ಕಾವ್ಯಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ಕಾವ್ಯಕನ್ನಿಕೆ..!
“ಇದು ಕಾವ್ಯ ಸ್ಫುರಣದ ಕವಿತೆ. ಕವಿತೆಯೆಂಬ ದಿವ್ಯಕನ್ನಿಕೆಯ ಅವತರಣದ ಭಾವಗೀತೆ. ಇಲ್ಲಿ ಕವಿಯೆದೆಯ ಭಾವಬಯಲಿನಲ್ಲಿ ಕಾವ್ಯ ಉಗಮದ ಅನಾವರಣವಿದೆ. ಕಾವ್ಯಕನ್ನಿಕೆ ಮೈದಳೆವ ಸಂವೇದನೆಗಳ ಚಿತ್ರಣವಿದೆ. ಕವಿಜೀವದ ಅಮರ ಸ್ಪಂದನೆ, ಸುಂದರ ಭಾಷ್ಯವಾಗಿ ಮೂಡುವ ಮಹೂರ್ತ ಕಾಲದ ಮಧುರ ರಿಂಗಣಗಳಿವೆ. ಇದು ಕವಿಯೆದೆಯ ಜೀವಗಾನವೂ ಹೌದು. ಕಾವ್ಯಕನ್ನಿಕೆಯ ಭಾವಯಾನವೂ ಹೌದು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಕಾವ್ಯಕನ್ನಿಕೆ..!
ಹುಟ್ಟಬೇಕೆಂದರೆ ಕವಿತೆ…
ಸಂತೆಯಿಂದ ಆಚೆಬಂದು
ಏಕಾಂತದಲಿ ಸಂತನಾಗಿ
ಹೊಕ್ಕಬೇಕು ನಮ್ಮೊಳಗೆ ನಾವೆ.!
ನಯನಗಳ ಮುಚ್ಚಿಕೊಂಡು
ಆತ್ಮನೆದುರು ದೀನನಾಗಿ
ಅಂತರ್ಧ್ಯಾನದಲಿ ಲೀನವಾಗಿ
ಹಚ್ಚಬೇಕು ಜ್ಯೋತಿ ನಮ್ಮೊಳಗೆ.!
ಕಿವಿಗಳಿಗೆ ಕದವ ಜಡಿದು
ಒಳಗಣ ಶಬ್ಧಕೆ ನಿಶ್ಶಬ್ಧವಾಗಿ
ಬೆರೆತು ಬೆಸೆದು ವಿಲೀನವಾಗಿ
ಸೇರಬೇಕು ಸ್ವರ-ಸ್ವರದ ಜೊತೆಗೆ.!
ಒಳಗು ಹೊರಗು ಏಕವಾಗಿ
ಹೃದಯ ಮನಸು ಐಕ್ಯವಾಗಿ
ಭಾವ ಬಸಿದು ಭಾಷ್ಯವಾಗಿ
ಮೂಡಬೇಕು ಪದ-ಪದದೊಂದಿಗೆ.!
ಚಿತ್ತ ಚಿಂತನೆ ಚೈತನ್ಯವಾಗಿ
ಕಲ್ಪನೆ ಕಾಮನೆ ಕಾರುಣ್ಯವಾಗಿ
ಅರಿವು ಅಭಿವ್ಯಕ್ತಿ ಸರಾಗವಾಗಿ
ಹರಿಯಬೇಕು ಲೇಖನಿಯಿಂದ ಹಾಳೆಗೆ.!
ಕವಿಯೆದೆಯ ಸಾರ ಧಾರೆಯಾಗಿ
ಬೆಳಕ ತಾರೆಯಾಗಿ ನೀರೆಯಾಗಿ
ಅಕ್ಷರ ಅಕ್ಷರದಿ ದಿವ್ಯಕಾಂತಿಯಾಗಿ
ಜೀವತಳೆಯಬೇಕು ದೈವಕನ್ನಿಕೆ ಹಾಗೆ.!
ಎ.ಎನ್.ರಮೇಶ್.ಗುಬ್ಬಿ.