ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಮೈಲಿಗೆ
ಯಾಕೆ ಬೇಕಿತ್ತು
ಬದುಕಿಗೆ ಒಂದಿಷ್ಟು
ಪ್ರೇಮ ನಾಟಕದ
ಸಂಕುಚಿತ ಕೊಳಚೆಗಳು
ಏತಕ್ಕೆ ಬೇಕಿತ್ತು
ಜೀವನಕ್ಕೆ
ಒಂದಷ್ಟು ಕೆಟ್ಟ
ಅವಮಾನವೀಯತೆಯ
ಹಾಸಿಗೆಯ
ಮಡಿ ಮೈಲಿಗೆಗಳು.
ಹೆಣ್ಣಿನ ಒಡಲ
ಗರ್ಭದಾಳದ
ರಕ್ತದ ವಾಸನೆಯ
ಗಂಧಕ್ಕಿಂತ
ನಿನ್ನ ಗಂಡಸ್ತನದ
ದರ್ಪದ ಸುಗಂಧ ದ್ರವ್ಯ
ಮಿಗಿಲೇನು??
ಗಂಡೆಂಬ ಅಹಂ
ಗರ್ಭಗುಡಿಯಲ್ಲಿ
ನಿನಗೆ ಮಾತ್ರ ಸ್ಥಾನವೇನು??
ಒಮ್ಮೆ ನೀ ಸುಖದ
ಸುಪ್ಪತ್ತಿಗೆಯಲ್ಲಿ
ಅವಳ ಕಿವಿಯಲ್ಲಿ
ಉಸುರಿಸಿ
ಪ್ರೀತಿಯನ್ನು ಕಕ್ಕಿದ್ದಕ್ಕೆ
ಆ ಗರ್ಭ ನಿಂತಿತ್ತು…
ಅಂದು ಕಕ್ಕಿದ್ದನ್ನು
ಇಂದು ಕೊಯ್ದು
ಕಸಕ್ಕೆ ಹಾಕುವ
ಕೈಗಳಿಗೆ ಮೆತ್ತಿದ
ಆ ರಕ್ತದ ಗಂಧ
ನಿನ್ನ ತಾಯಿಯನ್ನು
ನೆನಪಿಸಲಿಲ್ಲವೇನೋ..?
ಭೂಮಿಗೆ ನೀ
ಬಂದ ಆ ದಿನಕ್ಕೆ
ಪಶ್ಚಾತಾಪ
ಈ ಧರಣಿ ಪಟ್ಟು
ತನ್ನೊಳಗೆ
ಎಂದಿನಂತೆ ನಿನ್ನ
ಪಾಪಕ್ಕೆ ಹುಟ್ಟಿದ
ಪಿಂಡವನ್ನು
ತನ್ನ ಗರ್ಭದೊಳಗೆ
ಮಗುವಿನಂತೆ
ಗೊಬ್ಬರ ಮಾಡಿಕೊಂಡಿತು
ಶೃತಿ ರುದ್ರಾಗ್ನಿ.
One thought on “ಶೃತಿ ರುದ್ರಾಗ್ನಿ ಕವಿತೆ-ಮೈಲಿಗೆ”