣಿಸಿದ್ದು ಬರೀ ನೋವು ಸಂಕಟವನ್ನೇ
ಬದುಕಲೇಬೇಕೆಂಬ ಛಲದ ಮರವನ್ನು ಕೆಡವದಿರು ನಾನಿನ್ನೂ ಬದುಕಬೇಕಿದೆ
ನಿನ್ನ ಖಚಿತ ಆಗಮನದ ಸುಳಿವನ್ನು ತಿಳಿದವರು ಇರುವರೇ ಹೇಳು ಜಗದಲ್ಲಿ
ಪಯಣದ ಹಾದಿಯನ್ನಿಂದು ಮೊಟಕುಗೊಳಿಸದಿರು ನಾನಿನ್ನೂ ಬದುಕಬೇಕಿದೆ
ನಡೆದಿಹ ಜೀವನವೆಂಬ ನಾಟಕದಲ್ಲಿ ‘ ಹೇಮ’ ಳ ಪಾತ್ರವಿನ್ನೂ ಕೊನೆಗೊಂಡಿಲ್ಲ
ಅರ್ಧದಲ್ಲೇ ಅಂಕದ ಪರದೆಯನ್ನು ಜಾರಿಸದಿರು ನಾನಿನ್ನೂ ಬದುಕಬೇಕಿದೆ
ಎ. ಹೇಮಗಂಗಾ
ತುಂಬಾ ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸಿರುವಿರಿ ಮೇಡಂ ಅಭಿನಂದನೆಗಳು