ಹೆಣ್ಣೊಬ್ಬಳು ಗರ್ಭಕೋಶಗಳೆರಡು!! ಡಾ. ಅರಕಲಗೂಡು ನೀಲಕಂಠ ಮೂರ್ತಿ

ದ್ವಿಗರ್ಭಾಶಯ (Uterus Didelphys)

(ಅಮೆರಿಕದ ಅಲಬಾಮದಲ್ಲಿ 32 ವರ್ಷ ವಯಸ್ಸಿನ ಕೆಲ್ಸಿ ಹ್ಯಾಚರ್ – Kelsey Hatcher – ಎಂಬ ಒಬ್ಬ ಮಹಿಳೆ ತನ್ನ ಡಬಲ್ ಗರ್ಭಕೋಶಗಳೆರಡರಲ್ಲೂ ಬಸಿರು ತುಂಬಿಕೊಂಡಿರುವ ಸದ್ದಿ ಇತ್ತೀಚೆಗೆ ಬಿತ್ತರವಾಗಿದೆ. ಇಂಥ ಡಬಲ್ ಗರ್ಭಕೋಶಗಳೆರಡಲ್ಲೂ ಮಹಿಳೆ ಒಬ್ಬಳು ಗರ್ಭಿಣಿಯಾಗುವುದು ಜಗತ್ತಿನಲ್ಲಿ ಐದು ಕೋಟಿಗೆ ಒಬ್ಬ ಮಹಿಳೆಯಲ್ಲಂತೆ. ಇತ್ತಿಚಿನ ಕಾಲದಲ್ಲಿ ಹೆಚ್ಚಿನ ಪ್ರಚಾರಕ್ಕೆ ಒಳಪಟ್ಟಿದ್ದ ಅಂಥ ಒಂದು ಉದಾಹರಣೆ, 2019ರಲ್ಲಿ ಬಾಂಗ್ಲಾದೇಶದ 20 ವಯಸ್ಸಿನ ಆರಿಫಾ ಸುಲ್ತಾನ ಎಂಬ ಮಹಿಳೆ ತನ್ನ ದ್ವಿಗರ್ಭಾಶಯಗಳಲ್ಲೂ ಗರ್ಭಿಣಿಯಾಗಿ ಎರಡು ಆರೋಗ್ಯಕರ ಅವಳಿಗಳಿಗೆ ಜನ್ಮ ಕೊಟ್ಟಿದ್ದು!
               ********

ನೀವು ಸರಿಯಾಗಿ ಓದಿದ್ದೀರಿ. ಒಬ್ಬಳೇ ಮಹಿಳೆಯ ದೇಹದ ಭಾಗವಾಗಿ ಎರಡು ಗರ್ಭಕೋಶಗಳಿರುವುದು ನಿಜವಾದರು, ಅದು ಅತ್ಯಂತ ವಿರಳ – ಕೇವಲ 0.3 ಪ್ರತಿಶತ ಜನಸಂಖ್ಯೆಯಲ್ಲಿ ಕಂಡುಬರುವ ಜನ್ಮಜಾತ ವೈಪರೀತ್ಯ (ಹುಟ್ಟುವಾಗಲೆ ಹಾಗೆ ಪಡೆದುಕೊಂಡು ಜನಿಸಿದ್ದ ವೈಕಲ್ಯ). ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಯೂಟಿರಸ್ ಡೈಡೆಲ್ಫಿಸ್ ಅಥವ ಡಿಡೆಲ್ಫಿಸ್’ ಅಥವ ಡಬಲ್ ಯೂಟಿರಸ್ (ದ್ವಿಗರ್ಭಾಶಯ) ಎನ್ನುತ್ತಾರೆ. ಇಂಥ ಗರ್ಭಾಶಯಗಳ ಒಳವಿಸ್ತಾರ (ಕ್ಯಾವಿಟಿ ಅಥವ ಟೊಳ್ಳೆ) ಸಾಮಾನ್ಯ ಗರ್ಭಾಶಯದ್ದಕ್ಕಿಂತ ಕಿರಿದಾಗಿರುತ್ತದೆ. ಆ ಎರಡು ಗರ್ಭಕೋಶಗಳೂ ಒಂದೊಂದು ತನ್ನದೇ ಆದ ಡಿಂಬನಾಳ (ಫೆಲೋಪಿಯನ್ ಟ್ಯೂಬ್) ಹಾಗು ಅಂಡಾಶಯ (ಓವರಿ) ಗಳನ್ನು ಹೊಂದಿರುತ್ತವೆ.

Bicornuate Uterus (ಬೈಕಾರ್ನುಯೇಟ್ ಗರ್ಭಕೋಶ)

ಜನನಕ್ಕೆ ಮುನ್ನ ಭ್ರೂಣಾವಸ್ಥೆಯಲ್ಲಿ ಗರ್ಭಕೋಶದ ಸ್ಥಳದಲ್ಲಿ ಎರಡು ನಾಳಗಳಿರುತ್ತವೆ (ಮುಲ್ಲೇರಿಯನ್/ಮಲ್ಲೇರಿಯನ್ ಡಕ್ಟ್ಸ್). ಭ್ರೂಣ ಬೆಳೆದಂತೆ ಆ ಕೊಳವೆಗಳು ಒಟ್ಟಾಗಿ ಕೂಡಿಕೊಂಡು ಗರ್ಭಕೋಶವಾಗಿ ಮಾರ್ಪಾಡಾಗುತ್ತದೆ. ಅದೊಂದು ತಲೆಕೆಳಕಾಗಿಟ್ಟ ಟೊಳ್ಳು ಪೇರಲೆ ಹಣ್ಣಿನ ಆಕಾರದಲ್ಲಿರುತ್ತದೆ. ಆದರೆ ದ್ವಿಗರ್ಭಾಶಯದ ಪರಿಸ್ಥಿತಿಯಲ್ಲಿ ಈ ಕೊಳವೆಗಳು ಒಟ್ಟಾಗಿ ಕೂಡಿಕೊಳ್ಳದೆ, ಪ್ರತಿಯೊಂದೂ  ತನ್ನ ತನ್ನದೆ ಆದ ಒಂದೊಂದು ಗರ್ಭಕೋಶವಾಗಿ ರೂಪುಗೊಂಡು ಒಂದರ ಜಾಗದಲ್ಲಿ ಎರಡಾಗಿ ನಿಲ್ಲುತ್ತವೆ. ಆಗ ತಲೆಕೆಳಕಾದ ಪೇರಲೆ ಆಕಾರಕ್ಕೆ ಬದಲಾಗಿ ಎರಡು ಬಾಳೆಹಣ್ಣಿನ ಆಕಾರ ಪಡೆಯುತ್ತವೆ. ಅಷ್ಟಲ್ಲದೆ ಕೆಲವರಲ್ಲಿ ಇವುಗಳ ಸಂಗಡ ಎರಡು ಗರ್ಭಕಂಠ (ಸರ್ವಿಕ್ಸ್) ಮತ್ತು ಭಗರಂಧ್ರ (ಯೋನಿರಂಧ್ರ)ಗಳೂ ಇರುವುದುಂಟು.

ಗರ್ಭಕೋಶದ ಮತ್ತೊಂದು ವೈಪರೀತ್ಯ ಬೈಕಾರ್ನುಯೇಟ್ ಯೂಟಿರಸ್ ಅಥವ ದ್ವಿದಳ ಗರ್ಭಕೋಶ. ಇದೂ ಸಹ ಭ್ರೂಣಾವಸ್ಥೆಯಲ್ಲಿ ಮುಲ್ಲೇರಿಯನ್ ಕೊಳವೆಗಳು ಸರಿಯಾದ ರೀತಿಯಲ್ಲಿ ಕೂಡಿಕೊಳ್ಳದ ಪರಿಣಾಮ ಉಂಟಾಗುವ ಜನನದೋಷ. ಇದರಲ್ಲಿ ಎರಡರ ಬದಲು ಒಂದೆ ಗರ್ಭಕೋಶ ಇದ್ದು, ಈ ಥರದ ಗರ್ಭಕೋಶದ ಆಕಾರ ಪೇರಲೆ ಹಣ್ಣಿನ ಬದಲಿಗೆ ಹೃದಯದ ರೂಪ ತಳೆದು, ಒಳಗೆ ಎರಡು ಎಲೆಗಳ ರೀತಿ ತೋರುತ್ತದೆ ಮತ್ತು ಡೈಡೆಲ್ಫಿಸ್ ನ್ಯೂನತೆಗಿಂತ ಇದು ಹೆಚ್ಚು ಕಾಣಸಿಗುವ ವೈಚಿತ್ರ್ಯ. ಇದೂ ಕೂಡ ಹುಟ್ಟಿನಿಂದ ಬರುವುದಲ್ಲದೆ, ಇದರಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಹೆಚ್ಚಿನ ಹಾನಿಗಳಾಗುವುದಲ್ಲದೆ, ಅವಧಿಪೂರ್ವ ಪ್ರಸವ ಹಾಗು ಗರ್ಭಪಾತಗಳು ಅಧಿಕ.


ಹೌದು, ಡಬಲ್ ಗರ್ಭಕೋಶ ಇರುವವರಲ್ಲಿ ಆರೋಗ್ಯಕರ ಗರ್ಭಿಣಿಯರಾಗಿ ಶಿಶು ಜನನವೂ ಆಗದೆ ಇರದು. ಆದರೆ ಅಂಥವರಲ್ಲಿ ಮೊದಲೆ ತಿಳಿಸಿರುವ ಹಾಗೆ ಗರ್ಭಪಾತ ಹಾಗು ಅವಧಿಪೂರ್ವ ಪ್ರಸವಗಳೂ ಹೆಚ್ಚು.


ಅನೇಕರಿಗೆ ತಮಗೆ ಇಂಥ ಒಂದು ವೈಚಿತ್ರ್ಯ ಇದೆ ಎಂಬ ಬಗ್ಗೆ ಅರಿವೂ ಇರದು; ಕಾರಣ ಸಾಮಾನ್ಯವಾಗಿ ಇದರಿಂದ ಯಾವುದೆ ರೀತಿಯ ರೋಗದ ಲಕ್ಷಣ ಇರದೆ ಇರುವುದರಿಂದ. ಬದಲಿಗೆ, ಆಸ್ಪತ್ರೆಯಲ್ಲಿ ತಪಾಸಣೆಗೆ ಹೋದಾಗ, ಸಾಮಾನ್ಯವಾದ ಶ್ರೋಣಿ ಕುಹರದ ಅಥವ ಕೆಳಹೊಟ್ಟೆ ಒಳಗಿನ (ಪೆಲ್ವಿಸ್) ಪರೀಕ್ಷೆ ಸಮಯದಲ್ಲಿ ಇಂಥ ಕಾಯಿಲೆ ಇರುವಿಕೆಯ ಪತ್ತೆ ಆಗಬಹುದು;  ಅಥವ ಆಗಾಗ್ಗೆ ಜರುಗುವ ಗರ್ಭಪಾತ ಅಥವ ಅಗಾಧ ಮುಟ್ಟಿನ ನೋವಿನ ಸಮಯದಲ್ಲಿ ಕೈಗೊಳ್ಳುವ ತಪಾಸಣೆ ಸಂದರ್ಭದಲ್ಲಿ ಸಹ ಇಂಥ ಕಾಯಿಲೆ ಪತ್ತೆಯಾಗುತ್ತದೆ. ಈ ಕಾಯಿಲೆಯ ಕಾರಣ ಮುಟ್ಟಿನ ಮುನ್ನ ಹಾಗು ಆ ದಿನಗಳಲ್ಲಿ ನೋವು ಮತ್ತು ಸೆಳೆತ ಉಂಟಾಗಬಹುದು, ಅಧಿಕ ರಕ್ತಸ್ರಾವ ಆಗಬಹುದು, ಲೈಂಗಿಕಕ್ರಿಯೆ ಸಂದರ್ಭಗಳಲ್ಲಿ ನೋವುಂಟಾಗುವುದು, ಮುಟ್ಟಿನ ಬಟ್ಟೆ ಇದ್ದೂ ಸಹ ರಕ್ತ ಸೋರುವುದೂ ಸಹಜ (ಅಂಥ ಬಟ್ಟೆ ಒಂದೇ ಗರ್ಭಕೋಶ ಮುಚ್ಚಿ ಇನ್ನೊಂದು ತೆರೆದಂತೆ ಇರುವುದರಿಂದ); ಆಗಾಗ್ಗೆ ಅವಧಿಪೂರ್ವ ಪ್ರಸವವಾಗುವುದು ಮತ್ತು ಹೆಚ್ಚುಹೆಚ್ಚು ಗರ್ಭಪಾತ ಆಗುವುದು ಮುಂತಾಗಿ ಇದರ ಲಕ್ಷಣಗಳು (Symptoms).

ಈ ಕಾಯಿಲೆಯ ಕಾರಣ ಈ ಲೇಖನದ ಆರಂಭದಲ್ಲೆ ತಿಳಿಸಿದಂತೆ, ಭ್ರೂಣಾವಸ್ಥೆ ಇದ್ದಾಗ ಗರ್ಭಕೋಶ ಇರಬೇಕಾದ ಸ್ಥಳದಲ್ಲಿ ಎರಡು ಕೊಳವೆಗಳಿರುತ್ತವೆ (ಮುಲ್ಲೇರಿಯನ್ ಡಕ್ಟ್ಸ್). ಅವು ಭ್ರೂಣ ಬೆಳೆದ ಹಾಗೆ ಜೊತೆಗೂಡಿ ಒಂದು ಗರ್ಭಕೋಶ ಉಂಟಾಗುವುದು. ಆದರೆ ದ್ವಿಗರ್ಭಾಶಯ ಇರುವವರಲ್ಲಿ ಈ ಕೊಳವೆಗಳು ಕೂಡುವ ಬದಲು ಪರಸ್ಪರ ಒಂದೊಂದು ಗರ್ಭಕೋಶ ಉಂಟುಮಾಡುವುವು – ಆದರೆ ವೈದ್ಯ ವಿಜ್ಞಾನಕ್ಕೆ ಇದುವರೆಗೆ ಈ ಕೊಳವೆಗಳು ಕೂಡದಿರುವ ಕಾರಣ ತಿಳಿಯದು.


ಮಹಿಳೆಯರ ಮುಟ್ಟಿನ ಸಮಯದಲ್ಲಿ ಈ ವೈಪರೀತ್ಯದ ಕಾರಣ ಕೆಲವು ತೊಂದರೆಗಳು ಸಹಜ. ಮುಖ್ಯವಾದವು, ಅತಿ ಹೆಚ್ಚು ಮತ್ತು ಅಸಾಮಾನ್ಯ ರಕ್ತಸ್ರಾವ; ನೋವು ಸಹಿತ ಮುಟ್ಟಿನ ದಿನಗಳು; ಕೆಳಹೊಟ್ಟೆಯ ಕುಹರದೊಳಗಿನ ಒತ್ತಡ ಮತ್ತು ಸೆಳೆತ ಹಾಗು ಮುಟ್ಟಿನ ಬಟ್ಟೆಯ ಉಪಯೋಗದಲ್ಲಿ ಸಂಕಷ್ಟ.


ವೈದ್ಯರು ಕೆಳಹೊಟ್ಟೆಯ ಒಳಗೆ ಪರೀಕ್ಷಿಸುವ ಸಂದರ್ಭದಲ್ಲಿ, ಎರಡು ಗರ್ಭಕಂಠ ಹಾಗು ಎರಡು ಭಗರಂಧ್ರ (ಯೋನಿ) ಇರುವುದು ಪತ್ತೆಯಾಗಿ ಈ ಕಾಯಿಲೆ ಇರುವ ಅರಿವಾಗುತ್ತದೆ. ಅಂಥ ಸಂದರ್ಭದಲ್ಲಿ ಎಕ್ಸ್ ರೆ ಮತ್ತು ಸ್ಕ್ಯಾನ್ ಮುಂತಾದುವುಗಳಿಂದ ಅಂತಿಮವಾಗಿ ಖಚಿತವಾಗುತ್ತದೆ:
  —  ಅಲ್ಟ್ರಾ ಸೌಂಡ್ (ಶ್ರವಣಾತೀತ ಧ್ವನಿ): ವೈದ್ಯರು ಹೊಟ್ಟೆಯ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಬಹುದು ಅಥವ ಯೋನಿಯ ಮೂಲಕ ಸ್ಕ್ಯಾನ್ ದಂಡವನ್ನು (ವ್ಯಾಂಡ್) ತೂರಿಸಿ ಯೋನಿಯಾಂತರ್ಯದ  ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಬಹುದು.
  —  ಎಂ ಆರ್ ಐ: ‘ಙಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್’ (ಅಥವ ‘ಕಾಂತೀಯ ಅನುರಣನೆಯ ಪ್ರತಿಬಿಂಬ’) ಮೂಲಕ ಅಧಿಕ ಗುಣಮಟ್ಟದ ಚಿತ್ರಣದ ಸಹಾಯ ಪಡೆಯುವುದು ಸಾಧ್ಯ.
  —  ಸೋನೋಹಿಸ್ಟಿರೋಗ್ರಾಂ (ಅಥವ ಸಲೈನ್ ಇನಫ್ಯೂಷನ್ ಸೋನೋಗ್ರಫಿ): ಒಂದು ತೂರುನಳಿಕೆ (ಕ್ಯಾಥಿಟರ್) ಗರ್ಭಕೋಶದೊಳಕ್ಕೆ ತೂರಿಸಿ, ಅದರ ಮೂಲಕ ಲವಣಯುಕ್ತ ದ್ರವವನ್ನು ಹರಿಸಲಾಗುತ್ತದೆ. ನಂತರ ಯೋನಿಯೊಳಗಿಂದ ಆ ದ್ರವ ಗರ್ಭಕಂಠ ಮತ್ತು ಗರ್ಭಕೋಶಗಳಲ್ಲಿ ಹರಿಯುವಾಗ ಯೋನಿಯಾಂತರ್ಯದ ಮೂಲಕ ಅಲ್ಟ್ರಾಸೌಂಡ್ ಪ್ರತಿಬಿಂಬಗಳನ್ನು ಚಿತ್ರಿಸಲಾಗುತ್ತದೆ.
  —  ಹಿಸ್ಟಿರೋಸ್ಯಾಲ್ಪಿಂಗೋಗ್ರಫಿ: ಒಂದು ವಿಶೇಷ ರಂಗನ್ನು (dye) ಗರ್ಭಕೋಶದ ಒಳಸೇರಿಸಿದ ನಂತರ ಅದು ಗರ್ಭಕಂಠ ಮತ್ತು ಗರ್ಭಕೋಶದ ಒಳಗೆ ಹರಿಯುವಾಗ ಎಕ್ಸ್ ರೆ ಗಳನ್ನು ತೆಗೆಯಲಾಗುತ್ತದೆ.

ಇನ್ನು ಈ ಕಾಯಿಲೆಯ ಚಿಕಿತ್ಸೆ:


ಸಾಮಾನ್ಯವಾಗಿ ಇದಕ್ಕೆ ಯಾವ ಥರದ ಚಿಕಿತ್ಸೆಯ ಅವಶ್ಯ ಇಲ್ಲ. ವೈದ್ಯರ ಪ್ರಕಾರ, ಗರ್ಭ ಕೂರದೆ ಆಗಾಗ ಗರ್ಭಪಾತ ಆಗುತ್ತಿದದರೆ ಮಾತ್ರ ಶಸ್ತ್ರಚಿಕಿತ್ಸೆಯ ಮೂಲಕ ಎರಡು ಗರ್ಭಕೋಶ ಗಳನ್ನು ಒಂದುಗೂಡಿಸುವರು. ಆದರೆ ಇದರಿಂದ ಗರ್ಭಕೋಶದ ಬಲ ಕುಗ್ಗಬಹುದು. ಅಲ್ಲದೆ ಸಂಭೋಗ ಸಮಯದಲ್ಲಿ ನೋವು ಅನಭವವಾಗುತ್ತಿದ್ದರೆ ಆಗಲೂ ಎರಡು ಯೋನಿಗಳ ಮಧ್ಯೆ ಇರುವ ವಿಭಾಜಕ ಪದರವನ್ನು ತೆಗೆದು ಹಾಕುತ್ತಾರೆ.

ದ್ವಿಗರ್ಭಾಶಯದಿಂದ ಗರ್ಭಣಿಯರಲ್ಲಿ ಉಂಟಾಗಬಹುದಾದ ತೊಂದರೆಗಳೆಂದರೆ ಗರ್ಭಪಾತ, ಪೂರ್ಣಾವಧಿಗೆ ಮುಂಚೆ ಹೆರಿಗೆ, ಜನನದಲ್ಲಿ ಶಿಶುವಿನ ತೂಕ ಕಡಿಮೆ, ಸಿಸೇರಿಯನ್ ಹೆರಿಗೆ, ನಿತಂಬ (breech presentation) ಜನನ, ಶಿಶುವಿನ ಕುಂಠಿತ ಬೆಳವಣಿಗೆ, ಹೆರಿಗೆ ಸಮಯ ಯೋನಿಯ ಹರಿಯುವಿಕೆ ಮುಂತಾಗಿ. ಇಷ್ಟೆಲ್ಲ ಆದರೂ ಈ ವೈಪರೀತ್ಯವನ್ನು  ತಡೆಗಟ್ಟುವುದು ಮಾತ್ರ ಅಸಾಧ್ಯ- ಕಾರಣ ಅದು ಜನನ ದೋಶವಾದ್ದರಿಂದ!


2 thoughts on “ಹೆಣ್ಣೊಬ್ಬಳು ಗರ್ಭಕೋಶಗಳೆರಡು!! ಡಾ. ಅರಕಲಗೂಡು ನೀಲಕಂಠ ಮೂರ್ತಿ

  1. Bucornuate uterus ನ ಉದ್ಭವದ ಕಾರಣ,ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ವಿಶದವಾಗಿ ತಿಳಿಸಿದ್ದೀರ. ಇಂಥ ವ್ಯಕ್ತಿಗಳಿಗೆ ಹಾಗೂ ತಿಳಿಯುವ ಕುತೂಹಲವಿದ್ದವರಿಗೆ ಉಪಯುಕ್ತ ಲೇಖನ.
    Congrats Murthy!

  2. ಧನ್ಯವಾದಗಳು ನಿಮಗೆ ವೆಂಕಟೇಶ್.

Leave a Reply

Back To Top