ಜಯಶ್ರೀ ಎಸ್ ಪಾಟೀಲ ಕವಿತೆ-ರಸ್ತೆಗಳು ದಣಿಯುವುದಿಲ್ಲ

ಮಳೆಯಿಂದ ರಸ್ತೆ ಕೆಸರು ಗದ್ದೆಯಾದಾಗಲೂ
ಅಲ್ಲಲ್ಲಿ ಗುಂಡಿಗಳಾಗಿ ನೀರು ನಿಂತಾಗಲೂ
ರಸ್ತೆಯ ಆಕಾರ ಕೆಟ್ಟು ವಿಕಾರವಾದಾಗಲೂ
ರಸ್ತೆಗಳು ದಣಿಯುವುದಿಲ್ಲ ಗೊಣಗುವುದಿಲ್ಲ

ನಿತ್ಯ ಸಾವಿರಾರು ವಾಹನಗಳು ಚಲಿಸಿದರೂ
ವೇಗದ ರಭಸಕೆ ಧೂಳಿನ ಆರ್ಭಟ ಹೆಚ್ಚಾದರೂ
ಭಾರ ಹೆಚ್ಚಾಗಿ ರಸ್ತೆಗಳು ಕುಸಿದು ಬಿದ್ದರೂ
ರಸ್ತೆಗಳು ದಣಿಯುವುದಿಲ್ಲ ಬಯ್ಯುವುದಿಲ್ಲ

ಒಳಚರಂಡಿ ನೀರಿನ ಕೊಳವೆ ಜೋಡಿಸುವಾಗ
ತೆಗ್ಗು ಮುಚ್ಚಲು ಡಾಂಬರಿನ ತೇಪೆ ಹಚ್ಚುವಾಗ
ಮನಬಂದಂತೆ ರಸ್ತೆಗಳನು ಅಗೆದು ತೆಗೆದಾಗ
ರಸ್ತೆಗಳು ದಣಿಯುವುದಿಲ್ಲ ನೊಂದುವುದಿಲ್ಲ

ಬಿರು ಬಿಸಿಲಿಗೆ ರಸ್ತೆಗಳು ಮೈಯೊಡ್ಡಿ ನಿಂತಿವೆ
ಚಳಿ ಗಾಳಿಗೆ ಅಂಜದೆ ಅಳುಕದೆ ಧೈರ್ಯದಿಂದಿವೆ
ಪ್ರಯಾಣಿಕರ ತುಳಿತಕೆ ಸಹಿಸುತ ಸುಮ್ಮನಿವೆ
ರಸ್ತೆಗಳು ದಣಿಯುವುದಿಲ್ಲ ಮುನಿಸುವುದಿಲ್ಲ

ಮೌನವಾಗಿ ಸಹಿಸುವ ಗುಣವ ಅರಿಯಬೇಕು
ಮಾನವ ಇದನರಿತು ನೋಡಿ ಕಲಿಯಬೇಕು
ಬದುಕಲ್ಲಿ ಕಷ್ಟಗಳ ಲೆಕ್ಕಿಸದೆ ಮುನ್ನುಗ್ಗಬೇಕು
ರಸ್ತೆಗಳು ದಣಿಯುವುದಿಲ್ಲವೆಂಬುದ ಮೆಚ್ಚಬೇಕು


Leave a Reply

Back To Top