ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ರಸ್ತೆಗಳು ದಣಿಯುವುದಿಲ್ಲ
ಬಾಳ ಪಯಣದಲಿ
ದಾರಿ ತೋರಿದ ರೀತಿ
ಚಿತ್ರ ವಿಚಿತ್ರ..
ಬೇಕು ಬೇಡವೆನುವುದಿಲ್ಲ
ನಡೆಯಬೇಕು ಸುಮ್ಮನೆ
ಸೇರಬೇಕು ಊರನು..
ಕಷ್ಟವಿರಲಿ ಸುಖವಿರಲಿ
ಸಾಗಬೇಕು ಸುಮ್ಮನೆ
ನೀಗಬೇಕು ಬವಣೆಯ..
ಯಾರಿಗುಂಟು ಯಾರಿಗಿಲ್ಲ
ಜಗದಲಿ ದುಃಖ ದುಮ್ಮಾನವು
ನಡೆ ಮನ ನೀ ಬೇಗನೆ..
ದಾರಿ ದೂರವೆಂದರೆ ಆಗದು
ಮುಟ್ಟಬೇಕು ಗುರಿಯನು
ಕೈಕಟ್ಟಿ ನಿಲ್ಲದಿರು..
ಎಲ್ಲ ದಾರಿಹೋಕರಿಗೆ
ಮರವು ನೆರಳು ನೀಡುವಂತೆ ಸಹ ಪಥಿಕರಿಗೆ ನೆರವಾಗು..
ಸ್ಥಿರವಲ್ಲ ಈ ಬದುಕು
ನೀರ ಮೇಲಿನ ಗುಳ್ಳೆಯು
ತಿಳಿಯಬೇಕಿದನು..
ಶಿಸ್ತಿನಲಿ ಪಯಣಿಸಲು
ರಸ್ತೆಗಳಿಗೆ ಇಲ್ಲ ದಣಿವು
ದೂರವಿಲ್ಲ ಮುಕುತಿಯೂ.
———————————————
ಡಾ.ಬಸಮ್ಮ ಗಂಗನಳ್ಳಿ
ಆಪ್ತವಾಗಿದೆ