ವಾಣಿ ಯಡಹಳ್ಳಿಮಠ ಹೊಸ ಕವಿತೆ

ಕಾವು ಕಳೆದುಕೊಂಡು ತನುವದು ತಂಪಾಗಿತ್ತು
ಆದರವನು ನಂಬಲಿಲ್ಲ
ಆತ್ಮವದು ಒಡಲು ತೊರೆದು ದೂರಾಗಿತ್ತು
ನಲ್ಲನವನು ನಂಬಲಿಲ್ಲ

ಕೈ ಹಿಡಿದು, ಮೈ ದಡವಿ
ಏನೇನೋ ಹಲುಬುತ್ತಿದ್ದ
ಕಾಣದೂರಿನೆಡೆಗೆ ಆಕೆಯ ಪಯಣ ಬೆಳೆದಿತ್ತು
ಗೆಳೆಯನವನು ನಂಬಲಿಲ್ಲ

ತೊಡೆಯ ಮೇಲಿಟ್ಟ ಆಕೆ ತಲೆಯ
ನೇವರಿಸಿ ಸಂತೈಸುತ್ತಿದ್ದ
ವರಿಸಿ ಪ್ರೀತಿಸಿದ ಪ್ರೇಮವದು ಅಳಿದಿತ್ತು
ಇನಿಯನವನು ನಂಬಲಿಲ್ಲ

ತೊಟ್ಟಿಲಲ್ಲಿನ ಮುದ್ದಾದ ಮಗುವ
ತುಸುವೂ ನಿಟ್ಟಿಸಲಿಲ್ಲ
ನೋಡದ ಸತಿಯನು ನೋಡಿ ಎದೆಯೊಡೆದಿತ್ತು
ಪತಿಯವನು ನಂಬಲಿಲ್ಲ

ಕ್ರೂರ ವಿಧಿಯ ಆಟಕೆ
ಒಲವು ಸೋತು ಸೊರಗಿತು ವಾಣಿ
ಮರುಕವಿರದ ದಾಳಕೆ ಬದುಕು ಉರುಳಿತ್ತು
ಚಿರ ವಿರಹಿಯವನು ನಂಬಲಿಲ್ಲ

————————————-

Leave a Reply

Back To Top