ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಅದೃಷ್ಟದ ಮರಕೆ
ಬಳ್ಳಿಯ ಆಲಿಂಗನ,
ನಿತ್ಯ ಪಡೆಯುತಿದೆ
ಸುಮದ ಸುವಾಸನೆ.
ಬಳ್ಳಿಯು, ನೀರುಣಿಸಿ
ಸಾಕಿದ ಕುವರಿಗೆ
ಮರಳಿ ನೀಡುತಿದೆ
ವಾಸನೆಯ ಮಲ್ಲಿಗೆ.
ಚಂದದ ಗುಲಾಬಿಯು
ಆಕ್ರಮಣಕಂಜಿದೆ.
ಒಡಹುಟ್ಟಿದ ಮುಳ್ಳು
ಕಾವಲು ಕಾಯುತಿದೆ.
ಬಿದಿರ ಮಡಿಲಲಿ
ಚಿಗುರಿದ ಕಳಿಲು
ಬಲಿತು ಉಲಿಯಿತು
ಮಧುರದಿ ಕೊಳಲು.
ಹಸಿಯಾದ ಭೂಮಿಯು
ಹಾತೊರೆದು ಬೀಜಕೆ.
ಬೀಜ ಅನ್ನವ ಮಾಡಿ
ಸಲಹೋದು ಜಗಕೆ.
ಮೊಗ್ಗಿನ ಬಳಿ ಬಂದು
ಗುಂಯೆಂದ ಮಧುಕರ.
ಆಲಿಸಿದ ಆ ಮೊಗ್ಗು
ಹೂವಾಗಿ ಅರಳಿತು.
ಗುಂಯನ್ನೋದ ನಿಲ್ಲಿಸಿ
ದುಂಬಿ ಬಂತು ಮೆಲ್ಲಗೆ,
ಮೌನ ಸಮ್ಮತಿಯಲಿ
ಘಮಿಸಿತು ಮಲ್ಲಿಗೆ.
ವ್ಯಾಸ ಜೋಶಿ