ಡಾ. ಮೀನಾಕ್ಷಿ ಪಾಟೀಲ್-ಬಿಕ್ಕಳಿಸುತ್ತಿವೆ ಕವಿತೆಗಳು

ಕತ್ತಲಲ್ಲಿರುವೆ ನಾನು
ದೂರದ ಬಾನಿಂದ
ಬೆಳದಿಂಗಳ ಸುರಿವೆ
ನಿನ್ನಂಗಳದಿ ಎಂದು
ನನ್ನ ಕೈಯಲ್ಲಿ ಕೈಯಿಟ್ಟು
ನನ್ನೆದೆಯ ದನಿಯಾಗಿ
ಪಿಸುಗುಟ್ಟಿದ್ದೆ
ಆದರೆ…….
ಘನ ಘೋರ ಮೋಡದಲಿ
ಚಂದ್ರ ಮರೆಯಾದ
ನಿರಾಸೆಯ ಗೋಡೆಗಳ
ಹಿಂದೆ ನಾನೂ ಮರೆಯಾದೆ
ಅಡಗಿದ ಚಂದ್ರ ಅರಗಳಿಗೆಯಲಿ
ನನ್ನ ಬೊಗಸೆ ಬಟ್ಟಲಲ್ಲಿ
ಬಂಧಿಯಾದ
ಮೇಘಗಳ ಮರೆಯಾಟದಂತೆ
ಮೂಡಿ ಮರೆಯಾಗುವ ಶಶಿ
ಬಚ್ಚಿಟ್ಟ ಭಾವಗಳ
ಬಿಚ್ಚಿ ಈಡಾಡು, ತೂರಾಡು
ನನ್ನ ನಕ್ಷತ್ರದಂಗಳದಿ
ಹೆಕ್ಕಿಕೊಳ್ಳುವೆ ಚುಕ್ಕೆ
ಅಕ್ಕರಗಳ ಸಿಕ್ಕಷ್ಟು
ದಕ್ಕಿದಷ್ಟಕ್ಕೆ ದನಿಯಾಗುವೆ
ಹಾಡಾಗುವೆ ನಿನ್ನೆದೆಯ
ಮತ್ತೇರಿದ ಅಮಲಿಗೆ
ಕವಿತೆಯಾಗಿಸುವ ಕಾತರ
ಮನ ಬರಿದಾಗಿದೆ
ಭಾರವಾಗಿವೆ ಭಾವಗಳು
ಎಲ್ಲಿ ಹೋದವೊ
ಹುಡುಕುತ್ತಿದ್ದೇನೆ
ನನ್ನ ಕವಿತೆಗಳ
ನಿನ್ನ ಎದೆಯ ಗೂಡಲ್ಲಿ
ಹೃದಯವನ್ನಷ್ಟೇ ಅಲ್ಲ
ಕದ್ದಿರುವೆ ನನ್ನ ಕವಿತೆಗಳನ್ನು
ಕಾಣೆಯಾಗಿವೆ ನಿನ್ನ ಮಧು ಬಟ್ಟಲಿನ ಬಣ್ಣದಲಿ
ಉಮರ್ ಖಯಾಮನ ಪರಕಾಯದಲಿ
ನಿನ್ನ ಮದಿರೆಯ ಹನಿ ಹನಿಯಲ್ಲೂ ಬಿಕ್ಕಳಿಸುತ್ತಿವೆ ಭಾವಗಳು


One thought on “ಡಾ. ಮೀನಾಕ್ಷಿ ಪಾಟೀಲ್-ಬಿಕ್ಕಳಿಸುತ್ತಿವೆ ಕವಿತೆಗಳು

Leave a Reply

Back To Top