ಡಾ ಸುರೇಶ ನೆಗಳಗುಳಿ-ಅತಿ ಸಣ್ಣ ಕತೆಗಳು


(ಅ) ಭಾವ

ಯಾವುದೂ ಬೇಡವೆಂಬ ಭಾವ ಮೂಡಿತು ಆಕೆ ಕೈ ಕೊಟ್ಟಾಗ.ಎಲ್ಲಾ ಮಾಯವಾಯಿತು ಈಕೆ ಕೈ ಹಿಡಿದಾಗ


ವಿಪರ್ಯಾಸ

ಆತ ಗುರಿಯೆಡೆಗೆ ಸಾಗುತ್ತಿದ್ದ.ಈತ ಗುರಿಯಿಲ್ಲದೆ ತಿರುಗುತ್ತಿದ್ದ.ಇಬ್ಬರೂ ಸಂಧಿಸಿದರು. ಆತ ಕಟಕಟೆಯನೇರಿದ್ದ.ಈತ ಗಹಗಹಿಸಿ ನಗುತ್ತಿದ್ದ.


ಗುರುವ ಗೆದ್ದ ಶಿಷ್ಯ

ಶಿಷ್ಯೋತ್ತಮ ಆತ. ತರಗತಿಯಲ್ಲಿ ಇದ್ದ ದಿನ ವಾರಕ್ಕೊಂದಕ್ಕೂ ಕಡಿಮೆಯಾಗಿ ಪ್ರಾಚಾರ್ಯರಿಗೆ ತಲೆ ನೋವುಂಟು ಮಾಡಿದ್ದ ಆ ವಿದ್ಯಾರ್ಥಿ ಮಗದೊಂದು ದಿನ ದುಬೈ ಅರಸನ ವೈದ್ಯನಾದ.ಪ್ರಾಚಾರ್ಯರು ಹಾಸಿಗೆ ಹಿಡಿದಿದ್ದರು.


ಮಹಾದಾನ

ಮತದಾನದ ಮರುದಿನ‌ ಮಗಳ ಮದುವೆ.ಅದೂ ದೂರದ ಊರಿನಲ್ಲಿ. ಯಾವ ದಾನ ಮಾಡಲಿ ಎಂದಾತ ಹಪಹಪಿಕೆಗೊಳಗಾದ.


ಬೇಸ್ತು

ಆಕೆ ಅತಿ ಬೇಗ ಆತ್ಮೀಯಳಾದಳು ಜಾಲತಾಣದಲ್ಲಿ. ನಿಜ ಸಂಗತಿ ಅರಿವಾದುದು ಆಕೆ ಸಾಲದ ಕಂತು ತೀರಿಸಲು ಸಾಲದ ನೆಪವೊಡ್ಡಿ ಹಣ ಕೇಳಿದಾಗಲೇ


ಬಿಸಿ

ವಿದ್ಯುತ್ ಬಿಲ್ ಗಗನಕೇರಿದ ರಸೀತಿ ಬಂತು.‌ಆತ ಭಾಸ್ಕರನಿಗೆ ಶಾಪ ಹಾಕುತ್ತಾ ಎ.ಸಿ.‌ಯಾಕಾದರೂ ಹಾಕಿಸಿದೆ ಎಂದು ಕೊಂಡ


ಸಾತ್ಮ್ಯ

ಒಂದು ದಿನ ಟಿ.ವಿ. ಇಲ್ಲದಿದ್ದರೆ ಕೇಬಲ್ ನವನ ಮೇಲೆ ಬರುವ ಸಿಟ್ಟಿಗೆ ದೂರ್ವಾಸ ನಾಚ ಬೇಕು


ಸದುಪಯೋಗ

ಎಲ್ಲಾ ದೈನಿಕ‌ ತರಿಸುವ ಖಯಾಲಿ ಆತನಿಗೆ.ಓದುವುದು ಮಾತ್ರ ಅವನ ಹೆಂಡತಿ ಎ ಟು ಝೆಡ್.


ಈ ಕಾಲ

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕನಾಗಿದ್ದ ಕಾರಣದಿಂದ ಆತ ಹಲವಾರು ಬಾರಿ ಹಲವರಿಂದ ಬೈಸಿಕೊಳ್ಳುತ್ತಿದ್ದ.

೧೦
ಪರೀಕ್ಷಿತ

ಡಾಕ್ಟ್ರೇ ಹೊಟ್ಟೆ ನೋವು ಜೋರಿದೆ ಎಂದ ಆತನನ್ನು ವೈದ್ಯರು ಪರೀಕ್ಷಿಸಲು ಮುಂದಾದಾಗ ಆತನೆಂದ ನನಗಲ್ಲ ನನ್ನ ಹೆಂಡತಿಗೆ.


Leave a Reply

Back To Top