ಮಧು ವಸ್ತ್ರದ್ ಮುಂಬಯಿ ಅವರ ಕವಿತೆ-ನಾಟ್ಯ ಮಯೂರಿ

ಪಂಕಜ‌ ಲೋಚನೆ ಮಂದಹಾಸವ ಬೀರುತಲಿ ನಾಟ್ಯದೊಳು ತಲ್ಲೀನಳಾಗಿಹಳು
ಬಿಂಕ,ಬಿನ್ನಾಣ,ಒನಪು ವಯ್ಯಾರದಿ ನರ್ತಿಸುತ ಜಗವನೇ ಮರೆತಿಹಳು.

ರಂಗು ರಂಗಿನ ವಸ್ತ್ರವಿನ್ಯಾಸದಿ ಪೂರ್ಣಿಮೆ ಶಶಿಯಂತೆ ಹೊಳೆದಿಹಳು
ರಂಗಮಂದಿರದೊಳು ಭಾವಾಭಿವ್ಯಕ್ತಿಯಿಂದ ರಸಿಕರ ಮನ ಸೆಳೆದಿಹಳು

ವದನದಿ ತಿಲಕ,ಹಣೆಯ ಮೇಲೆ ಬೈತಲೆಬೊಟ್ಟು ಕಟಿಯಲಿ ಮೇಖಲೆ ಧರಿಸಿಹಳು
ಮದನನರಸಿ ರತಿದೇವಿಯಂತೆ ಕಣ್ಣನೋಟದಲೇ ಸವಿಮಿಂಚು ಹರಿಸಿಹಳು

ದೇವಲೋಕದಿಂದ ಭುವಿಗೆ ಇಳಿದ ಶಾಪಗ್ರಸ್ಥ ಅಪ್ಸರ ಕನ್ಯೆ ಎನಿಸಿಹಳು
ಹೂವಮೊಗದ ಮುಗುಳ್ನಗೆ ಪರಿಮಳವ ದಶ ದಿಕ್ಕಿಗೂ ಪಸರಿಸಿಹಳು

ನೃತ್ಯಕಲೆಯ ಹಸಿರು ಕಾನನದಲಿ ಚಿಗುರುತಿಹ ಮುಕ್ತ ವಲ್ಲರಿ ಆಗಿಹಳು
ನಿತ್ಯ ಸಾಧನೆಗೈದು ಪುರಾತನ ಕಲೆಯ ಬೆಳೆಸಿಹ ನಾಟ್ಯಮಯೂರಿ ಇವಳು

ಮದರಂಗಿಯ ಹಚ್ಚಿದ ಚಂದದ ಗೆಜ್ಜೆ ಕಾಲ್ಗಳನು ತಾಳಕ್ಕೆ ತಕ್ಕಂತೆ ಕುಣಿಸಿಹಳು
ಅದುರುವ ಅಧರದಿ ಅನುರಾಗ ಗೀತೆ ಹಾಡುತ ಪ್ರೇಮಾಮೃತ ಉಣಿಸಿಹಳು

ನವ ರಸಗಳ ಭಾವ ವೈವಿಧ್ಯತೆಯನು ಕಮಲದಾ ಮೊಗದಲಿ ಬಿಂಬಿಸಿಹಳು
ನವರತ್ನದೊಡವೆಗಳೊಡನೆ ಪ್ರತಿಭೆಯಾಭರಣವ ಧರಿಸಿ ಶೋಭಿಸಿಹಳು..


Leave a Reply

Back To Top