ಸುರೇಶ ತಂಗೋಡ ಕವಿತೆ-ಅವ್ವ ಸತ್ತ ಕನಸು.

ಮನೆಯ ಮುಂದಿನ
ಕಟ್ಟೆಯ ಮೇಲೆ ಕುಳಿತು
ಅಡಕಿ ಚೀಲ ಹಿಡಿದು
ನಿಂತಿರುತ್ತಿದ್ದ ಜೀವ,
ಒಲೆಯ ಮುಂದೆ ಊದುಗೋಳವಿ ‌ಹಿಡಿದು
ಊದುತ್ತಿದ್ದವಳು ಕಾಣಲಿಲ್ಲ….
ಅರೇ ಕ್ಷಣ ಉಸಿರು ನಿಂತಂತಾಗಿತ್ತು.

ದ್ಯಾವರ ಕೋಣ್ಯಾಗಿನ ದೀಪ
ಮಂದಗಾಗಿದ್ದು ತಿಳಿದು
ದೀಪದ ಕುಡಿ ಒಡೆದು ಬಂದಾಳೆಂದು
ಅಲ್ಲೆ ಜಗಲಿ ಮುಂದೆ ನಿಂತಿದ್ದೆ.
ಆಕಿ ಬರಲೇ ಇಲ್ಲ.
ನಮ್ಮವ್ವ ಬರಲೇ ಇಲ್ಲ….

ಎದುರು ಮನೆಯ ಲಚ್ಚವ್ವ
“ಲೋ ಸೂರಪ್ಪ ಇನ್ನೆಲ್ಲಿಯ ನಿಮ್ಮವ್ವ “
ಅಂದಾಗ ಭೂಮಿ ಬಾಯಿಬಿಟ್ಟಿತ್ತು
ನಾನು ಅಕ್ಷರಶಃ ಸತ್ತಿದೆ.
ದೇಹವಷ್ಟೇ ಉಸಿರಾಡುತ್ತಿತ್ತು.
ಅವ್ವ….ಅವ್ವ…ಅಂತಾ ಅಂದಾಗ
ಹೆಂಡತಿ ಕೈ ಹಿಡಿದು “ಏನಾಯಿತು ?”
ಎಂದಾಗಲೇ ಎಚ್ಚರವಾಗಿದ್ದು.

ಗಂಟಲು ಒಣಗಿ ಮಾತಾಡದಂತಾಗಿತ್ತು
ನನ್ನಾಕೆ ನನ್ನ ಸಾವರಿಸಿದಾಗಲೇ
ತಿಳಿದದ್ದು
ಅದು ಕೆಟ್ಟ ಕನಸು….
ಅವ್ವನ ಕೋಣೆಗೆ ಹೋಗಿ
ಮಲಗಿದ ಅವಳ ತಲೆ ಸವರಿದಾಗಲೆ
ಜನ್ಮಕ್ಕಿಷ್ಟು ಸಮಾಧಾನವಾಯಿತು.
ಅವಳಿಲ್ಲದ ಆ ಅರಿಗಳಿಗೆಯ
ನೆನಸಿಕೊಂಡರೆನೇ ಭಯ
ಅವ್ವ ನೀ ದೇವರು ಕಣವ್ವ…..

——————–

One thought on “ಸುರೇಶ ತಂಗೋಡ ಕವಿತೆ-ಅವ್ವ ಸತ್ತ ಕನಸು.

Leave a Reply

Back To Top