ಪವಿತ್ರ ಮೃತ್ಯುಂಜಯಸ್ವಾಮಿ ಕವಿತೆ-ಏನಾಗುವೆನಗೆ’

ನೋಯಬಾರದೆಂದೆ ಮೃದು ಮಾತನಾಡಿ
ಎರಗುವ ಬಿರುಸು ನುಡಿಗಳನು ಸಹಿಸಿ
ಸಹನೆಯ ಸಹಚರ್ಯಕೆ ರೂಪವಾದೆಯಾ?

ತೆರೆದೇಳುವ ಗೊಂದಲದ ಗಾಳಿಗೋಪುರವ
ಕೆಡವಿ ಚಿಂತೆಯ‌‌ ಗೋದಾಮು ಮನವನಾವರಿಸದ ಹಾಗೆ ಹಿತನುಡಿವ ಸಹಚಾರಿ ನೀನಾದೆಯಾ?

ನಲಿವಲ್ಲೆ ನುಲಿದು ಒಲವೊಂದೆ ಔಷಧವು
ಸುಖದುಃಖವೆರಡಿರುವ ನಾಣ್ಯ ಸಂಸಾರ
ಅಡಿಗಡಿಗೆ ಎಚ್ಚರಿಸಿ ಕಹಿಯನ್ನು ಇಂತಿಷ್ಟೇ
ಬಡಿಸುವಾ ವಾಸ್ತವವಾದಿ ನೀನಾದೆಯಾ

ಸತ್ಯ ಮಿತ್ಯೆಗಳ ವ್ಯತ್ಯಾಸವರುಹಿ
ಮೋಹಬಂಧನದ ಪಾಶಗಳ ವಿಮುಖತೆಯ
ಕಲಿಸಿ ಭಗವಂತನಿರುವಿಕೆಯ‌ ಭದ್ರತೆಯ‌ ತಿಳಿಸಿ
ರಾಡಿಯಾಗದ ಹಾಗೆ ಮನವ ತಿಳಿಗೊಳದಂತಿರಿಸೆ
ಸಾಧನವು ಶರಣಾಗತಿಯೆಂದು ಮತಿಯಾದೆಯಾ?

ಅವನಂಶದೊಂದು ಅಣುಮಾತ್ರ ನಾನೆಂಬ
ಅಹಮಿಕೆಯ ಲವಲೇಶವೂ ಅಂಟದ ಹಾಗೆ
ನಂಟ ಬೆಸೆಯುತಿರುವ ಎನ್ನಾತ್ಮದ ನಂಟನಾದೆಯಾ?

ಸವಿಗನಸ ಬಿತ್ತಿ ಉರಿಗೊಳಿಸಿ ಬುದ್ಧಿ ಭಾವಗಳ
ಸಾಧನೆಗಣಿಗೊಳಿಸುತಿರುವೆಯೋ ಸಖದಸುಖ
ಬಯಸಿ ಹಿಂಬಾಲಿಸುತ ಸುರತದ ಬಯಕೆಯಾದೆಯಾ?

ಏನಾದರೂ ಸರಿಯೇ
ಸತ್ಯದ ಸಂಗ ನಿತ್ಯವಾಗಲಿ
ನೆಚ್ಚಾಗಲಿ ನಿಚ್ಚಳವಾಗಲಿ ಆಗಲಿ ಆಗಲಿ
ಆತ್ಮದಾನಂದಕೆ ನಾಂದಿಯಾಗಲಿ
ಬಯಸಿದಾ ಸಹಪಮಣ ಸುಖವಾಗಲಿ.


Leave a Reply

Back To Top