ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ರಸ್ತೆಗಳು ದಣಿಯುವದಿಲ್ಲ
ರಸ್ತೆಗಳಿಗಿಲ್ಲ ದುಃಖ ದಣಿವು ಬೇಸರ,
ಕೇಳಲಾರವು ಎಂದೂ ಯಾರ ಆಸರ,
ಯಾವ ಕಷ್ಟಕ್ಕೂ ಬಿಡಲಾರವು ನಿಟ್ಟುಸಿರ,
ರಸ್ತೆಗಳಿಗಿಲ್ಲ ಇನ್ನೊಬ್ಬರ ಮೇಲೆ ತಾತ್ಸಾರ,
ದುಷ್ಕರ್ಮಿ ದುಷ್ಟರಿಗೆ ಕೇಳಲಿಲ್ಲ ನೀವ್ಯಾರು? ಎಂದು,
ಕೆಟ್ಟ ಕಿಡಿಗೇಡಿಗಳಿಗೆ ಬಯ್ಯಲಿಲ್ಲ ನೀವ್ಯಾಕೆ? ಹೀಗೆಂದು ,
ತುಂಬಿ ತುಂಬಿ ತರಲಿ ಕೇಳಲಿಲ್ಲ ಏನಿದೆ? ಎಂದು,
ಹೊತ್ತು ಹೊತ್ತು ಸಾಗಿಸುತ್ತಿದ್ದರು ಬಯ್ಯಲಿಲ್ಲ ಎಲ್ಲಿಗೆ? ಹೀಗೆಂದು.
ಹೊತ್ತು ನಡೆದಿವೆ ನಿತ್ಯ ಸಾವಿರಾರು ವಾಹನ,
ಎಷ್ಟೇ ಬರಲಿ ಎಷ್ಟೇ ಹೋಗಲಿ ರಸ್ತೆ ಮಾತ್ರ ಸಾವಧಾನ,
ಏನೇ ಬಂದರೂ ಅವುಗಳಿಗೆ ಇಲ್ಲ ದುರವ್ಯಸನ,
ನನ್ನ ಮೇಲೆ ಹೋಗಬರುವವರೆಲ್ಲ ನನಗೆ ಸರಿಸಮಾನ.
ಪ್ರಶ್ನೆ ಇಲ್ಲ, ಹೊತ್ತು ತಂದರು ಲೆಕ್ಕವಿಲ್ಲದಷ್ಟು ತೂಕ,
ಕಳಪೆ,ಕಳ್ಳ ವಹಿವಾಟಿನಲ್ಲಿ ಕಾರಭಾರ ನನಗ್ಯಾಕ,
ಯಾರೂ ಯಾವಾಗ ಎಲ್ಲಿ, ಗಳಿಸಿದರು ,ಇಲ್ಲ ನನಗೆ ಲೆಕ್ಕ,
ಯಾರೂ, ಯಾವಾಗ, ಎಲ್ಲಿ ಬಿದ್ದು ಸತ್ತರು,ಇಲ್ಲ ನನಗೆ ಶೋಕ.
ರಸ್ತೆಗಳು ಹೇಳುತ್ತವೆ ಎಂಥವರು ಬರಲಿ, ಅವರು ನನ್ನವರು,
ರಸ್ತೆಗಳು ಹೇಳುತ್ತವೆ ಎಂಥವರು ಹೋಗಲಿ, ಅವರು ನನ್ನವರು,
ಆದ್ದರಿಂದಲೇ ನಾನೂ ರಸ್ತೆ ಆಗಬೇಕು, ಆಗುತ್ತೇನೆ.ಸಾಕು ಎಲ್ಲ,
ಯಾಕೆಂದರೆ ರಸ್ತೆಗಳು ಎಂದೆಂದೂ ದಣಿಯುವದಿಲ್ಲ.
ರಸ್ತೆಯಂತೆ ನಾನಾಗಬೇಕು ಮೌನ,
ಸದಾ ನಾ ಮಾಡುವಂತಾಗಲಿ ಪರಶಿವನ ದ್ಯಾನ,
ಇಲ್ಲವಾಗಬೇಕು ಈ ಲೋಕದ ವಹಿವಾಟದ ಯಾನ,
ದಣಿವಿಲ್ಲದ ರಸ್ತೆಗಳಲ್ಲಿ ದೇವರಡಗ್ಯಾನ ಕಾಣ.
ಸುಜಾತಾ ಪಾಟೀಲ ಸಂಖ