ಮಮತಾ ಶಂಕರ್ ಕವಿತೆ ತಮಸೋಮಾ

ಕತ್ತಲು ಬೆಳಕು ಒಂದಕ್ಕೊಂದು
ಮಾತುಕತೆ ನಡೆಸ ಬಯಸಿ
ಒಂದನ್ನು ಇನ್ನೊಂದು
ಹಿಡಿಯಲು ಆಡುತ್ತಾ ಬಂದವು

ಎರಡೂ ಇನ್ನೇನು ದಕ್ಕಿದವು
ಒಂದು ಇನ್ನೊಂದರ ತೆಕ್ಕೆಗೆ ಅನ್ನುವಾಗ
ನಡುವೆ ಇರುವ ತೆಳುಗೆರೆಯ ದಾಟಲಾರದೆ ತಿಣುಕಾಡಿದವು…

ಕತ್ತಲನ್ನು ಅಪ್ಪಿಕೊಳ್ಳಲು
ಬೆಳಕು ಕೈ ಚಾಚಿದರೆ
ಬೆಳಕಿನತ್ತ ಬರಲಾಗದೆ ಕತ್ತಲು
ಅಳುತ್ತಿತ್ತು…
ನಾನು ಸತ್ಯ ಎಂಬ ಧೃಡ
ವಿಶ್ವಾಸ ಬೆಳಕಿನದು
ನಾನು ಮಿಥ್ಯವಲ್ಲ ಆ ಬದಿಯ
ಮುಖ ಎಂಬುದು ಅರಿವಾಗಲಿ
ಎಲ್ಲರಿಗೆ
ಎಂಬ ನೀರಿಕ್ಷೆ ಕತ್ತಲಿನದು.,.

ಬೆಳಕು ಹಕ್ಕಿಗಳ ಕಲರವ,
ಹೂ ಬಿರಿವ ಸುಗಂಧ,
ಇಬ್ಬನಿಯ ಶೀಥಲತೆ
ಮಂದ ಮಾರುತದಿ
ಮೈಮುರಿದು ಬರುವ
ಹೊಂಗಿರಣ

ಏನೆಲ್ಲ ತಯಾರಿ ಮಾಡಿ
ಕತ್ತಲೆಗೆ ಕರೆಯುತ್ತಿತ್ತು

ಏನು ಮಾಡಿದರು
ಕತ್ತಲಿಗೆ ಬೆಳಕಿನ ಮುಖ
ನೋಡಲಾಗಲಿಲ್ಲ

ಬೆಳಕಿಗೆ ಕತ್ತಲನು
ಹಿಡಿದುಕೊಳ್ಳಲಾಗಲಿಲ್ಲ

ಕತ್ತಲಿನ ನಿಗೂಢ ಮೌನ
ಬೆಳಕಿಗೆ ಅರ್ಥವಾಗಲೇ ಇಲ್ಲ
ಬೆಳಕಿನ ಮಾತುಗಳ ಕತ್ತಲು ಕಲಿಯಲೇ ಇಲ್ಲ

ಎರಡರ ನಡುವಿನ
ದಾಟಲಾರದ
ಗೆರೆಯ ಮೇಲೆ ಅವರು
ಆ ದಡವ ಸೇರುವ ದೋಣಿಯಲಿ ಕುಳಿತು
ಹುಟ್ಟು ಹಾಕಿ ಸಾಗುತ್ತಾ
ತಮಸೋಮಾ…. ಎಂಬುದ ನೆನೆಯುತ್ತಾ
ಬೆಳಗಿಗೆ ಕರಗುವ ನಕ್ಷತ್ರಗಳ ಎಣಿಸುತ್ತಿದ್ದರು


4 thoughts on “ಮಮತಾ ಶಂಕರ್ ಕವಿತೆ ತಮಸೋಮಾ

Leave a Reply

Back To Top