ಡಾ ಅನ್ನಪೂರ್ಣ ಹಿರೇಮಠರವರ ಭಾವಗೀತೆ

ಗೋಪಾಲಾ ನಂದಕಿಶೋರ ರಾಧಾವಲ್ಲಭ
ಇರಿಯುತಿದೆಯೋ ನಿನ್ನ ಕೊಳಲ ಮಧನ
ಕುಸುಮ ಕೋಮಲದ ಈ ನನ್ನ ವದನಕೆ ಕೃಷ್ಣ ಕೃಷ್ಣ ಕೃಷ್ಣಾ//ಪ//

ಮಿಡಿವ ವೀಣೆಯ ತಂತಿಯಂದದಿ
ಬಿಗಿದು ನಿಂತ ನನ್ನ ತನುವ ನುಡಿಸೋ ಜಾಣ
ಹೊರಡಿಸೋ ಸುಮಧುರ ಪ್ರೇಮನಾದ ಮುದದಿ
ಒಲವಿಗೆ ಸ್ವರರಾಗ ಲಯಗಳ ಬೆರೆಸಿ ಬೆರೆಸಿ
ನನ್ನ ಚೆಲುವಿಗೆ ಸೋಲದ ಛಲವ ಕಲಿಸಿ
ಬಾರೋ ತಡಮಾಡದೇ ವಿರಹ ದನಿಸದೆ ಕೃಷ್ಣ ಕೃಷ್ಣ ಕೃಷ್ಣಾ//

ನಿನ್ನ ಹೂ ಬಾನದಾ ಕಣ್ಣೋಟ ನನ್ನೆದೆಯ ಸೀಳಿ
ಎದ್ದಿದೆ ಕೊಳಲನಾದದೇ ಮೈಮನದಿ ರಾಗದೂಳಿ
ಸುರಿಸು ಸುರಿಸು ಬಿಡದೆ ಅನುರಾಗದ ಮಳಿ
ಮಧುರನಾದ ಗೋಪಾಲ ನುಡಿಸೋ ಬಿಡದೆ ಬೇಗ
ಗಾಳಿಗಂಧ ಮಕರಂದ ನನ್ನಂದ ಚೆಂದ ಆಲಾಪಿಸಲಿ
ನುಡಿಸೋ ನಾದಗೊಳಿಸೋ ಕೃಷ್ಣ ಕೃಷ್ಣ ಕೃಷ್ಣಾ //

ನನ್ನಂದ ಚಂದವೆಲ್ಲ ನಿನಗಾಗಿಯೇ ನಲ್ಲ
ಯೌವ್ವನದ ಬಯಕೆಗಳ ಹದವಾಗಿ ನುಡಿಸೋ
ನಾದಾಂತರಂಗದ ಅಲೆಯಲೆನ್ನ ತೇಲಿಸೋ
ತಪ್ತಳಾದ ರಾಧೆಯ ಹೃದಯಮಂದಿರದೆ ನೆಲೆಸಿ
ನುಡಿಸುತಿರು ಬಿಡದೆ ನಿನ್ನೊಲವಿನ ಮೌನರಾಗ
ಮಾರ್ಧನಿಸೋ ಇಂಪಾದ ಗಾನ ಮಂಪರಿಸೋ ಈ ಮನ
ನನ್ನೆದೆಯ ಗುಡಿಯಲಿ ನೆಲೆಸಿಬಿಡು ಕೃಷ್ಣ ಕೃಷ್ಣ ಕೃಷ್ಣಾ//


One thought on “ಡಾ ಅನ್ನಪೂರ್ಣ ಹಿರೇಮಠರವರ ಭಾವಗೀತೆ

Leave a Reply

Back To Top