ಮಾಲಾ ಚೆಲುವನಹಳ್ಳಿ ಹೊಸ ಕವಿತೆ

ಬಿಗುಮಾನ ತೊರೆದು ಬೆರೆತದ್ದು ಹೇಗೆಂದು
ಇಂದಿಗೂ ಅರಿಯಲಾಗದು ಸಖ
ನಗುಮೊಗದ ಹಿಂದಿನ ಕರಾಳತೆಯ ನೆನೆದರೆ
ಎಂದಿಗೂ ಮರೆಯಲಾಗದು ಸಖ

ಆಡಂಬರವಿರದ ಬದುಕ ಅಲಂಕೃತಗೊಳಿಸಿ
ಶೋಭಾಯಮಾನವಾಗಿಸಿದೆ
ವಿಡಂಬನೆಗೆ ನಿಲುಕದಷ್ಟು ಯಾತನೆಗಳ
ನೀಡಿದರೆ ಮತ್ತೆ ಬೆರೆಯಲಾಗದು ಸಖ

ತೆವಲುಗಳಿಗೆ ಒಲವು ಪ್ರೇಮಗಳ ಲೇಪನ
ನಿನ್ನಿಂದಲೇ ಕಲಿಯ ಬೇಕಷ್ಟೇ
ಕವಲು ದಾರಿಯಲೂ ಪೊಳ್ಳು ನಿರೀಕ್ಷೆಗಳಿಗಾಗಿ
ಕಂಬನಿ ಗರೆಯಲಾಗದು ಸಖ

ಕಂಗಳಲಿ ಮಿಂಚುತಿದ್ದ ಪ್ರೀತಿ ಪ್ರತಿಫಲನ ವ
ಅರಿಯಲಾಗದ ಮೂರ್ಖತನ ನಿನದು
ತಿಂಗಳನ ಬೆಳಕಿಗೂ ಗರಬಡಿದ ಪರಿಯ
ತಿಳಿದರೂ ಜರಿಯಲಾಗದು ಸಖ

ಬಾಳ ಯಾತ್ರೆಯಲಿ ಬೆಸೆದ ಬಂಧಗಳು
ಹತ್ತು ಹಲವಾರು ಇರುವುವು
ಕಾಳ ರಾತ್ರಿಯ ಘೋರ ಭೀಕರತೆಯಲ್ಲೂ
ಭಯವ ತೊರೆಯಲಾಗದು ಸಖ


Leave a Reply

Back To Top