ಕಾವ್ಯ ಸಂಗಾತಿ
ಎ. ಹೇಮಗಂಗಾ ಅವರ ಕವಿತೆ
ಗಜಲ್
ಆರದೇ ಉಳಿದ ಅಂತರಾಳದ ಬಾವುಗಳೆಷ್ಟೆಂದು ತಿಳಿಯದು ನಿನಗೆ
ಕಣ್ಣೀರಾಗಿ ದಿಂಬು ತೋಯಿಸಿದ ನೋವುಗಳೆಷ್ಟೆಂದು ತಿಳಿಯದು ನಿನಗೆ
ಪ್ರೀತಿಯೊಂದನ್ನೇ ಬಯಸಿದ ಜೀವವಿಂದು ಕಸುವಿಲ್ಲದೇ ಕುಸಿದಿದೆ
ಉಮ್ಮಳದಲಿ ಕಳೆದು ಹೋದ ರಾತ್ರಿಗಳೆಷ್ಟೆಂದು ತಿಳಿಯದು ನಿನಗೆ
ಕಟುಮಾತುಗಳ ಚೂರಿ ಹೃದಯ ಇರಿದಿರಿದು ನೆತ್ತರು ಸುರಿದಿದೆ
ಮಿಥ್ಯಾರೋಪದಿ ನಲುಗಿದ ಭಾವಗಳೆಷ್ಟೆಂದು ತಿಳಿಯದು ನಿನಗೆ
ಹಾಕಿದ ಲಕ್ಷ್ಮಣರೇಖೆಯ ದಾಟದೇ ಬದುಕಿದರೂ ನೆಮ್ಮದಿ ಕಾಣದು
ನನಸಾಗದೇ ಗೋರಿ ಸೇರಿದ ಕನಸುಗಳೆಷ್ಟೆಂದು ತಿಳಿಯದು ನಿನಗೆ
ಗೋಸುಂಬೆ ನಿನ್ನಿಂದ ಇನ್ನಾದರೂ ಮುಕ್ತಿ ಬೇಕೆನಿಸಿದೆ ಹೇಮ ಳಿಗೆ
ಈ ತನಕ ಒಪ್ಪು ಮಾಡಲಾಗದ ತಪ್ಪುಗಳೆಷ್ಟೆಂದು ತಿಳಿಯದು ನಿನಗೆ
ಎ. ಹೇಮಗಂಗಾ
ನೊಂದ ಹೃದಯದ ಮಾತುಗಳು