“ಜನನಿ ಜನ್ಮ ಭೂಮಿಸ್ಯ ಸ್ವರ್ಗಾದಪಿ ಗರಿಯಸಿ “ಎಂಬಂತೆ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕೆ ಸಮಾನ. ಭಾವದೆಳೆಗಳನ್ನು ಹೊಸೆದು ರಕ್ತ ಮಾಂಸವನ್ನು ಬಸಿದು ಸಾವು ಬದುಕಿನ ನಡುವೆ ಸೆಣಸಾಡಿ ನಮ್ಮ ಬದುಕಿಗೆ ಕಾರಣಳಾದ ತಾಯಿಯೇ ಕಣ್ಣಿಗೆ ಕಾಣುವ ದೇವರು. ಮಾತೃದೇವೋಭವ ಎಂಬಂತೆ ದೇವತಾ ಸ್ವರೂಪಿಯಾಗಿ ಮಕ್ಕಳು ಮಾಡಿದ ತಪ್ಪುಗಳನ್ನು ಮನ್ನಿಸಿ ಕ್ಷಮಯಾಧರಿತ್ರಿಯಾಗುತ್ತಾಳೆ. ಸಂಸಾರದ ನೊಗಕ್ಕೆ ಹೆಗಲುಕೊಟ್ಟು ರಥದ ಒಂದು ಚಕ್ರ ಪತಿಯಾದರೆ ತಾನು ಇನ್ನೊಂದು ಚಕ್ರದಂತೆ ಸಾಗಿ ಸಂಸಾರದ ಸಾರಥಿಯಾಗಿದ್ದಾಳೆ. “ದೇವರು ಎಲ್ಲೆಡೆ ಇರಲಾಗುವದಿಲ್ಲವೆಂದು ತಾಯಿ ದೇವರನ್ನು ಸೃಷ್ಟಿ ಮಾಡಿದ”.ಹುಟ್ಟಿನಿಂದ ಸಾಯುವವರೆಗೂ ಮಗಳಾಗಿ ಪತ್ನಿಯಾಗಿ ತಾಯಿಯಾಗಿ ಸೊಸೆಯಾಗಿ ಸಹೋದರಿಯಾಗಿ ವಿವಿಧಪಾತ್ರಗಳನ್ನು ಕುಟುಂಬದಲ್ಲಿ ನಿರ್ವಹಿಸುತ್ತಾಳೆ.
“ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು “ಎಂಬಂತೆ ಮಗುವಿಗೆ ಪ್ರಾರಂಭದಲ್ಲಿ ನಡೆಯಲು ನುಡಿಯಲು ಕಲಿಸುವಲ್ಲಿ ತಾಯಿಯದು ನಿರ್ಣಾಯಕ ಪಾತ್ರ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅಮ್ಮ  ಅಂದಾಗ ನಮಗೆ
ನೆನಪಾಗುವುದು ನಗುಮೊಗದ ನಿಸ್ವಾರ್ಥ,ಪ್ರೀತಿ,ಸಂಯಮದ ಮೂರ್ತಿ. ಅಪೇಕ್ಷಿಸುವ ತನ್ನ ಕರ್ತವ್ಯಕ್ಕೆ ಕೀರ್ತಿ.ಬಾಹ ಏರಿಳಿತಗಳಲ್ಲೂ ತಾಳ್ಮೆಯಿಂದ ಧೈರ್ಯಗೆಡದೆ ಜೀವನವನ್ನು ಮಾಡುತ್ತ ತನಗಿಂತ ಮಕ್ಕಳ ಉತ್ತಮ ಭವಿತವ್ಯಕ್ಕೆ ಮೌಲ್ಯಧ ಅಡಿಪಾಯದ ಮೇಲೆ ಗುರಿ ಸಾಧಿಸಲು ಪ್ರೋತ್ಸಾಹಿಸುತ್ತಾಳೆ.


ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯ ಪಾತ್ರವು ಮಕ್ಕಳನ್ನು ಎಂತಹ ಉನ್ನತಮಟ್ಟದ ಸಾಧನೆಗೆ ಎಡೆ ಮಾಡಿಕೊಟ್ಟು ತಮ್ಮ ಬದುಕನ್ನೇ ಸಂದೇಶವಾಗಿಸಿದೆ. ಅಂತಹ ಆದರ್ಶವ್ಯಕ್ತಿತ್ವದ ಮಹಾಪುರುಷರಾದ ಛತ್ರಪತಿ ಶಿವಾಜಿ,ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಪ್ರಸಿದ್ದ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಇವರೆಲ್ಲ ನಮಗೆ ಮಾದರಿಯಾಗಿ ನಿಂತು ಎಲ್ಲರಿಗೂ ಪ್ರೇರಣೆ  ಆಗಿದ್ದಾರೆ. ಇವರೆಲ್ಲರ ಯಶಸ್ಸಿನ ಹಿಂದೆ ತಾಯಿಯ ಪಾತ್ರ ಮಹತ್ವದ್ದಾಗಿದೆ. ತವರು ಮನೆ ಹಾಗೂ ಗಂಡನ ಮನೆಯ ಗೌರವಕ್ಕೆ ಎಲ್ಲೂ ಚ್ಯುತಿ ಬಾರದಂತೆ ಯಾವಾಗಲೂ ಲವಲವಿಕೆಯಿಂದ ಹಸನ್ಮುಖಿಯಾಗಿ ಹದವರಿತು ಮುದದ ಬದುಕಿಗಾಗಿ ದೇಹವನ್ನು ಸವೆಸುತ್ತ ಒಲುಮೆಯ ರುಚಿಬೆರೆಸುವ ಸಂಜೀವಿನಿ ಅನ್ನಪೂರ್ಣೇಶ್ವರಿಯಾಗಿದ್ದಾಳೆ.
ಮಕ್ಕಳ ಮುಖ ನೆನೆದು ನಾಳೆಯ ಬಗ್ಗೆ ಚಿಂತಿಸಿ ಇದ್ದುದರಲ್ಲಿಯೇ ಉಳಿತಾಯ ಮಾಡಿ ಆರ್ಥಿಕ ಭದ್ರತೆಗೆ ಪುಡಿಗಾಸನ್ನು ಸಂಗ್ರಹಿಸುವ ಸಾಸಿವೆ ಡಬ್ಬಿಯೇ ಅವಳ ಬ್ಯಾಂಕ. ಒಂದು ವೇಳೆ ಆಕಸ್ಮಿಕ ವಾಗಿ ಪತಿಯನ್ನು ಕಳೆದುಕೊಂಡರರೂ ಹೆತ್ತ ಕರುಳ ಕುಡಿಗಳ ನೋಡಿ  ಕಂಬನಿ ಮಿಡಿದು ಮನದಲ್ಲಿ ಈ ಮಕ್ಕಳಿಗಾಗಿ ತಾನು ಬದುಕಲೇಬೇಕೆಂಬ ಛಲಗಾತಿಯಾಗುತ್ತಾಳೆ. ತಾನು ಹಸಿದರೂ ಮಕ್ಕಳಿಗೆ ಉಣಿಸಿ ನಗುವಿನ ಆಭರಣ ಧರಿಸಿ ಮರೆಮಾಚುವಳು. ಸದಾ ತನ್ನ ಮಕ್ಕಳ ,ಮನೆತನದ ಶ್ರೇಯಸ್ಸನ್ನು ಬಯಸುವ  ಈ ತ್ಯಾಗಮಯಿಗೆ ತನ್ನದೇ ಆದ ಯಾವುದೇ ಅಪೇಕ್ಷೆಗಳಿಲ್ಲ. ಕಾಲ ಬದಲಾದಂತೆ ಮನೆಯಲ್ಲಿ ಎಲ್ಲ ಕೆಲಸ ಮುಗಿಸಿ ಹೊಲದ ಕೆಲಸಕ್ಕೊ ಪತಿಗೆ ಆರ್ಥಿಕ ಹೊರೆ ಕಡಿಮೆಯಾಗಲೆಂದು ಇತರೆ ಗೃಹ ಕೈಗಾರಿಕೆ, ಗಾರ್ಮೆಂಟ್ನಂತಹ ಕೆಲಸಗಳಿಗೆ ಯಾವುದೇ ಮುಜುಗರವಿಲ್ಲದೆ ಜೀವವನ್ನು ಗಂಧದಂತೆ ತೇಯುತ್ತಾಳೆ. ಅದಕ್ಕಾಗಿ ಕವಿವರ್ಯ ಶ್ರೀ  ಜಿ ಎಸ್ ಶಿವರುದ್ರಪ್ಪ ಅವರ ಈ ನುಡಿಗಳು ತಾಯಿಯ ಕಾಳಜಿ ಪೂರ್ವಕ ಕಾಯಕದ ಅನಾವರಣ ಮಾಡುತ್ತವೆ.


“ಮನೆ ಮನೆಯಲಿ ದೀಪ ಉರಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ!
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ  ಎಂದರೆ ಅಷ್ಟೇ ಸಾಕೆ”
ಎಂಬ ನುಡಿಗಳು ಅವಳ ಜವಾಬ್ದಾರಿಯ ಔನತ್ಯವನ್ನು ಸೂಚಿಸುತ್ತವೆ.
ಅದರಂತೆ ನಮ್ಮ ಜಾನಪದ ಹಾಡಿನಲ್ಲಿ ತಾಯಿ ಮಗುವನ್ನ ಓಲೈಸುವ ಪರಿ ಅದ್ಭುತವಾಗಿದೆ.
“ಆಡಿ ಬಾ ನನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ
 ತಿಳಿನೀರ//
ತೆಕ್ಕೊಂಡು ಬಂಗಾರದ ಮಾರಿ ತೊಳೆದೇನ.


ಎಂಬುದರಲ್ಲಿ ತಾಯಿ ಮಗುವಿಗೆ ಸ್ವಚ್ಛತೆಯ ಜೊತೆಗೆ ತನ್ನ ಮಗನ ಮುಖವನ್ನು ಬಂಗಾರಕ್ಕೆ ಹೋಲಿಸಿ ತಿಳಿನೀರಿನಿಂದ ತೊಳೆಯುವುದು ಹೀಗೆ ಅವಳ ಬತ್ತದೇ ಇರುವ ಚೈತನ್ಯಬಣ್ಣಿಸಲಾಗದು.
ಹೀಗೆ ಭೂಮಿಗೆ ನಮ್ಮನ್ನು ತಂದು ಮಕ್ಕಳು ಚನ್ನಾಗಿರಲೆಂದು ಕೆಲವು ಸಂದರ್ಭಗಳಲ್ಲಿ ಕಂಬನಿ ಹಾಕದೆ ಅದನ್ನೇ ಗುರಿಯಾಗಿಟ್ಟುಕೊಂಡು ಬೆವರ ಹನಿಯ ಮೂಲಕ ಬದುಕ ಕಟ್ಟಿ ಕೊಟ್ಟವಳಿಗೆ ಬರೀ ವಿಶ್ವ ಅಮ್ಮಂದಿರ ದಿನದಂದು ಭಾವಚಿತ್ರದೊಂದಿಗೆ ಸಂದೇಶ ಹಾಕಿ ಬಿಟ್ಟರಾಗಲಿಲ್ಲ. ಪ್ರತಿದಿನವು ಅವಳನ್ನು  ಸಂತೋಷವಾಗಿ ನೋಡಿಕೊಳ್ಳಬೇಕು. ಯಾಕೆಂದರೆ ಚಿಕ್ಕಂದಿನಿಂದ ನಮ್ಮನ್ನು ಕಷ್ಟ ಪಟ್ಟು ಬೆಳೆಸಿ ಪೋಷಿಸಿ ಸ್ವಾಭಿಮಾನದ ಜೀವನಕ್ಕೆ ನಮ್ಮನ್ನು ಅಣಿ ಮಾಡುವ ಮೂಲಕ ತಾಯಿಯಾಗಿ ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಚಾಚೂ ತಪ್ಪದೆ ಮಾಡಿರುತ್ತಾಳೆ.  ಆದರೆ ಮಕ್ಕಳು ಅವಳ ನಿಸ್ವಾಅರ್ಥ ಸೇವೆಗೆ ಎಷ್ಟು ಬೆಲೆ ಕೊಡುತ್ತಾರೆಂಬುದಕ್ಕೆ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳೇ ಸಾಕ್ಷಿ. ‘ತಾಯಿಯಂತೆ ಮಗಳು ನೂಲಿನಂತೆ ಸೀರೆ ‘ ಎಂಬಂತೆ ಮುಂದೊಂದು ದಿನ ನಿಮ್ಮ ಮಕ್ಕಳು ನೀವು ನಿಮ್ಮ ತಂದೆ ತಾಯಿಗೆ ಮಾಡಿದಂತೆ ಮಾಡುತ್ತಾರೆ ಸಂಶಯವಿಲ್ಲ. ಆದ್ದರಿಂದ ವೃದ್ಧಾಪ್ಯದ ದಿನಗಳಲ್ಲಿ ಅಮ್ಮನನ್ನು ನಮ್ಮ ಒಡಲ ಮಗುವಿನಂತೆ ನೋಡಿಕೊಳ್ಳುವ ಮೂಲಕ ಆಸ್ತಿಯ ಹಕ್ಕನ್ನುನೀಡುವಂತೆ ಪೀಡಿಸುವ ಬದಲು ಪ್ರೀತಿಯಿಂದ  ಸೇವೆ ಮಾಡಿಕರ್ತವ್ಯವನ್ನು ನಿರ್ವಹಿಸೋಣ ಅಂದರೆ ತಂದೆ ತಾಯಿಯನ್ನು ಒಬ್ಬೊಬ್ಬ ಮಕ್ಕಳು ಪ್ರತ್ಯೇಕವಾಗಿ ಇರಿಸಿ ನೋಡಿಕೊಳ್ಳಬೇಕೆಂದಲ್ಲ ಅವರಿಗೆ ನೋವು ಕೊಡದೆ  ಸಂತೋಷದಿಂದ ಇರಿಸಿ ಕಿಂಚಿತ್ತಾದರೂ ಋಣ ತೀರಿಸೋಣ

ಅಮ್ಮ ನೀ ನನ್ನ ದೇವತೆ
ಸಂಸಾರದ ಸಂಕಷ್ಟಗಳಲ್ಲೂ
ನಗೆ ಬೀರುತ್ತಾ ಮನೆಮನವ
ಸ್ವಚ್ಛ ಗೊಳಿಸುತಲಿ ದುಃಖವನು
ನುಂಗಿ ಮನೆತನದ ಗೌರವಕಾಗಿ
ಆತ್ಮವಿಶ್ವಾಸದ ಆಭರಣತೊಡಿಸಿದೆ. ತೀರಿಸಲಾಗದ ನಿನ್ನ ಋಣ
ನಿನ್ನ ದಣಿವರಿಯದ ಚೈತನ್ಯ
ನಮ್ಮ ಬಾಳ ಭವಿತವ್ಯ
ನೂರ್ಕಾಲ ಚನ್ನಾಗಿ ಬದುಕಲಿ
ಎಂದು ಹಾರೈಸುವ ಅರಿತು ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು.

————————-

Leave a Reply

Back To Top