ಕಾವ್ಯ ಸಂಗಾತಿ
“ನಾವು ಎಲ್ಲರಿಗೂ ಇಷ್ಟವಾಗಿರಲು ಸಾಧ್ಯವೇ”
ಲಲಿತಾ ಮು ಹಿರೇಮಠ.
ಹೇಳಿ ನಾವು ಈ ಜೀವನದಲ್ಲಿ ಎಲ್ಲರಿಗೂ ಇಷ್ಟವಾಗಿರಲು ಸಾಧ್ಯವೇ?
ಖಂಡಿತವಾಗಿಯೂ ಇಲ್ಲ. ಎಲ್ಲರನ್ನೂ ಮೆಚ್ಚಿಸಿ ನಾವು ಜೀವನ ನಡೆಸುವುದು ಕಷ್ಟ. ಎಷ್ಟೇ ಒಳ್ಳೆಯ ಜೀವನ ನಡೆಸಿದರೂ ,ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೊಂಕು ಮಾತನಾಡುವವರು ಎಲ್ಲೋ ಒಂದು ಕಡೆ ಇದ್ದೇ ಇರುತ್ತಾರೆ. ಹಾಗೆಯೇ ನಾವು ಇಲ್ಲಿ ಏಕೆ ಎಲ್ಲರಿಗೂ ಒಳ್ಳೆಯವರಾಗಿ ಇರಲಿಕ್ಕೆ ಸಾಧ್ಯವಿಲ್ಲ ಎಂಬ ಕೆಲವು ಅಂಶಗಳನ್ನು ಗಮನಿಸೋಣ.
ನೋಡಿ ತಾಯಿಯಾದವಳು ತನ್ನ ಕರುಳ ಕುಡಿಯನ್ನು ಹೊತ್ತು, ಹೆತ್ತು ,ಪ್ರೀತಿ, ಮಮತೆಗಳನ್ನು ದಾರೆ ಎರೆದು ಬೆಳೆಸುತ್ತಾಳೆ. ಆದರೆ ಅದೇ ಕರುಳ ಕುಡಿ ಬೆಳೆ ಬೆಳೆಯುತ್ತಾ, ತಾಯಿಯಿಂದ ಬರುವ ಬುದ್ಧಿ ಮಾತುಗಳನ್ನು ಕೇಳಿದಾಗ ಆ ಕ್ಷಣಕ್ಕೆ ತಾಯಿ ಕೆಟ್ಟವಳಾಗಿ ಕಾಣಿಸುವುದು ಎಲ್ಲರಿಗೂ ಗೊತ್ತಿರುವ ಮಾತು.
ಶಾಲೆಯಲ್ಲಿ ಗುರುಗಳು ಮಕ್ಕಳಿಗೆ ಎಷ್ಟೇ ಮಮತೆಯಿಂದ ಪಾಠ ಮಾಡಿದಾಗಲೂ ,ಕೆಲವೊಂದು ಸಲ ಅದೇ ಮಕ್ಕಳು ತಪ್ಪು ಮಾಡಿದಾಗ ಗುರುಗಳು ಅವರನ್ನು ದಂಡಿಸಿದಾಗ ಗುರುಗಳು ಮಕ್ಕಳ ಪಾಲಿಗೆ ಕೆಟ್ಟವರಾಗಿಯೇ ಕಾಣಿಸುವುದು.
ಅಣ್ಣ ತಮ್ಮಂದಿರಲ್ಲಿ ಕರುಳ ಸಂಬಂಧ ಅದು ಎಷ್ಟೇ ಗಟ್ಟಿಯಾಗಿದ್ದರೂ ಕೆಲವೊಂದು ಸಲ ಯಾವುದೋ ಕಾರಣಕ್ಕಾಗಿ, ಆಸ್ತಿಯ ವಿಷಯದಲ್ಲಾಗಲಿ ಅವರು ಒಬ್ಬರಿಗೊಬ್ಬರು ಕೆಟ್ಟವರಾಗಲು ಕ್ಷಣ ಮಾತ್ರ ಸಾಕಾಗುತ್ತದೆ. ಅದೇ ರೀತಿ ಸ್ನೇಹದ ಬಗ್ಗೆ ಹೇಳಬೇಕೆಂದರೆ ಮಾಡಿದ ಸ್ನೇಹ ಅದು ಎಷ್ಟೇ ಗಟ್ಟಿಯಾಗಿದ್ದರೂ ,ಎಷ್ಟೋ ವರ್ಷದಿಂದ ಬೆಳೆದುಕೊಂಡು ಬಂದಿದ್ದರೂ ಒಂದೊಮ್ಮೆ ಅಪನಂಬಿಕೆಯಿಂದಾಗಿಯೂ, ಇಲ್ಲ ಬೇರೆ ಯಾವುದೋ ಮಾತಿನಿಂದಲೋ ಅವರ ಸ್ನೇಹ ಮುರಿದು ಬಿದ್ದು ಅವರು ಮತ್ತೊಂದು ಕ್ಷಣಕ್ಕೆ ಶತ್ರುಗಳಾಗಿರುವುದನ್ನು ನಾವು ನೋಡುತ್ತಿರುತ್ತೇವೆ.
ಹಾಗೆಯೇ ಮುಂದುವರೆದು ನೆರೆಹೊರೆಯವರ ವಿಷಯದಲ್ಲಿಯೂ ಸಹ ಹಾಗೆ ಒಮ್ಮೊಮ್ಮೆ ಒಡಹುಟ್ಟಿದವರನ್ನು ಮರೆಸುವಂತೆ ಅವರ ನಡವಳಿಕೆ ಇದ್ದರೆ ಅದು ಯಾವ ಮಾಯೆಯಲ್ಲಿಯೂ ಅವರು ಒಬ್ಬರನ್ನೊಬ್ಬರು ದ್ವೇಷಿಸುವ ಮಟ್ಟಕ್ಕೆ ಬದಲಾಗುತ್ತದೆ.
ಒಬ್ಬ ರೋಗಿಯ ತೊಂಬತ್ತರಷ್ಟು ರೋಗಗಳನ್ನು ಗುಣಪಡಿಸಿ ದೇವರಾಗುವ ವೈದ್ಯರು ಅವನ ತೊಂಬತ್ತು ಒಂದನೇ ರೋಗಕ್ಕೆ ಕೊಡುವ ಔಷಧಿ ಫಲಕಾರಿಯಾಗದಿದ್ದಾಗ ತಕ್ಷಣ ಅದೇ ವೈದ್ಯರು ಎಲ್ಲರಿಗೂ ಕೆಟ್ಟವರಾಗಿಯೇ ಕಾಣಿಸುತ್ತಾರೆ.
ಹೀಗೆ ಸಮಾಜದಲ್ಲಿ ನಾವು ಕೆಟ್ಟವರಾಗಿ ಕಾಣಿಸುವ ಪಟ್ಟಿಗಳು ಬೇಕಾದ ಸ್ಟಿವೆ.ನಾವು ಯಾವಾಗ ಸತ್ಯವನ್ನು ಮಾತನಾಡಲು ಪ್ರಾರಂಭಿಸುತ್ತೇವೆಯೋ ಆವಾಗ ನಮಗೆ ಶತ್ರುಗಳ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ. ನಾವು ತಪ್ಪು ಮಾಡಿದಾಗ ನಮಗೆ ಬೇರೆಯವರು ಬುದ್ಧಿ ಮಾತುಗಳನ್ನು ಹೇಳಿರಬಹುದು, ಬೇರೆಯವರ ತಪ್ಪುಗಳಿಗೆ ನಾವೇ ಬುದ್ದಿ ಮಾತುಗಳನ್ನು ಹೇಳಿ ತಪ್ಪಿತಸ್ಥರು ಆಗಿರಬಹುದು ಒಟ್ಟಿನಲ್ಲಿ ಆ ಜನಾರ್ಧನನ್ನು ಮೆಚ್ಚಿಸಬಹುದೇ ವಿನಹ ಜನರನ್ನು ಮೆಚ್ಚಿಸಲು ಖಂಡಿತವಾಗಿಯೂ ಸಾಧ್ಯವಾಗದ ಮಾತು ಎನ್ನುವುದು ಮಾತ್ರ ನಿಜ.
ಬಡವನಿಗೆ ನಿರ್ಗತಿಕ ಎನ್ನುವ ಜನ ಶ್ರೀಮಂತನಿಗೆ ಅಹಂಕಾರಿ ಎಂದು, ಮುಖದ ಮುಂದೆ ಹೊಗಳಿ ಅಟ್ಟಕ್ಕೆ ಏರಿಸುವ ಜನರು ನಮ್ಮ ಬೆನ್ನ ಹಿಂದೆ ತೆಗಳಿ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಯಾರೇನೆ ಅಂದರೂ ನಮಗೆ ನಮ್ಮ ಜೀವನದ ದಾರಿಯ ಬಗ್ಗೆ ಅರಿವಿದ್ದರೆ ಸಾಕು, ಯಾರೋ ಏನೋ ಅನ್ನುತ್ತಾರೆ ಅಂದ ಮಾತ್ರಕ್ಕೆ ಯಾರೊಬ್ಬರೂ ತಮ್ಮ ವ್ಯಕ್ತಿತ್ವವನ್ನು ಬಿಟ್ಟು ಕೊಡಬಾರದು .ನಮ್ಮ ನಡೆ ದೇವರು ಮೆಚ್ಚುವಂತಿದ್ದರೆ ಸಾಕು, ಈ ಜಗತ್ತನ್ನಲ್ಲ.
ಲಲಿತಾ ಮು ಹಿರೇಮಠ