ರಮೇಶ್ ಎಮ್ ಗೋನಾಲ್ ಕವಿತೆ “ಸಾಲ ತೀರಿಸಿದರಾಯಿತು ಬಿಡಿ…”

ಇಂದಲ್ಲ ನಾಳೆ
ಸಾಲ ತೀರಿಸಿದರಾಯಿತು ಬಿಡಿ
ಬಡ್ಡಿ ಕಟ್ಟುತ್ತಿಲ್ಲವೇ?!
ಈ ಜನ್ಮ
ಅಪ್ಪ ಅಮ್ಮನ ಋಣ
ತೀರಿಸಲಾಗುವುದೇ?!

ಹೊಲಕ್ಕೋ… ಮನೆಗೋ..
ಮದುವೆಗೋ.. ಮುಂಜಿಗೋ..
ಹೆಣ್ಣಿಗೋ… ಹೆಂಡಕ್ಕೋ …
ಜೂಜಿಗೋ…ಮೋಜಿಗೋ…
ಮಿತಿಮೀರಿದರೆ ಸಾಲ
ಬಡ್ಡಿ ಚಕ್ರಬಡ್ಡಿ ಬೆಳೆದು
ಆಗುವುದು ಹನುಮಂತನ ಬಾಲ

ಕ್ಯಾಲೆಂಡರಿನಲ್ಲಿ
ಹಚ್ಚೆಹಾಕಿವೆ ಸಾಲಗಳದೇ ಡೇಟು
ಮೂಡಿಸಿ ಭರವಸೆನು ಮಾತುಗಳಲಿ
ತಪ್ಪದೇ ಕಟ್ಟುವನು ಬಡ್ಡಿ ಇವನೆಂತ ಗ್ರೇಟು

ಬಡ್ಡಿ ಕೊಡದಿರೆ
ಅವನು ಸಿಕ್ಕಾಗಲೇ ಕೇಳಿ ಹರಿಕಥೆಯ
ಫೋನಂತೂ ನಾಟ್ ರಿಚೇಬಲ್…

ಕಂಡ ಕಂಡಲ್ಲಿ
ಸಿಕ್ಕ ಸಿಕ್ಕಲ್ಲಿ
ಬ್ಯಾಂಕು – ಫೈನಾನ್ಸ್ ಲೋನಿನ ಆಪ್ಗಳಲ್ಲಿ
ವಾರದ ತಿಂಗಳ ವರುಷದ
ಮೂರು ಐದು ಹತ್ತರ ಮೀಟರು ಬಡ್ಡಿ
ಸಾಲ ಕೊಂಡು
ಆಗಿದೆ ಜೀವ ಹುಲ್ಲು ಕಡ್ಡಿ
ಈ ಸಾಲ ತೀರಿಸಲು
ಮತ್ತೊಂದು ಸಾಲ
ಬಡ್ಡಿ ಚಕ್ರಬಡ್ಡಿಯ ಚಕ್ರವ್ಯೂಹಕೆ ಸಿಲುಕಿ
ಸಾಲ ಶೂಲವಾಗುವುದು ಖಚಿತ

ಬಡವನ ಸಾಲ ಸಾವಿಗೆ ಮೂಲ
ವ್ಯಾಪಾರಿ ಸಾಲ ಬ್ಯಾಂಕಿಗೆ ಶೂಲ
ದೇಶದ ಸಾಲ ಪ್ರಜೆಗೆ ಶೂಲ
ಸಾಲ ತೀರಿಸದಾಯಿತು ಬಿಡಿ
ಇಂದಲ್ಲ ನಾಳೆ
ಬಡ್ಡಿ ಕಟ್ಟುತ್ತಿಲ್ಲವೇ..!?

ಕುಬೇರನ ಸಾಲ ಇನ್ನೂ ತೀರಿಸಿಲ್ಲ ತಿಮ್ಮಪ್ಪ….
ಸಾಲದಾತನೇ ದೊಡ್ಡಪ್ಪ
ಸಾಲ ತೀರಿಸಿದರಾಯಿತು ಬಿಡಿ
ಇಂದಲ್ಲ ನಾಳೆ
ಬಡ್ಡಿ ಕಟ್ಟುತ್ತಿಲ್ಲವೇ?! ಬಡ್ಡಿ ಕಟ್ಟುತ್ತಿಲ್ಲವೇ?


Leave a Reply

Back To Top