ಕಾವ್ಯ ಸಂಗಾತಿ
ಗೌರಿ ಪ್ರಿಯ ಅವರ ಕವಿತೆ
ಗಜಲ್
ಬದುಕಿನ ಬಂಡಿಗೆ ಬಂಗಾರ ಬಣ್ಣ ಬಳಿಯುವುದಿದೆ ಬಾಕಿ
ಉರುಳುವ ಚಕ್ರವ ಸಿಂಗರಿಸಿ ಖುಷಿ ಪಡುವುದಿದೆ ಬಾಕಿ
ಕಾಲಕ್ಕೇಕಿಷ್ಟು ಅವಸರ ರೆಪ್ಪೆ ತೆರೆಯುವುದರೊಳಗೆ ನಾಗಾಲೋಟ
ಬಾಳ ಸುಕ್ಕುಗಳ ಎಳೆ ಹೊಸೆದು ಹಣತೆ ಬೆಳಗಿಸುವುದಿದೆ ಬಾಕಿ
ಕಿಟಕಿ ಸರಳುಗಳ ಹಿಂದೆ ನಿಟ್ಟುಸಿರ ಕೊಡ ತುಂಬಿ ತುಳುಕುತ್ತಿದೆ
ಬಾಗಿಲುಗಳಿಗೆ ಜೀವ ತುಂಬಿ ತೊನೆಯಾಡುವ ತೆನೆ ಕಟ್ಟುವುದಿದೆ ಬಾಕಿ
ನೋವಿನ ನೂಲುಗಳಿಂದ ಮೇಲಿನವನು ಹೆಣೆದ ಭಾರ ಬದುಕಿದು
ನಂಟಿಗೆ ನಾರುವ ಹತ್ತಾರು ಗಂಟುಗಳ ಬಿಡಿಸುವುದಿದೆ ಬಾಕಿ
ಧರೆಗಿಂತ ವಿಶಾಲ ಹೃದಯದಲಿ ಅದೆಷ್ಟು ಆಸೆ ನಂಬಿಕೆಗಳ ಸಮಾಧಿ
ಹೊತ್ತೊಯ್ಯುವುದೇನಿದೆ ಯಾತ್ರೆಯಲಿ ಗೌರಿ ಶಿವನ ಸಾಕ್ಷಾತ್ಕರಿಸುವುದಿದೆ ಬಾಕಿ
ಗೌರಿ ಪ್ರಿಯ