ಚಿತ್ರ ಕಲಾವಿದೆ ವಿಮಲ ಎಸ್. ಎನ್.ರವರ ಪರಿಚಯ-ಗೊರೂರು ಅನಂತರಾಜು

ಹಾಸನ ದಕ್ಷಿಣ ಭಾರತದ ವಿಸ್ತಾರವಾದ ಆಳ್ವಿಕೆಯನ್ನು ಒಳಗೊಂಡು ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರ ಆಳ್ವಿಕೆಗೂ ವಾಸ್ತುಶಿಲ್ಪಕ್ಕು ಪ್ರಖ್ಯಾತವಾಗಿದೆ. ಬಡವರ ಊಟಿ ಮಲೆನಾಡಿನ ಹೆಬ್ಬಾಗಿಲು ಶಿಲ್ಪ ಕಲೆಗಳ ಬೀಡು ಹೊಯ್ಸಳರ ನಾಡು ಕಲೆ ಸಂಸ್ಕೃತಿ ದೈವ ಭಕ್ತಿಯ ನೆಲವೀಡು ಎಂದು ಹಾಸನ ಜಿಲ್ಲೆಯು ಹೆಸರುವಾಸಿ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯಲ್ಲಿ ಕಲಾವಿದರು ಶಿಲ್ಪಿಗಳು ಬರಹಗಾರರು ಇತ್ಯಾದಿ ಕಲಾವಿದರು

ಬಹು ಸಂಖ್ಯೆಯಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಅದೇ ತರಹ ಹಲವು ಹೆಣ್ಣು ಮಕ್ಕಳು ಕಲೆಯನ್ನು ಬೆಳೆಸುತ್ತಾ ಪೋಷಿಸುತ್ತಾ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಬೆಳಕಿಗೆ ಬಾರದೆ ಕಲೆಯ ವೃತ್ತಿಯನ್ನು ಆರಾಧಿಸುತ್ತಾ ಇರುವವರಲ್ಲಿ ವಿಮಲ ಎಸ್ಎನ್ ಅವರು ಒಬ್ಬರು. ಇವರು ಹಾಸನ ಜಿಲ್ಲೆಯ ಸತ್ಯಮಂಗಲ ಗ್ರಾಮದಲ್ಲಿ ಶ್ರೀಮತಿ ಜಯಮ್ಮ ಮತ್ತು ಶ್ರೀ ನಂಜೇಗೌಡರ ಸುಪುತ್ರಿಯಾಗಿ ಜನಿಸಿ ಪ್ರೈಮರಿ ಶಾಲೆಯನ್ನು ಹಾಸನ ತಾಲ್ಲೂಕಿನ ಗಾಯತ್ರಿ ಸೇವಾ ಮಂದಿರ ಹಾಗೂ ಪ್ರೌಢಶಾಲೆಯನ್ನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಗಿಸಿದರು. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ ಇವರು ಮುಂದಿನ ವಿದ್ಯಾಭ್ಯಾಸಕ್ಕೆ ಚಿತ್ರಕಲೆಯನ್ನು ಹಾಸನದ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಆಯ್ಕೆ ಮಾಡಿಕೊಂಡು ತನ್ನ ಐದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇವರಿಗೆ ಆಯಿಲ್ ಕಲರ್ಸ್ ನಲ್ಲಿ ಕಲಾಕೃತಿಗಳನ್ನು ಮಾಡಲು ಆಸಕ್ತಿ ಹೊಂದಿದ್ದು ಮತ್ತಷ್ಟು ಕಲಾ ಕೃತಿಗಳನ್ನು ರಚಿಸುವ ಇಚ್ಛೆ ಇವರಿಗಿದೆ. ಇವರು ಲೈನ್ಸ್ ಸ್ಕೆಚ್ ರಚಿಸುವಲ್ಲಿ ಅತಿ ಹೆಚ್ಚು ಪರಿಣಿತಿಯನ್ನು . ತದನಂತರ ಹಾಸನ್ ಪಬ್ಲಿಕ್ ಸ್ಕೂಲ್, ಅರವಿಂದ ಸ್ಕೂಲ್ ಹಾಗೂ ಪ್ರಸ್ತುತ ವೃತ್ತಿಯನ್ನು ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಥಮವಾಗಿ ತನಗೆ ಅವಕಾಶವನ್ನು ನೀಡಿದ ಹೋಲಿ ಮೌಂಟ್ ಶಾಲೆ ಹಾಗೂ ತನ್ನ ಕಲೆಯನ್ನು ಪ್ರೋತ್ಸಾಹಿಸಿ ಕಲಾ ಸೇವೆಯನ್ನು ಪೂರೈಸಲು ಅವಕಾಶಕೊಟ್ಟ ಇತರೆ ಸಂಸ್ಥೆಗಳನ್ನು ಇಂದಿಗೂ ಸ್ಮರಿಸುವರು..

ಬಿಡುವಿನ ವೇಳೆಯಲ್ಲಿ ಕೂಡ ಸಿರಿ ಅಕಾಡೆಮಿ ಮೂಲಕ ಹಲವು ವಿದ್ಯಾರ್ಥಿಗಳ ಕಲಾಸಕ್ತಿಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಾನು ನಿರ್ವಹಿಸಿದ ಸಂಸ್ಥೆಗಳಲ್ಲಿ ತನ್ನ ಕಾರ್ಯವೈಖರಿ ಕಲಾ ಚತುರತೆಯಿಂದ ಸಿಬ್ಬಂದಿ ವರ್ಗ ವಿದ್ಯಾರ್ಥಿ ವೃಂದದಲ್ಲಿ ಮೆಚ್ಚುಗೆ ಪಡೆದಿದ್ದಾರೆ. ಇವರ ವೃತ್ತಿ ಜೀವನದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಹಾಗೂ ಕಲಾ ಕೃತಿಗಳನ್ನು ರಚಿಸುವುದರಲ್ಲಿಯೂ ತುಂಬಾ ಆಸಕ್ತಿ ಹೊಂದಿದ್ದು ಸೃಜನಶೀಲ ಕಲಾಕೃತಿಗಳನ್ನು ತಮ್ಮ ಕೈಚಳಕದಿಂದ ರಚಿಸುತ್ತಾ ಬಂದಿದ್ದಾರೆ. ಇವರು ರಚಿಸಿರುವ ಕಲಾ ಕೃತಿಗಳಲ್ಲಿ ಮಳೆಯಲ್ಲಿ ನೆನೆದು ಆಟ ಆಡುತ್ತಿರುವ ಹುಡುಗಿ. ರಾಧಾಕೃಷ್ಣ. ಪ್ರಕೃತಿ ಚಿತ್ರ. ಭಾವಚಿತ್ರ. ಹಸುಗಳ ಪಕ್ಷಿಯ ಚಿತ್ರಗಳು ತುಂಬಾ ಕಲಾತ್ಮಕವಾಗಿ ರೂಪ ತಳೆದು ಇವರ ಪ್ರತಿಭೆಯನ್ನು ಸಾಕ್ಷಿಕರಿಸಿವೆ. ವಿಮಲಾ ಅವರಿಗೆ ಅತಿಪ್ರಿಯವಾದ ಪೇಂಟಿಂಗ್ ಎಂದರೆ ಮಳೆಯಲ್ಲಿ ನೆನೆದು ಆಟವಾಡುತ್ತಿರುವ ಹುಡುಗಿ ಕಲಾಕೃತಿ ಅತಿ ಅಚ್ಚುಮೆಚ್ಚು. ಹಳ್ಳಿಯ ದೃಶ್ಯಗಳನ್ನು ಮತ್ತು ಪಕ್ಷಿಗಳ ಸರಳತೆ ಮತ್ತು ನೈಜ ಚಿತ್ರಣವನ್ನು ಬಿಡಿಸುವುದರಲ್ಲಿ ಇವರು ಸಿದ್ದ ಹಸ್ತರು. ಎತ್ತಿನ ಗಾಡಿ ಹಾಗೂ ಹಲವು ಕಲಾ ಕೃತಿಯನ್ನು ವಿವಿಧ ಬಣ್ಣಗಳಿಂದ ಹಲವು ಶೈಲಿಯಲ್ಲಿ ರಚಿಸಿ ಪ್ರದರ್ಶಿಸಿ ಕಲಾಸಕ್ತರ ಮನಸೆಳೆದಿದ್ದಾರೆ. ಹಳ್ಳಿಯ ವಿವಿಧ ಘಟನಾವಳಿಗಳನ್ನು ನೈಜವಾಗಿ ಮತ್ತು ಎಳೆ ಎಳೆಯಾಗಿ ಚಿತ್ರಿಸುವ ಕಲೆಗಾರಿಕೆ ವಿಮಲಾ ಅವರಿಗೆ ಒಲಿದಿದೆ. ಕಲಾ ಶಿಕ್ಷಕರಾಗಿಯೂ 15 ಗ್ರೂಪ್ ಶೋಗಳಲ್ಲಿ ಇವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಕಲೆಯ ಬಗ್ಗೆ ಇವರು ತನ್ನ ಬಿಡುವಿನ ಕಾಲದಲ್ಲಿ ತನಗೆ ಸಾಧ್ಯವಾದಷ್ಟು ರೀತಿಯಲ್ಲಿ LkG ಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ, ಆಸಕ್ತಿ ಇರುವ ಮಹಿಳೆಯರಿಗೆ ಚಿತ್ರಕಲೆಯನ್ನು ಕಲಿಸುತ್ತಾ ಬೆಳೆಸುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

2 thoughts on “ಚಿತ್ರ ಕಲಾವಿದೆ ವಿಮಲ ಎಸ್. ಎನ್.ರವರ ಪರಿಚಯ-ಗೊರೂರು ಅನಂತರಾಜು

  1. ಒಂದೇ‌ ಗುಕ್ಕಿನಲ್ಲಿ ಬರೆದು ಮುಗಿಸಲಾಗಿದೆ..ವಾರ್ತೆಗಳನ್ನು ಓದಿದಂತಾಯಿತು.

Leave a Reply

Back To Top