ಹೊಸ ವರುಷದಿ ಹೊಸತನದ ನಿರೀಕ್ಷೆಯಲ್ಲಿ ಲೇಖನ ಡಾ.ಸುಮತಿ ಪಿ

ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ.
ಅನೇಕ ಕಡೆಗಳಲ್ಲಿ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.
ಆದರೆ ಈಗೀಗ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಹೆಚ್ಚಿನ ಜನರು ಜನವರಿ ಒಂದರಂದು ಹೊಸ ವರ್ಷವನ್ನು ಆಚರಿಸುತ್ತಾರೆ.
ಹೊಸ ವರುಷ ಎಂದಾಕ್ಷಣ ಅದೇನೋ ಹುರುಪು, ಉತ್ಸಾಹ. ನೋವು, ಗೊಂದಲಗಳನ್ನೆಲ್ಲ ಮರೆತು, ಬಾಳಿನ ಅಧ್ಯಾಯದ ಹೊಸ ಪುಟ ತೆರೆಯುವಂತಹ ಸಮಯ ಎಂದೇ ಹೇಳಬಹುದು. ಒಂದೆಡೆ   ಸಿಹಿ ಕಹಿ ನೆನಪುಗಳನ್ನು ಉಣಬಡಿಸಿದ ವರ್ಷವನ್ನು ಬೀಳ್ಕೊಡುವ ನೋವಾದರೆ, ಇನ್ನೊಂದೆಡೆ ನೂರಾರು  ಆಸೆಗಳನ್ನು ಹೊತ್ತು ತರುವಂತಹ ಹೊಸವರ್ಷವನ್ನು  ಸ್ವಾಗತಿಸುವ ಸಂಭ್ರಮ.

ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ಹೊಸವರ್ಷದಲ್ಲಿ ಬದಲಾಗುವುದು ಕ್ಯಾಲೆಂಡರ್ ಮಾತ್ರವಾದರೂ ಸಹ, ನಾವು ಬದಲಾಗಬೇಕಾದ ಅಗತ್ಯತೆ ಇದೆ. ನಾವು ಮಾಡಿಕೊಳ್ಳುವ ಸಣ್ಣ ಪುಟ್ಟ ಬದಲಾವಣೆಗಳಿಂದ ನಮ್ಮ ಬಾಳು ಹಸನಾಗುತ್ತದೆ ಎಂದಾದರೆ, ಆ ಬದಲಾವಣೆಗಳನ್ನು ನಾವು ಒಪ್ಪಲೇಬೇಕಾಗುವುದು.

ಪ್ರತಿಸಲವೂ ಹೊಸವರ್ಷವೊಂದನ್ನು ಬರಮಾಡಿಕೊಳ್ಳುವ ಹೊಸ್ತಿಲಲ್ಲಿರುವಾಗ, ಜಗತ್ತಿನ ಬೇರೆ ಬೇರೆ ದೇಶಗಳು ಹೊಸವರ್ಷವನ್ನು ಸ್ವಾಗತಿಸುವ ಪರಿ ಬೇರೆ ಬೇರೆಯದ್ದಾಗಿರುತ್ತದೆ. ಅದು ಆಯಾ ದೇಶದ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಸಾಂಸ್ಕೃತಿಕ ಹಿನ್ನೆಲೆಗಳನ್ನು ಅವಲಂಬಿಸಿಕೊಂಡಿರುತ್ತದೆ. ಅನುಸರಿಸುವ ಸಂಭ್ರಮಾಚರಣೆಗಳ ಸ್ವರೂಪಗಳು ವಿಭಿನ್ನವಾಗಿದ್ದರೂ ಸಹ ಅವೆಲ್ಲದರ ಆಶಯ ಹಾಗೂ ನಂಬಿಕೆ ಒಂದೇ ಆಗಿರುತ್ತದೆ. ಹೊಸ ವರ್ಷ ಸಮಸ್ತ ಜಗತ್ತಿಗೆ ಶಾಂತಿ, ನೆಮ್ಮದಿ, ಆರೋಗ್ಯ, ಸೌಭಾಗ್ಯಗಳನ್ನು ಹೊತ್ತು ತರಲೆಂಬುವುದು ಎಲ್ಲರ ಆಶಯವಾಗಿರುತ್ತದೆ.

ಹೊಸ ವರ್ಷದಲ್ಲಿ ನಾವು ಹಿಂದಿನ ವರ್ಷದಲ್ಲಿ ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿಯುವುದರ ಜೋತೆಗೆ, ಹೊಸ ನಿರ್ಣಯ ಕೈಗೊಂಡು,ದೃಢ ಮನ‌ಸ್ಸಿನಿಂದ ಕೆಲಸವನ್ನು ಪೂರ್ಣಗೊಳಿಸಲು ಪ್ರಾರಂಭಿಸುತ್ತೇವೆ, ಅದು ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಇದು ನಮ್ಮಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ಇದರಿಂದಾಗಿ ನಮ್ಮ ಜೀವನದಲ್ಲಿ ಹೊಸ ವರ್ಷದ ಮಹತ್ವವು ಹೆಚ್ಚಾಗುತ್ತದೆ.

ಹೊಸ ವರುಷವು ಪ್ರತೀ ವರುಷವೂ ಬರುತ್ತದೆ. ಕಳೆದು ಹೋದ ಹಳೆಯ ವರುಷದ ನೆನಪಿನಲಿ ನವ ವರುಷವನ್ನು ಸ್ವಾಗತಿಸುತ್ತ, ಹೊಸ ಕನಸುಗಳನು ಬಿಚ್ಚಿಡಲು ಶುರು ಮಾಡುತ್ತೇವೆ.ಪ್ರತೀ ಸಲವು ಏನಾದರೂ ಹೊಸದಾದ ಯೋಜನೆ ಮಾಡಬೇಕು. ಹೊಸ ಯೋಜನೆಗಳು ಹೊಸ ವರುಷದಿಂದಲೇ ಜಾರಿಗೆ ಬರಲೆಂಬ ನಿರ್ಧಾರವನ್ನೂ ತೆಗೆದುಕೊಂಡು ಬಿಡುತ್ತೇವೆ.ಹಳೆಯ ಕೆಟ್ಟ ಚಟಗಳನ್ನು ಬಿಟ್ಟು ಬಿಡಬೇಕು ಎಂತಲೋ, ಹೊಸದಾದ ಕೆಲಸವನ್ನು ಶುರು ಮಾಡಿಕೊಳ್ಳಬೇಕೆಂತಲೊ  ಯೋಚನೆಗಳು ಬರುತ್ತವೆ. ಹಾಕಿಕೊಳ್ಳುವ ಯೋಜನೆಗಳು  ಒಂದೇ ಎರಡೇ ನೂರಾರು. ಮತ್ತದೇ ಚಾಳಿ.ಪ್ರತೀ ವರ್ಷವೂ ಏನೇನೋ ಯೋಜನೆ, ಯೋಚನೆ.ಆದರೆ ಆ ಎಲ್ಲಾ ಯೋಜನೆಗಳಲ್ಲಿ ಒಂದಾದರೂ ನೆರವೇರಿದೆಯಾ ಎಂದು ಮತ್ತೆ ಮತ್ತೆ ಯೋಚಿಸಲೇಬೇಕಾದಂತಹ ಸಂದರ್ಭ ಕೂಡ ಇದಾಗಿದೆ.

ನಮ್ಮದಾದ ಜೀವನವೊಂದಕ್ಕೆ ನೀಲನಕ್ಷೆಯನ್ನು ತಯಾರಿಸಿಕೊಳ್ಳಲು ಪ್ರಯತ್ನ ಮಾಡಬೇಕು.ಯಾಕಂದರೆ ಹೊಸವರ್ಷದಂದು ನಾವು ತೆಗದುಕೊಂಡ ನಿರ್ಧಾರ ನಮ್ಮ ಬದುಕಿನಲ್ಲಿ ಹೊಸತೊಂದು ಬೆಳಕು ಮೂಡಿಸಬಹುದು, ಹಳೆಯ ಕಹಿಗಳನ್ನು ಹೊಡೆದೋಡಿಸಬಹುದು, ಬೇಸರ, ದುಃಖ ಸಿಟ್ಟು, ಆಕ್ರೋಶವನ್ನೆಲ್ಲ  ಬದಿಗಿರಿಸಿಕೊಳ್ಳಬಹುದು. ಹೊಸತಾದ ಖುಷಿಯ ಚಿಲುಮೆಯನ್ನು ಎಲ್ಲಾದರೂ ಹುಡುಕಬಹುದೆಂಬ ಪುಟ್ಟ ಭರವಸೆ ಸಿಗಬೇಕು. ನಗುವಿನ ತಳಹದಿಗೊಂದು ಭದ್ರವಾದ ಕಟ್ಟೆಯನ್ನು ಕಟ್ಟಿ ಶಾಶ್ವತವಾಗಿ ನಮ್ಮಲ್ಲಿಯೇ ಉಳಿಯುವಂತೆ ಮಾಡಬೇಕು ಎಂಬ ಹಾಗೆ ಬಹುಜನರು ಕನಸು ಕಾಣುತ್ತಾರೆ.  
ಹೊಸದಾದ ಬದುಕನ್ನು ಹೊಸ ವರುಷದಿಂದಲೇ ಕಾಣಬೇಕೆಂಬುದು ಬಹುಜನರ ಆಸೆಯೂ ಆಗಿರುತ್ತದೆ.

ಹೊಸ ವರುಷಕ್ಕಾಗಿ ಪ್ರತೀ ವರುಷವೂ ಹೊಸತಾದ ಚಿಗುರುಗಳನ್ನು ಬೆಳೆಯಿಸಿಬಿಡುತ್ತೇವೆ.ಆದರೆ ಮುಂದಿನ ವರುಷದ ಹೊಸ ವರುಷ ಬರುವ ವರೆಗೂ ಆ ಚಿಗುರು ಚಿವುಟಿ ಹೋದರೂ ಆಶ್ಚರ್ಯವಿಲ್ಲ.ಮೂರು ನಿಮಿಷಗಳ ಯೋಜನೆಗಳು ಎಷ್ಟು ದಿನ ತಾನೇ ಉಳಿಯಾವು?  ಮುನ್ನೂರೈವತ್ತೈದು ದಿನಗಳೂ ಹೊಸ ವರುಷವೇ.ಈ ವರುಷ ಮುಗಿದು ಮುಂದಿನ ವರುಷ ಬರುವವರೆಗೂ ಇದು ಹೊಸವರುಷವೇ.
ಪ್ರತೀ ದಿನವೂ ಹೊಸತೆಂಬ ಸತ್ಯವನ್ನು ತಿಳಿಯಬೇಕು.ಕಳೆದು ಹೋದ ಕ್ಷಣಗಳೆಂದೂ ಮರಳಿ ಬರಲಾರವು. ಹೊಸತಾದ ಭಾವಗಳಿಗೆ ಹೊಸ ಜೀವಕಳೆ ನೀಡಬೇಕು. ನಿನ್ನೆಯ ದಿನ ಇವತ್ತಿರಲಾರದು.ಭೂತಕಾಲದ ನೆನಪಿನಲ್ಲಿ, ವರ್ತಮಾನದ ಆಸರೆಯಲ್ಲಿ, ಭವಿಷ್ಯತ್ ಕಾಲವನ್ನು ನಿರೀಕ್ಷಿಸುತ್ತ ಸಾಗಲೇಬೇಕು.. ಇನ್ನೆಂದೋ ಬರುವ ಹೊಸವರುಷವನ್ನು ಸ್ವಾಗತಿಸುವ ಮುಂಚೆ ಕಳೆಯುವ ಪ್ರತೀ ದಿನವೂ ಹೊಸ ವರುಷದಲ್ಲಿ ನೆನಪಿಸುವಷ್ಟು ಸಾರ್ಥಕತೆಯನ್ನು ಪಡೆಯಬೇಕು. ಮತ್ತದೇ ಹೊಸವರುಷದ ನೆಪದಲ್ಲಿ ಪಾರ್ಟಿಯೋ, ಗೀರ್ಟಿಯೋ ಮಾಡಿ ಮೆರೆಯುವ ಬದಲು, ಕ್ಷಣ ಕ್ಷಣದ ಸಮಯವನ್ನೂ ಯೋಚಿಸುವಂತೆ, ಬದುಕುವಂತೆ, ಎಲ್ಲವೂ ಹಸನಾಗುವಂತೆ ಮಾಡಿಕೊಳ್ಳಬೇಕು. ಎಲ್ಲ ವರುಷಗಳೂ ಎಲ್ಲಾ ಕ್ಷಣಗಳೂ ಬದುಕಿನಾದ್ದಂತ ನೆನಪಿಸುವ ಒಳ್ಳೆಯ ಕ್ಷಣಗಳ ಹಳೆಯ ಕ್ಯಾಲೆಂಡರ್ ನ್ನು ಮನಸ್ಸಿನಾಳದಲ್ಲಿ ಇರಿಸಿಕೊಂಡರೆ ಬದುಕೆಷ್ಟು ಮಧುರ ಅಲ್ಲವೇ?

ನಾವು ಹೊಸವರುಷಕ್ಕೆ ಒಂದಷ್ಟು ಒಳ್ಳೆಯ ಯೋಜನೆಗಳನ್ನು ಹಾಕಿಕೊಳ್ಳಲೇಬೇಕು. ಅವುಗಳೆಷ್ಟು ದಿನಗಳು ಜೊತೆಗೆ ಬರುವುದೋ ಗೊತ್ತಿಲ್ಲ..ಆದರೆ ಒಂದಷ್ಟು ಕನಸುಗಳನ್ನಾದರೂ ಕಾಣೋಣ.ಹೊಸ ವರುಷವು ಕಾಲೂರುತ್ತಿದೆ. ಹೊಸ ಭರವಸೆಗಳೇ ಮತ್ತೊಮ್ಮೆ ಬರಲಾರದಾ?
ಹೊಸ ಕನಸು,ಹೊಸ ಹುರುಪು, ಹೊಸ ಭರವಸೆ, ಹೊಸ ಗುರಿ, ಹೊಸ ಸಾಹಸ, ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ. ಇದು 2023ಕ್ಕೆ ವಿದಾಯ ಹೇಳಿ 2024ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ.

ಜನವರಿ ಒಂದು  ಬರಿಯ ದಿನವಲ್ಲ, ಹೊಸ ಉಲ್ಲಾಸ, ಹೊಸ ವಿಶ್ವಾಸ, ಹೊಸ ಚೈತನ್ಯ ತರುವ ಶುಭ ಗಳಿಗೆ.
  ೨೦೨೩  ಮುಗಿಯಿತು. ಇನ್ನೆಂದೂ ಇದು ಸಿಗದು.ಒಂಥರಾ ಭಾವುಕ, ಭಾವನಾತ್ಮಕ ಕ್ಷಣವಿದು. ಯಾಕೆಂದರೆ, ಸಮಯ ಎಂಬುದು ಅದ್ಭುತ ಮತ್ತು ಅಮೂಲ್ಯ. ಈ ದೃಷ್ಟಿಯಿಂದ ನೋಡಿದರೆ ಪ್ರತೀ ವರ್ಷವೂ ಸರಿಯುವ ಕ್ಷಣ ಮನಸಿನಲ್ಲೇನೋ ನೋವು ತರುತ್ತವೆ. ಹಾಗಂತ,  ನೊಂದು ಕುಳಿತುಕೊಳ್ಳಬೇಕಾಗಿಲ್ಲ. ಯಾಕೆಂದರೆ, ನಮ್ಮ ಬದುಕಿನ ಅದ್ಯಾಯದ ಹೊಸ ಪುಟ ತೆರೆಯಲು, ಹೊಸ ಉಲ್ಲಾಸ, ಹೊಸ ಚೈತನ್ಯ, ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ. ಇದು ಬರೀ ಹೊಸ ಕ್ಯಾಲೆಂಡರ್ ತಂದು ಗೋಡೆಯಲ್ಲಿ ನೇತು ಹಾಕುವ ಸಮಯವಲ್ಲ.೨೦೨೩ರ ನಮ್ಮಬದುಕನ್ನು  ಸಿಂಹಾವಲೋಕನ ಮಾಡುವ ಹೊತ್ತು. ಕಳೆದ ವರ್ಷ ಏನು ಮಾಡಿದ್ದೇವೆ.ಕಳೆದ ವರ್ಷದ ಅನುಭವಗಳೇನು? ಒಳ್ಳೆಯದೇನು, ಕೆಟ್ಟದೇನು ಎಂಬ ವಿಮರ್ಶೆಯ ಜೊತೆಗೆ ಈ ವರ್ಷ ನಾವೇನು ಮಾಡಬೇಕು?, ನಾವೇನು ಮಾಡಬಾರದು? ಎಂಬುದನ್ನು ನಿರ್ಧರಿಸುವ ಕ್ಷಣವಿದು.
ಹೊಸ ಕನಸುಗಳನ್ನು  ಕಟ್ಟುವ,ನನಸಾಗಿಸಲು ಯೋಜನೆ ಹಾಕುವ ಕ್ಷಣ, ಕಳೆದ ವರ್ಷದ ನಮ್ಮ ಜೀವನದ ಅನುಭವ ಹಾಗೂ ಭವಿಷ್ಯದ ಗುರಿಯನ್ನು ನಿರ್ಧರಿಸಿ ಮುನ್ನಡೆದರೆ ನಮ್ಮ ಬದುಕು ಇನ್ನಷ್ಟು ಖುಷಿಯಾಗಿರಲು ಸಾಧ್ಯ.

ಒಂದು ವರ್ಷದಲ್ಲಿ ಪಡೆದ ಅನುಭವವನ್ನು  ವಿಮರ್ಶೆಯ ತಕ್ಕಡಿಗೆ ಹಾಕಿ ಒಳಿತು ಕೆಡುಕುಗಳನ್ನು ತೂಗಬೇಕಾಗಿದೆ. ಕೆಟ್ಟದ್ದನ್ನು ಅಲ್ಲೇ ಬಿಟ್ಟು, ಒಳ್ಳೆಯದನ್ನು ಬದುಕಿನಲ್ಲಿ ಅನುಸರಿಸಿಕೊಂಡು ಹೋಗಬೇಕಾಗಿದೆ. ಸಮಯವೆಂಬುವುದು ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಸರಿದು ಹೋಗಿರುತ್ತದೆ.ಹಾಗಾಗಿ ಬದುಕಿನಲ್ಲಿ ಪ್ರತಿಕ್ಷಣವೂ ಅಮೂಲ್ಯ.

ಸಮಯ ಉತ್ಕೃಷ್ಟ. ಆದರೆ, ಹೊಸ ವರ್ಷದ ಹೊಸ ಹುರುಪಿನಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಂಡು ಮತ್ತೆ ಮರೆತರೆ ಫಲವಿಲ್ಲ. ಪ್ರತಿಕ್ಷಣವನ್ನು ಪ್ರೀತಿಸಬೇಕು. ಪ್ರತಿಕ್ಷಣ, ಪ್ರತಿದಿನವೂ ಹೊಸದಾಗಿರಬೇಕು. ಹೊಸ ಹುಮ್ಮಸ್ಸಿರಬೇಕು. ಹೊಸತನದ ಹುಡುಕಾಟ ನಮ್ಮಿಂದಾಗಬೇಕು,ಹೊಸದನ್ನು ಸಾಧಿಸುವ ಛಲದೊಂದಿಗೆ ದಿನದ ಪಯಣ ಸಾಗಬೇಕು.

 ೨೦೨೩ರಲ್ಲಿ ಎದುರಾದ ಅನೆಕ ನೋವುಗಳನ್ನು ಮರೆತು, ಬದುಕು ನಡೆಸಿದ್ದೇವೆ. ೨೦೨೪ ನ್ನು ಕೂಡ ನಾವು ನವ ಚೈತನ್ಯದಿಂದ ತುಂಬು ಭರವಸೆಯೊಂದಿಗೆ,ಹೊಸ ಕನಸುಗಳನ್ನು ನನಸು ಮಾಡುವ ಯೋಜನೆ,ಯೋಚನೆಯೊಂದಿಗೆ ಸ್ವಾಗತಿಸೋಣ.ನಮ್ಮ ವೃತ್ತಿ ಹಾಗೂ ಪ್ರವೃತ್ತಿಯ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಬೇಕು,ಶ್ರಮಪಟ್ಟು ದುಡಿಯಬೇಕು.ಪ್ರವೃತ್ತಿಯಲ್ಲಿಯೂ  ಹೆಚ್ಚಾಗಿ ತೊಡಗಿಸಿಕೊಂಡು, ಕೊಡುಗೆಯನ್ನು ಸಮರ್ಪಿಸಬೇಕಾಗಿದೆ.ಹಾಗಾಗಿ ನಮ್ಮ ಬದುಕಿನಲ್ಲಿ ಹೊಸ ವರುಷ ಹೊಸ ಜೀವನ.ನಿತ್ಯನೂತನ.
ಹೊಸ ವರ್ಷವು ಐತಿಹಾಸಿಕ ದಿನವಾಗಿದೆ. ಇದು ನಮ್ಮ ಜೀವನದಲ್ಲಿ ಒಂದು ಪ್ರಮುಖ ದಿನವಾಗಲಿ. ಹಿಂದಿನ ವರ್ಷದ ತಪ್ಪುಗಳಿಂದ ಕಲಿತು, ಮುಂದಿನ ಪಯಣವನ್ನು ಹೊಸ ಹೆಜ್ಜೆಗಳೊಂದಿಗೆ ಪ್ರಾರಂಭಿಸೋಣ. ಇದು ನಮ್ಮ ಜೀವನಕ್ಕೆ ಹೊಸ ಆಯಾಮಗಳನ್ನು ನೀಡಲಿ.  ಇದರಿಂದ ನಮ್ಮ ಜೀವನ ಇನ್ನಷ್ಟು ಮತ್ತಷ್ಟು ಉಜ್ವಲವಾಗಲಿ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ‌.


Leave a Reply

Back To Top