ಪ್ರಸ್ತುತ ಸಂಗಾತಿ
“ಹುಚ್ಚು ಅಭಿಮಾನದ ಹೊಳೆಯಲ್ಲಿ
ಕೊಚ್ಚಿ ಹೋಗದಿರಿ”
ವೀಣಾ ಹೇಮಂತ್ ಗೌಡ ಪಾಟೀಲ್
ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸೂರಣಗಿ ಎಂಬ ಊರಿನಲ್ಲಿ ತಮ್ಮ ಪ್ರೀತಿಯ ನಾಯಕ ನಟನ ಹುಟ್ಟುಹಬ್ಬಕ್ಕೆ ಸುಮಾರು 25 ಅಡಿಯ ಬೃಹತ್ ಕಟ್ ಔಟ್ ಹಾಕುವಾಗ ವಿದ್ಯುತ್ ಅಪಘಾತಕ್ಕೆ ಈಡಾಗಿ ಮೂರು ಜನ ಯುವಕರು ಮರಣ ಹೊಂದಿದ್ದಾರೆ…. ಇನ್ನೂ ಒಂದಿಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ. ಯುವಕರ ಸಾವಿನ ಸುದ್ದಿಯನ್ನು ಕೇಳಿ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ನಾಯಕ ನಟ ಯಶ್ ತಮ್ಮೆಲ್ಲ ಚಿತ್ರೀಕರಣವನ್ನು ನಿಲ್ಲಿಸಿ ಗದಗ ಜಿಲ್ಲೆಯ ಸೂರಣಗಿಗೆ ಭೇಟಿ ನೀಡಿ ಯುವಕರ ಪಾಲಕರನ್ನು ಸಂತೈಸಿದ್ದಾರೆ.
ಅತ್ಯಂತ ನೋವಿನಿಂದ ಯಶ್ ಹೇಳಿದ ಮಾತುಗಳು ಅಭಿಮಾನಿಗಳ ಮನೆ ಕಲಕುವಂತಿದೆ…. ಹುಟ್ಟುಹಬ್ಬ ಎಂದರೆ ಭಯ ಮತ್ತು ಅಸಹ್ಯತರಿಸುವಂತಾಗಿದೆ. ಇಂತಹದ್ದನ್ನು ಯಾರು ಇಷ್ಟಪಡುವುದಿಲ್ಲ…. ನಾವೇನೋ ಸಾಂತ್ವನ ಹೇಳಬಹುದು ಆದರೆ ಕಳೆದು ಹೋದ ಮಕ್ಕಳು ಮತ್ತೆ ಬರುವುದಿಲ್ಲ. ನಿಜ ಅಲ್ಲವೇ…ಮನೆಯವರ ಶೋಕ ನಿತ್ಯ ನಿರಂತರವಾಗಿರುತ್ತದೆ, ಮನೆಯ ಆಧಾರ ಸ್ತಂಭವಾಗಲಿರುವ ಮಕ್ಕಳು ಹೀಗೆ ಏಕಾಏಕಿ ಅವಘಡಕ್ಕೆ ಈಡಾದರೆ ಇದಕ್ಕೆ ಯಾರು ಹೊಣೆ??
ಇನ್ನು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಈ ಘಟನೆ ನೆನಪಾಗಿ ಹುಟ್ಟುಹಬ್ಬ ಎಂಬುದು ಹಳೆಯ ನೋವನ್ನು ಕೆದಕಲು ಕಾರಣವಾಗುವುದಿಲ್ಲವೇ?
ಎಲ್ಲಾ ವೃತ್ತಿಗಳಂತೆ ಚಲನಚಿತ್ರರಂಗದ, ಟಿವಿ ಮಾಧ್ಯಮದ ನಟ ನಟಿಯರು ಕೂಡ ತಮ್ಮ ವೃತ್ತಿಗಳನ್ನು ನಿರ್ವಹಿಸುತ್ತಾರೆ. ಇದು ಅವರ ದುಡಿಮೆಯ ಮಾರ್ಗ. ಕನಸು ಕಾಣುವ ಹದಿಹರೆಯದ ಮಕ್ಕಳಿಂದ ಹಿಡಿದು ಮುಪ್ಪಿನ ಮುದುಕರವರೆಗೆ ಅವರು ತಮ್ಮ ಅಭಿನಯದ ಮೂಲಕ ಮಾಡುವ ಮೋಡಿ ತುಸು ಹೆಚ್ಚಿನದು. ಚಲನಚಿತ್ರಗಳಲ್ಲಿ ಭ್ರಾಮಕ ಬದುಕಿನ ಚಿತ್ರಣಗಳು ಇರುತ್ತವೆ. ವ್ಯಕ್ತಿತ್ವ ನಿರ್ಮಾಣದ ಜೊತೆ ಜೊತೆಗೆ, ಪ್ರೀತಿಯ ಹಸಿ ಬಿಸಿ ದೃಶ್ಯಗಳು, ಮನಮಿಡಿಯುವ, ಹಿಂಸೆಯನ್ನು ಪ್ರಚೋದಿಸುವ ದೃಶ್ಯಗಳು ಕೂಡ ಇರುತ್ತವೆ. ಜನನಾಯಕನಾಗುವ, ಒಬ್ಬನೇ ವ್ಯಕ್ತಿ ಹಲವರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜನ ಮನ್ನಣೆ ಗಳಿಸುವ ಅವಕಾಶ ಚಿತ್ರರಂಗದ ನಾಯಕ ನಾಯಕಿಯರಿಗಿರುತ್ತದೆ.
ಸಾಮಾನ್ಯವಾಗಿ ಅದ್ದೂರಿ ತಾರಾಗಣ, ದುಬಾರಿ ವೆಚ್ಚದ ಸೆಟ್ಟುಗಳು, ಸುಂದರ ರಮಣೀಯ ತಾಣಗಳ ಚಿತ್ರೀಕರಣ, ತರಹೇವಾರಿ ದಿರಿಸುಗಳು, ಸಾಹಸ ದೃಶ್ಯಗಳು, ರೋಚಕ ಸನ್ನಿವೇಶಗಳು, ವಿಭಿನ್ನ ತಿರುವುಗಳು, ಮೈಮರೆಯುವ ಸಂಗೀತ ಹೀಗೆ ಹತ್ತು ಹಲವು ಆಕರ್ಷಕ ವಿಷಯಗಳನ್ನು ಒಳಗೊಂಡಿರುವ ಚಲನಚಿತ್ರ ನಮ್ಮನ್ನು ಭಾವನಾತ್ಮಕವಾಗಿ ಮಂತ್ರಮುಗ್ಧರನ್ನಾಗಿಸುತ್ತದೆ, ಇದರಿಂದಾಚೆಗೆ ಅವರು ಕೂಡ ನಮ್ಮ ನಿಮ್ಮಂತೆ ಮನುಷ್ಯರು ವೃತ್ತಿಪರ ಕೆಲಸಗಾರರು ಎಂಬುದನ್ನು ನಾವು ಮರೆತೇ ಬಿಡುತ್ತೇವೆ. ಇತ್ತೀಚೆಗಂತೂ ಕೋಟಿಗಟ್ಟಲೆ ಬಂಡವಾಳ ಹಾಕಿ ಅದ್ದೂರಿ ಚಿತ್ರಗಳನ್ನು ತಯಾರಿಸುವ ಹಲವಾರು ನಿರ್ಮಾಪಕರು ನಮ್ಮಲ್ಲಿದ್ದಾರೆ.
ಮತ್ತೊಮ್ಮೆ ಹೇಳುವುದಾದರೆ ಈ ಚಿತ್ರಗಳಲ್ಲಿ ನಟಿಸುವ ತಾರೆಯರು ನಮ್ಮ ನಿಮ್ಮಂತೆ ಹುಲು ಮನುಷ್ಯರು. ಅವರಲ್ಲಿಯೂ ಕೂಡ ನಮ್ಮಲ್ಲಿರುವಂತೆ ಮಾನವ ಸಹಜ ಸ್ವಭಾವಗಳು, ನ್ಯೂನ್ಯತೆಗಳು ಇರುತ್ತವೆ. ಅವರು ಕೂಡ ತಮ್ಮದೇ ಜೀವನದ ಚಕ್ರವನ್ನು ಸಾಗಿಸಲು ಈ ವೃತ್ತಿಯನ್ನು ಆರಿಸಿಕೊಂಡಿರುತ್ತಾರೆ. ಎಲ್ಲಾ ವೃತ್ತಿಗಳಲ್ಲಿ ಇರುವಂತೆಯೇ ಈ ವೃತ್ತಿಯಲ್ಲಿಯೂ ಏರಿಳಿತಗಳು ತುಸು ಹೆಚ್ಚೇ ಇರುತ್ತವೆ. ಈ ವೃತ್ತಿಯ ವೈಶಿಷ್ಟ್ಯವೆಂದರೆ ಇವರು ಬಲು ಬೇಗ ಗುರುತಿಸಲ್ಪಡುತ್ತಾರೆ, ಆಕರ್ಷಿಸಲ್ಪಡುತ್ತಾರೆ, ಪ್ರಸಿದ್ಧರಾಗುತ್ತಾರೆ. ಬಣ್ಣದ ಲೋಕದ ಗ್ಲಾಮರ್ರೆ ಅಂತದ್ದು. ಬೆಳಕಿನಲ್ಲಿ ಶೂಟಿಂಗ್ ಮಾಡಿ ಕತ್ತಲಲ್ಲಿ ಕೂರಿಸಿ ಭ್ರಾಮಕ ಲೋಕದ ಪ್ರಪಂಚವನ್ನು ತೋರಿಸುವ ಸಿನಿಮಾಗಳು ಎಷ್ಟೋ ಬಾರಿ ನಮ್ಮ ಬದುಕಿನ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು.
ಚಲನಚಿತ್ರಗಳ ನಟ ನಟಿಯರನ್ನು ಚುನಾವಣಾ ಕ್ಯಾಂಪೇನ್ಗಳಿಗೆ ಕರೆತರುವುದು ಜನರನ್ನು ಆಕರ್ಷಿಸಲು, ಒಗ್ಗೂಡಿಸಲು. ಅಲ್ಲಿ ತಮ್ಮ ಅಭಿಮಾನದ ನಾಯಕನನ್ನು ನೋಡಲು ಬರುವ ಆತನೊಂದಿಗೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸುವುದು, ಅವರ ಚಿತ್ರಗಳನ್ನು ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು, ಅವರಂತೆ ಕೇಶವಿನ್ಯಾಸ ಮಾಡಿಸಿಕೊಳ್ಳುವುದು ಅವರಂತೆ ನಡಿಗೆ,ಉಡುಗೆ ತೊಡುಗೆಗಳನ್ನು ಧರಿಸಿ ನಮ್ಮ ಅಭಿಮಾನವನ್ನು ಮೆರೆಯುವುದು. ಅವರ ಹೊಸ ಚಿತ್ರಗಳು ಬಿಡುಗಡೆಯಾದಾಗ ಬೃಹದಾಕಾರದ ಕಟ್ಟೌಟುಗಳನ್ನು ನಿಲ್ಲಿಸಿ ಅವುಗಳಿಗೆ ಹಾರ ಹಾಕಿ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಅಭಿಮಾನದ ಪರಾಕಾಷ್ಟೆಯನ್ನು ಮೆರೆಯುವುದು, ಇನ್ನು ಕೆಲವೊಮ್ಮೆ ಅವರ ಹುಟ್ಟುಹಬ್ಬಗಳಿಗೆ ದೂರದೂರುಗಳಿಂದ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಬಂದು ಅವರ ಮನೆಯ ಮುಂದೆ ಠಿಕಾಣಿ ಹೂಡಿ ಕೇಕ್ ಕತ್ತರಿಸಲು ಫೋಟೋ ತೆಗೆಸಿಕೊಳ್ಳಲು ಅವರನ್ನು ಆಗ್ರಹಿಸುವುದು, ಇನ್ನು ಕೆಲವರು ತಮ್ಮ ಊರುಗಳಿಂದ ಸೈಕಲ್ ಮೇಲೆ ಸವಾರಿ ಮಾಡಿಕೊಂಡು, ಕಾಲ್ನಡಿಗೆಯಲ್ಲಿ ನಡೆದು ಬಂದು ತಮ್ಮ ಅಭಿಮಾನವನ್ನು ಮರೆಯುತ್ತಾರೆ …. ಒಂದೇ ಎರಡೇ, ಇವರು ಮಾಡುವ ಅನಾಹುತಗಳು.
ಚಲನಚಿತ್ರಗಳಲ್ಲಿ ನಟಿಸುವ ನಟ ನಟಿಯರು ಚಿತ್ರಗಳಲ್ಲಿ ಅವರು ಅಭಿನಯಿಸಿದ ಪಾತ್ರವೇ ತಾವಾಗಿ ಅವರನ್ನು ನಾವು ಕೂಡ ಆರಾಧಿಸುತ್ತೇವೆ. ಅಭಿಮಾನ ತಪ್ಪಲ್ಲ ನಿಜ… ಆದರೆ ಹುಚ್ಚು ಅಭಿಮಾನ ಖಂಡಿತ ತಪ್ಪು.
ಉದ್ಯಾನದಲ್ಲಿ ಬೆಳೆದ ಹೂಗಳನ್ನು ಕಂಡು ನಾವು ಆನಂದ ಪಡುತ್ತೇವೆಯೇ ಹೊರತು, ಅವುಗಳನ್ನು
ಕೀಳುವುದಿಲ್ಲ.ಅಂತೆಯೇ ನಾವು ಯಾರನ್ನಾದರೂ ಅಭಿಮಾನಿಸುತ್ತಿದ್ದರೆ, ಪ್ರೀತಿಸುತ್ತಿದ್ದರೆ ಅವರನ್ನು ದೂರದಿಂದಲೇ ನೋಡಿ ಆನಂದ ಪಡೋಣ. ಅವರಿಗೂ ಸಾಮಾನ್ಯರಂತೆ ಓಡಾಡಲು, ಉಸಿರಾಡಲು ಅವಕಾಶ ಕೊಡೋಣ. ಅವರು ಕೂಡ ನಮ್ಮಲ್ಲಿ ಒಬ್ಬರಾಗಲಿ. ನಮ್ಮ ಹುಚ್ಚು ಪ್ರೀತಿ, ಅಭಿಮಾನ ಅವರಿಗೆ ಉಸಿರು ಕಟ್ಟಿಸದಿರಲಿ.
ಚಲನಚಿತ್ರ ನಟರಿಗೆ, ಕ್ರಿಕೆಟ್ ಆಟಗಾರರಿಗೆ, ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಈ ರೀತಿಯ ಅಭಿಮಾನ ಕೊಂಚಮಟ್ಟಿಗೆ ಅಪ್ಯಾಯಮಾನವೇ ನಿಜ. ಆದರೆ ಅತಿಯಾದ ಅಭಿಮಾನ ಅವರ ಸ್ವಾತಂತ್ರ್ಯವನ್ನು ಕಸಿದು ಹಾಕುತ್ತದೆ. ಯಾವುದೇ ಸ್ಥಳಗಳಿಗೆ ಹೋಗಿ ಬರಲು ತೊಂದರೆಯಾಗುತ್ತದೆ. ಖಾಸಗಿ ಸಮಯಗಳು ಕೂಡ ಇಲ್ಲವಾಗುತ್ತದೆ. ಅಂತೆಯೇ ಕೆಲವೊಮ್ಮೆ ವಿಪರೀತ ಜನ ಸೇರಿದಾಗ ನೂಕುನುಗ್ಗಲಿನಲ್ಲಿ ಅವರು ತಮ್ಮ ಸಣ್ಣ ಪುಟ್ಟ ವಸ್ತುಗಳನ್ನು ಕಳೆದುಕೊಳ್ಳುವುದು ಉಂಟು. ಜೊತೆ ಜೊತೆಗೆ ಮಾನವ ಸಹಜವಾಗಿ ಸಿಟ್ಟು ಬೇಸರಗಳಿಗೆ ಈಡಾಗಿ ಅಭಿಮಾನಿಗಳನ್ನು ಗದರಿಸಿದಾಗ ಅದು ದೊಡ್ಡ ಸುದ್ದಿಯಾಗಿ ಟಿವಿ ಚಾನಲ್ಗಳಲ್ಲಿ ಬಿತ್ತರ ವಾಗಬಹುದು.
ತಮ್ಮ ಖಾಸಗಿತನವನ್ನು ರಕ್ಷಿಸಿಕೊಳ್ಳಲು ಎಷ್ಟೋ ಬಾರಿ ಅಭಿಮಾನಿಗಳ ಹುಚ್ಚು ಪ್ರೀತಿಯಿಂದ ತೊಂದರೆಗೊಳಗಾಗದಿರಲು ಈ ಚಲನಚಿತ್ರ ನಟರು ತಮ್ಮ ರಕ್ಷಣೆಗೆ ಅಂಗರಕ್ಷಕರನ್ನು ಬೌನ್ಸರ್ಗಳನ್ನು ಇಟ್ಟುಕೊಳ್ಳುತ್ತಾರೆ. ಇದು ಕ್ಲೀಶೆಯ ವಿಷಯವಲ್ಲವೇ?? ಅವರ ಅಂಗರಕ್ಷಕರು, ಬೆಂಗಾವಲು ಪಡೆಯವರು ಜನರನ್ನು ನಿಯಂತ್ರಿಸುವ ಸಾಹಸ ಮಾಡುತ್ತಾ ತಮ್ಮ ಒಡೆಯರನ್ನು ರಕ್ಷಿಸಿಕೊಳ್ಳುತ್ತಾರೆ. ಇದು ಆಧುನಿಕ ಯುಗದ ಚೋದ್ಯವಲ್ಲವೇ??
ವಿಪರೀತ ಮಳೆ ಬಂದಾಗ ಹೊಳೆಗಳಲ್ಲಿ ನೀರು ಹೆಚ್ಚಾಗಿ ಪ್ರವಾಹವಾಗಿ ಮಾರ್ಪಡುತ್ತದೆ. ಈ ರೀತಿ ಪ್ರವಾಹವಾಗಿ ಮಾರ್ಪಟ್ಟ ಹುಚ್ಚು ಹೊಳೆಯಲ್ಲಿ ದಾಟಿ ಹೋಗಲು ಪ್ರಯತ್ನಿಸಿದವರು ನೀರು ಪಾಲಾಗುತ್ತಾರೆ. ಎಷ್ಟೋ ಬಾರಿ ಅವರ ಹೆಣಗಳು ಕೂಡ ದೊರೆಯುವುದಿಲ್ಲ… ಪ್ರಕೃತಿಯ ಮುಂದೆ ನಾವೆಲ್ಲ ಹುಲ್ಲಿನ ಕಣಗಳಿಗೆ ಸಮಾನ.
ಅಂತಹದ್ದೇ ಅಭಿಮಾನ ನಾವು ಇಷ್ಟಪಡುವ ತಾರೆಗಳ ಮೇಲೆ ಇರುವುದು ಸಹಜ,ಆದರೆ ನಮ್ಮ ಹುಚ್ಚು ಅಭಿಮಾನದ ಪ್ರೀತಿಯಲ್ಲಿ ನಾವೇ ಕೊಚ್ಚಿ ಹೋಗುವುದು ಬೇಡ. ಪ್ರೀತಿ ವಿಶ್ವಾಸ ಒತ್ತಟ್ಟಿಗೆ ಇರಲಿ ಆದರೆ ಬದುಕು ಅದಕ್ಕಿಂತ ದೊಡ್ಡದು. ನಮಗಾಗಿ, ನಮ್ಮವರಿಗಾಗಿ ನಾವು ಬದುಕಲೇಬೇಕು. ಅತಿಯಾದ ಚಿನ್ನದ ಆಸೆ ಹೊಂದಿದ ಮಿಡಾಸನ ಕಥೆ ಗೊತ್ತಿದೆಯಲ್ಲವೇ… ಅಂತಹ ಪರಿಸ್ಥಿತಿ ಮುಂದೆ ಯಾರಿಗೂ ಬರದಿರಲಿ. ಅಭಿಮಾನದ ಹುಚ್ಚು ಹೊಳೆಯಲ್ಲಿ ಯಾರ ಮನೆಯ ಮಕ್ಕಳೂ ಕೊಚ್ಚಿ ಹೋಗದಿರಲಿ ಎಂದು ಆಶಿಸುತ್ತಾ..
ವೀಣಾ ಹೇಮಂತ್ ಗೌಡ ಪಾಟೀಲ್
ತುಂಬ ಚೆನ್ನಾಗಿ ಹೇಳಿದ್ದಿಯ.