ಕಾವ್ಯ ಸಂಗಾತಿ
ಸುಪ್ತದೀಪ್ತಿ
ನೆಲೆ
“ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ”
ಸೆಳೆದ ಕವಿವಾಣಿಯಲಿ ಇಹುದು ಘನತೆ
ಕಾಳಸಂತೆಯ ಸುತ್ತ ಬಾಳು ಕಟ್ಟಿದೆ ಹುತ್ತ
ಒಳಗೊಂಡು ಮೂಲದಲಿ ಜೀವಬಿತ್ತ
ತೊರೆದು ಬದುಕುವುದುಂಟೆ ಬೇರು ನೀರಿನ ನಂಟು
ಏರೇರು ಹಾದಿಯಲಿ ಕುಡಿಕುಣಿಕೆ ಗಂಟು
ಕಾರಮರ್ಮರವೆಲ್ಲ ತಲೆಯೊಳಗೆ ಗುಂಯ್ಗುಟ್ಟಿ
ಸುರಿಯುವುದು ಜಗದತ್ತ ಹೆಪ್ಪುಗಟ್ಟಿ
ನಂಬಿಕೆಯ ಸೆಲೆಯೊಳಗೆ ಜಗದ ಬೇರಡಗಿಹುದು
ಇಂಬಿಹುದು ಬಂಡೆಯಲು ಛಾತಿಗೊಂದು
ನಂಬಿಕೆಯ ಬಾನಲ್ಲಿ ಹಕ್ಕಿರೆಕ್ಕೆಯ ಬಲವು
ಇಂಬಿಹುದು ಭೂಮಿಯಲಿ ಮನುಜನೊಲವು
ನಂಬಿಕೆಯು ಇರುವಲ್ಲಿ ಹಂಗಿನಾಸರೆಯಿರದು
ಇಂಬುಗೂಡುವ ಮನವು ತಿಳಿಯಿರುವುದು
ನಂಬಿಕೆಯು ನಡೆವಲ್ಲಿ ನೆಮ್ಮದಿಯ ಹಸೆಯಿಹುದು
ಒಂಬುಗೆಯ ಒಪ್ಪಕ್ಕಿಯೂಟವಿಹುದು
ಸುಪ್ತದೀಪ್ತಿ.