ಸುಕುಮಾರ ಅವರ ಗಜಲ್

ಎರಡು ಒಡವೆಗಳಿಹುದು ಎನ್ನಲ್ಲಿ ಧರಿಸಿ ತೋರಿಸಲು ಬೇಡುತ್ತಿವೆ
ಒಲವು ತುಂಬಿದ ಮೊಡವೆಗಳಿವು ಗುಟ್ಟು ಬಿಡಿಸಲು ಕೇಳುತ್ತಿವೆ

ಕಲ್ಲು ಅರಳಿ ಹೂವು ಬಿರಿದು ಮುಡಿಗೆ ಸೇರಲು ಬಯಸಿದೆ
ಜೊಲ್ಲು ಕಾರಿ ಕಾಯ ತೊಯ್ದು ಅನಲ ಉರಿಸಲು ಪೇಳುತ್ತಿವೆ

ಮಧುವು ಜಿನುಗಿತು ಸುಧೆಯ ರೂಪದಿ ಸವಿದು ಚಿನ್ಮಯರಾಗುವ
ಕದಪು ಕೆಂಪು ಗುಲಾಬಿಯಾಗಿ ಕಾಯ ಕಂದರವ ಸೀಳುತ್ತಿವೆ

ಜೀತಕೆ ಜಾರಿದ ಮೇಟಿ ಇವನು ಮಾಟ ಕಾಟಕೆ ಬೀಳನು
ಸ್ವಂತಿಕೆ ಉಳಿದು ಸೇತುವೆ ಕಟ್ಟಲು ಸ್ನೇಹವು ದರ್ಪಣ ತೋರುತ್ತಿವೆ

ಮುದುಡದ ತಾವರೆ ಒಣಗಲು ಬಿಡನು ಕುಮಾರ ತನಯ ವಿನಯನು
ಕದುಡಿದ ನೀರಲೂ ಬಿಂಬದ ಮಾಯೆ ಚುಂಬಿಸಿ ರಮಿಸಲು ಕೋರುತ್ತಿವೆ


Leave a Reply

Back To Top