ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

ಒಸರುತಿಹ ಕಂಬನಿಯ ಬಿಸುಪಿನಲಿ ಸಿಹಿನೆನಪುಗಳ ಅರಸುತ್ತಿರುವೆ ಸಾಕಿ
ಕಮರುತಿಹ ವಾಂಛೆಯ ಮೊಗ್ಗಿನಲಿ ಕನಸುಗಳ ಹೆಣೆಯುತ್ತಿರುವೆ ಸಾಕಿ

ಪ್ರೇಮ ಪರ್ವದ ನಶೆಯಲಿ ಮನಸ್ಸುಗಳ ಮಿಲನ ಬೆಸೆದದ್ದೇ ತಿಳಿಯಲಿಲ್ಲ
ಅಡಗುತಿಹ ಹೃದಯ ಹುಮ್ಮಸ್ಸಿನಲಿ ನಾಳೆಗಳ ನಿರೀಕ್ಷಿಸುತ್ತಿರುವೆ ಸಾಕಿ

ಚಂಚಲ ಚಿತ್ತದ ಭ್ರಮಣದಲಿ ನಗುವಿನ ಲಾಸ್ಯಕ್ಕೆ ಸಹ್ಯವಾದದ್ದಷ್ಟೇ ಬಂತು
ಆಕ್ರಂಧಿಸುತಿಹ ಸಮಯ ಅನುರಣನದಲಿ ಭರವಸೆಗಳ ಬಿತ್ತುತ್ತಿರುವೆ ಸಾಕಿ

ಜನುಮ ಜನುಮದ ನಂಟಿಗೆ ಅದಾರಿತ್ತರೋ ವಿರಹದ ಶಾಪ ತಿಳಿದಿಲ್ಲ ಸಖ
ಬೆರಗಾಗುತಿಹ ಬಾಳ್ವೆಯ ಪಯಣದಲಿ ಸಹಜತೆಗಳ ಶೋಧಿಸುತ್ತಿರುವೆ ಸಾಕಿ

ಮುದುಡಿದ ಸುಮದಿ ಸೊಗಡನು ಬಯಸಿದರೆ ಹುಂಬತನವಾದೀತು ನಯನ
ಅಸುವಿಡುತಿಹ ಕಾಯ ಚಲನೆಯಲಿ ಆಕಾಂಕ್ಷೆಗಳ ಕಟ್ಟುತ್ತಿರುವೆ ಸಾಕಿ.

—–

ಜಿನುಗುತ್ತಿರುವ ಆರ್ದ್ರ ಭಾವಗಳ ಬಟ್ಟಲಲಿ ಸವಿಕ್ಷಣಗಳ ನೆನೆಸುತ್ತಿರುವೆ ಸಾಕಿ
ಅಶ್ರುಧಾರೆಯ ಕದಪುಗಳಲಿ ಮಾಸುವ ಪ್ರೇಮದಚ್ಚುಗಳ ತಡಕುತ್ತಿರುವೆ ಸಾಕಿ

ಸ್ನೇಹ ಬೆಸೆದ ಭಾವೋತ್ಕರ್ಷದಲ್ಲಿ ಹೃದಯ ಪ್ರೀತಿಗೆ ಜಾರಿದ್ದೇ ಅರಿವಾಗಲಿಲ್ಲ
ಅನುದಿನ ಅನುಕ್ಷಣ ಜೀವ ಭಾವಗಳ ಸಮಾಗಮವ ವಾಂಛಿಸುತ್ತಿರುವೆ ಸಾಕಿ

ಮೌನ ಬೆಳೆದು ಮಾತು ಮುರಿದಂತೆ ಎದೆಯು ಒಡೆದಂತೆ ಭಾಸವಾಗಿದೆ ಈಗ
ಪಿಸುನುಡಿದ ಮೆಲ್ಲುಸಿರ ರಮ್ಯ ರಿಂಗಣಗಳ ಆಲಿಸಲು ಪರಿತಪಿಸುತ್ತಿರುವೆ ಸಾಕಿ

ಸಾನುರಾಗ ಮೀಟುತಿರಲು ವಿರಹದ ಅಪಶ್ರುತಿ ಮಿಡಿಯಿತಾದರೂ ಹೇಗೆ ಸಖ
ತನುಮನ ಬಳಲಿದರೂ ಹಂಬಲಗಳಲಿ ಹಸನುಗಳನು ಬಯಸುತ್ತಿರುವೆ ಸಾಕಿ

ಭಾವನೆಗಳು ಸತ್ತಲ್ಲಿ ಕನಸುಗಳು ಚಿಗುರುವುದು ಮರೀಚಿಕೆಯಾದೀತು ಕುಸುಮಾ
ಎದೆಯ ಗೂಡನು ನಂದನವನವಾಗಿಸುತ ಒಲವ ಬೆಳೆಯ ಬೆಳೆಸುತ್ತಿರುವೆ ಸಾಕಿ.


4 thoughts on “ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

Leave a Reply

Back To Top