ರೇಣುಕ ಹೊಸಪೇಟೆಯವರ ಕೃತಿ “ಒಲವ ದಿಬ್ಬಣ”-ಒಂದು ಅವಲೋಕನ ಅಭಿಜ್ಞಾ ಪಿ.ಎಮ್. ಗೌಡ

ಉದ್ಘೋಷದಲಿ ಉದ್ಭವಿಸಿದೆ ಒಲವ
ದಿಬ್ಬಣವೆಂಬ ಉಪೋದ್ಘಾತ
ಉತ್ಸಾಹಭರಿತ ಉಲ್ಲಾಸಬೆರತ ಚೆಲುವ
ಕಬ್ಬವಿಲ್ಲಿ ಉಲ್ಲೇಖಿತ..
..

           ‘ಒಲವ ದಿಬ್ಬಣವೆಂಬ’ ಶೀರ್ಷಿಕೆಯೊಂದಿಗೆ ವಿಶೇಷವಾದ ಕವನಗಳನ್ನು ಹೊತ್ತು ತಂದಿರುವ ಈ ಸಂಕಲನವು ಓದುಗರ ಮನಸ್ಸನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವೆ ಇಲ್ಲ..
ಕವಯಿತ್ರಿ ತನ್ನೊಳಗಿನ ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುತ್ತ ಕವನಗಳನ್ನು ಕಟ್ಟಿರುವ ಪರಿ ವಿಶೇಷ ಹಾಗು ವಿಶಿಷ್ಟವಾಗಿದೆ.

“ರವಿ ಕಾಣದ್ದನ್ನು ಕವಿ ಕಂಡ”ಎಂಬ ಮಾತಿನಂತೆ ಮಾನವನ ಹೃದಯದ ಒಳಗನ್ನು ಕಂಡುಕೊಂಡು ಏನು.? ಹೇಗೆ.? ಯಾವುದು.? ಎಲ್ಲಿ.?ಯಾವಾಗ.?ಯಾರು.? ಏಕೆ.?ಎಂಬುದನ್ನು ಅತಿ ಸೂಕ್ಷ್ಮವಾಗಿ ನಿರೂಪಿಸಬಲ್ಲವರಾಗಿದ್ದಾರೆ.ತಾವು ಬಳಸಿರುವ ಪ್ರತಿವಿಷಯವಸ್ತುವಿಗೆ ಸಾಮಾನ್ಯ ಹಾಗು ವಿಶೇಷ ರೂಪಗಳನ್ನು ಗುರುತಿಸಿಕೊಂಡು ಪ್ರತಿಯೊಂದು ವಿಚಾರಸರಣಿಗೂ ಹಾಗು ಲೋಕರೂಢಿಯ ಉಕ್ತಿಗೂ ನಿಲುಕುತಿರುವುದನ್ನು ನೋಡಿದರೆ ನಿಜಕ್ಕೂ ಕವಯಿತ್ರಿಯೊಳಗೆ ಚಿಂತನಾರ್ಹವಾದ ಕವಿಪ್ರತಿಭೆ ಗೋಚರವಾಗುವುದಂತು ಸತ್ಯ..

“ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ” ಆನಂದವರ್ಧನ ಈ ಮನೋಹರವಾದ ಮಾತು ಅದ್ಭುತವಾಗಿದೆ.ಅಂದರೆ “ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ” ತನಗೆ ಹೇಗೆ ರಚಿಸುವುದೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ.ಎಷ್ಟು ಸತ್ಯ ಅಲ್ವಾ ಈ ಮಾತು.ಕವಿ ತನ್ನ ಕಲ್ಪನೆಗೆ ಬಂದದ್ದನ್ನೆಲ್ಲ ಅಮೋಘವಾಗಿ ಉಪಮಾನ ಉಪಮೇಯಗಳೊಂದಿಗೆ ವರ್ಣಿಸಿ ಅದ್ಭುತ ಭಾವಗಳ ಹೊನಲನ್ನೆ ಹರಿಸುವನು.
ಇಲ್ಲಿಯೂ ಕೂಡ ಕವಯಿತ್ರಿ ತಮ್ಮದೆ ಆದ ಹೊಸ ಹೊಸ ಭಾವಗಳೊಂದಿಗೆ ವಿಶೇಷವಾಗಿ ಕವನಗಳನ್ನು ರಚಿಸುತ್ತ ಬಂದಿರುವರು.

                 ಮನದಲ್ಲಿ ಒಲವ ಪಲ್ಲಕ್ಕಿಯ ದಿಬ್ಬಣ ಎದೆಯಲಿಂದು ಏನೋ ಹೊಸ ತಲ್ಲಣವೆಂಬ ಆತ್ಮವಿಶ್ವಾಸದ ಪ್ರೀತಿಯ ಸಾಲುಗಳಲ್ಲಿ ಒಲವೆಂಬ ಜೀವನ ಜೋಕಾಲಿಯಲ್ಲಿ ಜೀಕುವ ಕನಸುಗಾರ್ತಿ ಕವಯಿತ್ರಿ ಈ ಸಂಕಲನದಲ್ಲಿ ಅದಮ್ಯ ಜೀವನ ಪ್ರೀತಿಯನ್ನು ಬಿಂಬಿಸುವ ಅನೇಕ ಕವಿತೆಗಳನ್ನು ಜನಮಾನಸದೊಳಗೆ ಹರಿಯ ಬಿಡಲು ಪ್ರಯತ್ನಿಸಿದ್ದಾರೆ.

                 ಇಲ್ಲಿ ಸಂಕಲನದ ಶೀರ್ಷಿಕೆಯೆ ಒಂಥರ ಆಕರ್ಷಕ ಹಾಗು ಒಲವಸಿರಿಯ ಸೊಬಗನ್ನು ಮೇಳೈಸುತಿದೆ.ಶೀರ್ಷಿಕೆಯ ಕವಿತೆಯಲ್ಲಿ ಅಮ್ಮನನ್ನು ಚಿತ್ರಿಸುವಾಗ ಅವಳ ತ್ಯಾಗ, ಪ್ರೀತಿ, ಕರ್ತವ್ಯ, ಅಮ್ಮನೆಂದರೆ ಕಣ್ಣಿಗೆ ಕಾಣುವ ದೇವತೆ. ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುವ ತಾಯಿ, ಸದಾ ಮಕ್ಕಳ ಯೋಗ ಕ್ಷೇಮವನ್ನೇ ಬಯಸುತ್ತಾಳೆ. ಹುಟ್ಟುವ ಮೊದಲೆ ನಮ್ಮನ್ನು ಪ್ರೀತಿಸುವ ಯಾವುದಾದರೂ ಜೀವ ಇದ್ದರೆ ಅದು ಅಮ್ಮ ಮಾತ್ರ.ಹಾಗೆಯೇ ಅವಳ ನೋವು ನಲಿವುಗಳು ಬದುಕಿನಲ್ಲಿ ತನಗೆದುರಾದ ಸವಾಲು ಸನ್ನಿವೇಶಗಳಿಗೆ ಹತಾಶಳಾಗದೆ, ತನ್ನನ್ನು ಸಂಭಾಳಿಸಿಕೊಳ್ಳುತ್ತಲೇ ತನ್ನ ನಂಬಿರುವ ಜೀವಗಳಿಗೆ ಜೀವ ಚೇತನಳಾಗುತ್ತಾಳೆ.
ಎಂಬುದನ್ನು ಅನಾವರಣಗೊಳಿಸುತ್ತ, ಇಡೀ ಕವಿತೆಯ ಅಂತ:ಸತ್ವ ಇರೋದು ಅಮ್ಮನ ಘನ ವ್ಯಕ್ತಿತ್ವದಲ್ಲಿ ಎಂಬುದನ್ನು ತಮ್ಮ ಅಮ್ಮನೆಂಬ ಕವನದಲ್ಲಿ ಕವಯತ್ರಿ ಬಹಳ ಅರ್ಥಗರ್ಭಿತವಾಗಿ ಬಿತ್ತಿಸಿರುವರು.

“ಮೌನದಲೂ ಅರಳುವ ಮಾತು, ಅರ್ಥೈಸಿಕೊಂಡವರಿಗೆ ಗೊತ್ತು ,ಅಪರೂಪದ ಸ್ವಾತಿ ಮುತ್ತು ,ನಿನ್ನ ಅಧರದಿ ನನಗೆ ಸಿಕ್ಕಿತ್ತು”

ಕವಯತ್ರಿಯ ಪ್ರೇಮಗೀತೆಯು ಹಾಗೆಲ್ಲ ಸುಮ್ಮನೆ, ಕಂಡ ಕಂಡಲ್ಲಿ ದಕ್ಕುವಂತಹದ್ದಲ್ಲ. ಅದು ಪ್ರೇಮ ಸಮಾನಾದುದು. ಈ ಪ್ರೇಮಧ್ಯಾನದಂತಹ ಕಾವ್ಯ ಕಸುಬಿನಲ್ಲಿ ಕವಯಿತ್ರಿ; ಪ್ರೇಮ ಅನ್ನುವಂತದ್ದು ಮನದೊಳಗೆ ನಡೆಯುತ್ತಿರುವ ಒಲವ ದಿಬ್ಬಣ ಹೃದಯದಲ್ಲಿ ಬಿತ್ತರಿಸಿರುವ ಬರೆವಣಿಗೆ, ನವಿರಾದ ಬೀಸಣಿಗೆಯೆಂದು ಕವಯತ್ರಿ ಪ್ರೇಮದ ಆರಾಧನೆ, ಉಪಾಸನೆಯನ್ನು ಈ ಒಂದು ಕವಿತೆಯೊಳಗೆ ಬಿತ್ತರಿಸಿರುವರು.ಇದೊಂಥರ ಮೌನದಲ್ಲೂ ಪುಟಿದೇಳುವ ಪುಷ್ಪದಂತೆ ಅರ್ಥೈಸಿಕೊಳ್ಳಬೇಕಷ್ಟೆ ಎಂದು ಓದುಗರಿಗೆ ಹೇಳುತ್ತ ಪ್ರೇಮ ಸ್ವಾತಿ ಮುತ್ತಿನಂತೆ ಎರಡು ಮನಸುಗಳ ಮಿಲನದೊಳಗಿನ ಅಧರದೊಳಗೆ ನನಗೆ ಸಿಕ್ಕಿರುವಂತದ್ದು ಎಂದು ಪ್ರೇಮದ ಉತ್ಕಟತೆಯನ್ನು ತಮ್ಮ ಕವನದೊಳಗೆ ಮೆರೆದಿದ್ದಾರೆ.

“ಹೆಣ್ಣೆಂದರೆ ಭೋಗದ ವಸ್ತುವಲ್ಲ ,ನಿನ್ನ ಕತ್ತಲ ಸಾಮ್ರಾಜ್ಯದ ನಶೆಯಲ್ಲಿ,ನಿನ್ನಡಿಯಲಿ ಸಿಲುಕಿ ನಲುಗುವ ಹೂವಲ್ಲ, ಕೆರಳಿ ಹೆಡೆಯೆತ್ತಿ ನಿಲ್ಲುವ ಸುಂದರ ನಾಗಕನ್ಯೆ”….

 ಹೀಗೆ ಹೆಣ್ಣೆಂದರೆ ಎನ್ನುವ ಕವಿತೆಯೊಳಗೆ ಕವಯಿತ್ರಿ ಹೆಣ್ಣು ಸೃಷ್ಟಿಯ ಜೀವಂತ ಕಾವ್ಯವೂ, ಹೌದು ಎಲ್ಲ ಸ್ತ್ರೀ ಕುಲದ ಭಾವಗಳು ಚಿಗುರೊಡೆದು ಜೀವ ತಳೆಯಲು. ಭಗವಂತನ ಸೃಷ್ಟಿಯಲ್ಲಿ ಹೆಣ್ಣೊಂದು ವರವೋ ಶಾಪವೋ ತಿಳಿಯದಾಗಿದೆˌಎನ್ನುತ  ಗಂಡಿಗಿಂತ ವಿಶೇಷ ,ವಿಶಿಷ್ಟ ,ವಿಭಿನ್ನ ಶಕ್ತಿಯೊಂದು ಹೆಣ್ಣಲ್ಲಿದೆ ಎಂಬುದಂತು ಸುಳ್ಳಲ್ಲ.ಎಂಬುದನ್ನು ತಿಳಿಸುವುದರ ಮೂಲಕ ಹೆಣ್ಣೆಂದರೆ ರುಚಿ ನೋಡುವಂತಹ ಹಣ್ಣಲ್ಲ, ಭೋಗದ ವಸ್ತುವೂ ಅಲ್ಲ. ಅವಳ ಮನದೊಳಗಿನ ಭಾವನೆಯನ್ನು ಅರಿಯಲು ಪ್ರತೀ ಒಳಗಣ್ಣುಗಳ ಅವಶ್ಯಕತೆ ಇದ್ದೇ ಇದೆ ಎನ್ನುವ ಸಮಾಜದ ಕಳಕಳಿಯನ್ನು ಈ ಕವಿತೆಯಲ್ಲಿ ಸೊಗಸಾಗಿ ಹೇಳಿರುವರು.ಹಾಗೆಯೆ ಹೆಣ್ಣು ಸಿಡಿದರೆ ಉಗ್ರ ರೂಪವನ್ನು ತಾಳಬಲ್ಲಳು. ಆಕೆ ಮುನಿದರೆ ಮಾರಿ ಎಂಬ ಗಾದೆಯು ಕೂಡ ಇದೆ. ಆದರೆ ಆ ಪರಿಸ್ಥಿತಿಗೆ ಆಕೆ ಒಡ್ಡುವುದು ತೀರಾ ಅಪರೂಪ. ಹೆಣ್ಣು ಈ ಭೂಮಿಗೆ ದೇವರ ಅನರ್ಘ್ಯ ಕೊಡುಗೆ ಎಂದರೆ ತಪ್ಪಾಗಲಾರದು ಅಂತಹ ಹೆಣ್ಣು ಕೆರಳಿದರೆ ಹೇಗೆ ಎಂಬುದನ್ನ ಕವಯತ್ರಿ ಈ ಕವಿತೆಯೊಳಗೆ ವರ್ಣಿಸಿದ್ದಾರೆ…

“ಈಸಬೇಕು ಇದ್ದು ಜೈಸಬೇಕು , ಬಾಳದೋಣಿಯ ನಡೆಸಬೇಕು , ಅಲೆಗಳಿಗೆದುರಾಗಿ ನುಗ್ಗಬೇಕು , ಆತ್ಮ ಸ್ಥೈರ್ಯದಿ ಜೀವನ ಮಾಡಬೇಕು”…

           ಈ ಜೀವನೋತ್ಸಾಹ ಎಂಬ ಕವಿತೆಯೊಳಗೆ
ಬದುಕಿನ ನಡೆ ಎಷ್ಟು ದೀರ್ಘವಾಗಿದೆ ಎಂದಾಗಲಿ ಅಥವ ಎಷ್ಟು ವರ್ಷ ಬದುಕಿದೆ ಅನ್ನುವುದಾಗಲಿ ಇಲ್ಲಿ ಮುಖ್ಯವಲ್ಲ. ನಮ್ಮ ಬದುಕನ್ನು ಹೇಗೆ ಸಾರ್ಥೈಕ್ಯಗೊಳಿಸಿಕೊಂಡು ಸಾಗುತ್ತೇವೆ ಎಂಬುದು ಮುಖ್ಯ. ಬದುಕಿನ ಉದ್ದ ಆಳವನ್ನು ಅನುಭವಿಸಿದ್ದರಷ್ಟೆ .! ಅದರ ಅನುಭವದ ಪಾಠ.ಹಾಗಾಗಿ ನಿರಂತರ ಬದುಕಿನ ಸ್ವಾದ ವಿಭಿನ್ನವಾಗಿಯೆ ಇರುತ್ತದೆ. ಆದ್ದರಿಂದ ಅದರ ಸ್ವಾದವನ್ನು ನಾವೆಲ್ಲರು ಅನುಭವಿಸೋಣ.
ಏಕೆಂದರೆ ಪ್ರತಿಯೊಬ್ಬರಿಗೂ ಇರುವೊಂದೆ ಜೀವನ.ನಾವು ಬಡವರಾಗಿರಲಿ ಶ್ರೀಮಂತರಾಗಿರಲಿ ಒಟ್ಟಿನಲ್ಲಿ ಬದುಕಿನ ಕೊನೆಯವರೆಗೂ ನಾವೆಲ್ಲರು ಜೀವನೋತ್ಸಾಹ ಉಳಿಸಿಕೊಳ್ಳೋಣ. ಎಂತಹ ಸೋಲು ಅಥವಾ ಕೆಟ್ಟ ಪರಿಸ್ಥಿತಿಯೇ ಬರಲಿ ಈಸುತ್ತಲೆ ಜೈಸುತ್ತ ಮತ್ತೆ ಮತ್ತೆ ಗೆಲುವಿನ ಭರವಸೆಯೊಂದಿಗೆ ಮುನ್ನಡೆಯೋಣ.ಎಂದು ತುಂಬಾ ಚನ್ನಾಗಿ ಹೇಳಿದ್ದಾರೆ..

ಆಸೆ……

‘ಕಡಲಾಳದ ಮುತ್ತಿಗಿಂತ, ಬೆಲೆಬಾಳುವ ನಿನ್ನ, ಒಡಲಾಳದ ಮುತ್ತುಗಳ, ಒಂದೊಂದಾಗಿ ಪಡೆವ ಆಸೆ’……

ಪ್ರೀತಿಯ ಆರಾಧನೆ ,ಪ್ರೇಮದ ಉಪಾಸನೆ ಇವೆರಡರ ಪಾರುಪತ್ಯವೆ ಒಂಥರ ಅದ್ಭುತ ಅಮೋಘ ಹಾಗು ವರ್ಣಿಸದಸದಳವೇ ಸರಿ.ಆಸೆಯೆಂಬ ಕುದುರೆಯೇರಿ ಹೊರಟಾಗಲೆ ಪ್ರತಿಯೊಂದು ಬೇಕುಗಳ ದಾಳಿ ಗೋಚರವಾಗುತ್ತವೆ. ಪ್ರೀತಿ ಬೇಕು ಎನ್ನುವವ ಎದೆಗಿಳಿಸಿಕೊಳ್ಳುವ ಪ್ರೀತಿಯ ಅಪೇಕ್ಷೆ ತೋರುವುದು.
ಮನತುಂಬಿದ ಆಸ್ಥೆಯನ್ನು ಪಡೆಯುವವನ ಬಯಕೆ ,ಹಾಗೆ ನಾನಾ ವಿಧಗಳಿಂದ ಆಸೆಯೆಂಬ ಬಯಕೆಯ ಸಾಲು ಸಾಲು ಬೇಡಿಕೆಗಳಲಿ ಸಂಪು ಹೂಡುವನು.ಕಡಲಾಳದ ಮುತ್ತಿಗಿಂತ ಬೆಲೆಕಟ್ಟಲಾಗದ ಒಡಲಾಳದ ಮುತ್ತುಗಳ ಪಡೆಯುವಾಸೆ ಹಾಗೆಯೆ ನಲ್ಲೆ ಅಥವ ನಲ್ಲ ಕೊಡುವ ಅದ್ಭುತ ಮುತ್ತುಗಳೆ ದೊಡ್ಡ ಆಸೆಯಾಗಿರುತ್ತವೆ.
ಇಂತಹ ಪ್ರೀತಿಭರಿತ ಕ್ಷಣಗಳು ಘಟನೆಗಳನ್ನು ಜೋಪಾನ ಮಾಡುಬೇಕು ಎಂದಿರುವರು….

ಮೋಡಗಳ ಮೋಹದ ಜಡಿ……

“ಹನಿಗಳ ಸಿಂಚನಕೆ ರೋಮಾಂಚನ ಧರೆ
ಪುಳಕಗೊಂಡು ಹಸಿರು ಸೀರೆಯುಟ್ಟ ಇಳೆ
ಭೋರ್ಗರೆಯುತಿವೆ ನೀರು ತುಂಬಿ ಜಲಧಾರೆ
ಬಿಂಕದಿ ನೆರಿಗೆ ಚಿಮ್ಮಿಸಿನಡೆವಂತೆ ವಸುಂಧರೆ”…

ಕವಯಿತ್ರಿ ಮಳೆಯ ಸಿಂಚನಕ್ಕೆ ಧರೆಯೊಡಲ ಉತ್ಸಾಹ ಉಲ್ಲಾಸ ಹೇಗಿರುತ್ತದೆ ಎಂಬುದನ್ನು ಈ ಕವನದ ಮೂಲಕ ಬಹಳ ಚನ್ನಾಗಿ ಹೇಳಿರುವರು. ನಿಜ ನೋಡಿ ಮಳೆ ಎಂಬುದೇ ಒಂದು ರೋಮಾಂಚನ ಅನುಭವ. ಮಳೆಯಿಂದಲೇ ಧರೆ, ಧರೆಯಿಂದಲೇ ಜೀವಿಗಳು. ಮಳೆ ಇಲ್ಲದೇ ಬಸವಳಿದಿದ್ದ ಬುವಿಗೆ ಮಳೆ ನೀಡುವ ಹರ್ಷಕ್ಕೆ ಪಾರವೇ ಇಲ್ಲ.ಮಳೆ ಹನಿಯ ಸಿಂಚನಕ್ಕೆ ಭೂಮಿಯಿಂದ ಬರುವ ಪರಿಮಳ ಆಘ್ರಾಣಿಸುವುದೇ ಒಂದು ಚೇತೋಹಾರಿ ಕಂಪನ. ಭುವಿ -ಭಾನು ಒಂದಾಗಿ ಬೀಳುವ ಮಳೆಯ  ಭೋರ್ಗರೆತ ಆರ್ಭಟಿಸುವ ಸಂಚಲನದೊಂದಿಗೆ ಎಲ್ಲವನ್ನೂ ಸ್ಥಾನಪಲ್ಲಟಗೊಳಿಸುವ  ಹಿತವಾದ ತಂಗಾಳಿಯು ಕೂಡ ನಿಜ ಸರ್ವ ಮನವನ್ನು ತಣಿಸುವುದರೊಂದಿಗೆ ಬುವಿಯೊಡಲ ಬರಡನ್ನು ತಣಿಸಿ ಹಸಿರು ಹೊದ್ದಿಸುವ ಈ ಮಳೆಯ ಲೀಲೆಯನ್ನು ಚನ್ನಾಗಿ ವರ್ಣಿಸಿರುವರು…

ಈ ಕೃತಿಯೊಳಗೆ ಪ್ರತಿ ಸಂದರ್ಭದಲ್ಲೂ ಕೂಡ ಸಾರ್ವಕಾಲಿಕವಾದ ಸತ್ಯ ವಿಚಾರಧಾರೆಗಳನ್ನು ಅರುಹಿರುವರು ಎಂದರೆ ತಪ್ಪಾಗಲಾರದು.ಇಲ್ಲಿ ಕವಯತ್ರಿ ರೇಣುಕಾ ಕನ್ನಳ್ಳಿ ಮೇಡಮ್ ರವರು ಒಲವ ದಿಬ್ಬಣವನ್ನೆ ಮೆರೆಸಿರುವರು ಹಾಗೆಯೆ ತಾವು ದಕ್ಕಿಸಿಕೊಂಡ ಕಾವ್ಯದರಿವು ಮತ್ತು ಎಚ್ಚರವು ಕೂಡ ಹೌದು. ಈ ಸಂಕಲನದಲ್ಲಿ ತಮ್ಮರಿವಿಗೆ ದಕ್ಕಿದ್ದೆಲ್ಲವನ್ನೂ ಕವನವನ್ನಾಗಿಸಲು ಪ್ರಯತ್ನಿಸುತ್ತ ಬಂದಿರುವರು.ಹಾಗೆಯೇ ಕವಯಿತ್ರಿಯ ಈ ಒಲವ ದಿಬ್ಬಣದೊಳಗಿನ ಒಲವಾಧಾರಿತ ಕವಿತೆಗಳಲ್ಲಿ ಸ್ಪಷ್ಟವಾಗಿ ನೋಡಬಹುದು.ಈ ಸಂಕಲನದಲ್ಲಿನ ಬಹಳಷ್ಟು ಕವಿತೆಗಳು ಪದಲಾಲಿತ್ಯ ಮತ್ತು ಗೇಯ, ಗುಣ ಹಾಗು ಹಾಡಲು ಯೋಗ್ಯವಾದವುಗಳಾಗಿವೆ.

ಕವಯಿತ್ರಿಯು ಈ ಕೃತಿಯಲ್ಲಿ ರಚಿಸಿರುವ ಒಟ್ಟು ನೂರು ಕವಿತೆಗಳು ಕೂಡ ಒಂದಕ್ಕೊಂದು ವಿಶೇಷವಾಗಿದ್ದು ಪ್ರತಿಯೊಂದರ ಭಾವ ಪ್ರೀತಿಯೆ ತುಂಬಿ ತುಳುಕುತಿದೆ.ಶ್ರೀ ಗುರು ಕೊಟ್ಟೂರೇಶ್ವರ ಹಾಗು ನಡೆದಾಡುವ ದೇವರು ಕೃತಿಗಳಲ್ಲಿ ದೇವರು ಆಧ್ಯಾತ್ಮಿಕತೆಯ ಒಲವ ಧಾರೆಯನ್ನು ಅದ್ಭುತವಾಗಿ ಹರಿಸಿದ್ದಾರೆ.ಹೊಂಬಿಸಿಲ ಸಾಲಿನಲಿ ಮೈನವಿರೇಳಿಸುವ ಸೊಗಸಾದ ಭಾವವನ್ನು ಉಣಬಡಿಸಿರುವರು.ಜೀವನದುದ್ದಕ್ಕೂ ಪ್ರೀತಿ ಪ್ರೇಮಗಳ ಸಂಗಮಧಾರೆ.ಬಾಳಿನ ಏರಿಳಿತದೊಳಗೆ ಪ್ರೀತಿಯ ಮಂಟಪ .ನೋವು ನಲಿವಿನ ಹಂದರದೊಂದಿಗೆ ಅಂತರಂಗಕ್ಕೂ ಶೃಂಗಾರದ ಅವಶ್ಯಕತೆ ಬೇಕೆನ್ನುವುದನ್ನು ಬಲವಾಗಿ ಪ್ರತಿಪಾದಿಸಿರುವ ಅವರ ಸಾಲುಗಳು ಕಾರಂಜಿಯಂತೆ ಚಿಮ್ಮುತಿವೆ.ಮುಂಜಾನೆಯ ಚಳಿ ಮುಸ್ಸಂಜೆಯ ನೇಸರ (ಕೆಂಬಾರ)ನ ನೈಜತೆಯ ವರ್ಣನೆ.ಮಲೆನಾಡ ಸಿರಿ ಭಾವನೆಗಳ ಗರಿ,ಮಧುರ ಗೀತೆಗಳ ಮೆರವಣಿಗೆ ಚೆಲುವಿನ ಚಿತ್ತಾರದಂತೆ ಪ್ರತಿಬಿಂಬಿಸುವ ಛಾಯೆ ಅಮೋಘವಾಗಿದೆ.ನಾಡು ನುಡಿಯ ಬಗ್ಗೆ ಅಭಿಮಾನದ ಪತಾಕೆ ಹಾರಿಸುತ್ತ ಒಲವಿನ ಗೀತೆಯೊಂದಿಗೆ ಹೃದಯಗೀತೆ ಹಾಡಿಸಿರುವ ಗಾಥೆ ಚಂದ.ಪ್ರೀತಿ ಹಸಿರು, ಪ್ರೀತಿ ಜೀವ, ಪ್ರೀತಿ ಭಾವಗಳೊಂದಿಗೆ ಅದರ ಉನ್ನತೀರಣ ಅಥವ ಪ್ರೀತಿಯ ವೈಭವೀಕರಣ ಇಲ್ಲಿ ಅದ್ಧೂರಿಯಾಗಿದೆ.
ಇದಿಷ್ಟನ್ನೆ ಹೇಳದ ಕವಯಿತ್ರಿಯು ಬಾಳಿನ ಅಡೆತಡೆಗಳು, ನೋವು ,ನಲಿವುಗಳು, ಅನುಕಂಪ ,ಕರುಣೆ ,ವಾತ್ಸಲ್ಯ ,ಮಮತೆ, ಮಾನವೀಯತೆ, ಪ್ರಕೃತಿಯ ಸೌಂದರ್ಯ, ಅದರೊಂದಿಗಿನ ಬುವಿಯ ಸಿರಿ, ಮೋಡದ ಮಾತು ಧರೆಯ ನರ್ತನ ,ದೇವರ ಹುಡುಕಾಟ, ಬಾಳ
ಭಾವಗೀತೆಯೊಂದಿಗೆ ನಗು ,ಅಳು, ಖುಷಿ, ಕೋಪ ಇತ್ಯಾದಿ ಭಾವಗಳ ಸಮರ್ಪಣೆಯೊಂದಿಗೆ ಧನ್ಯತೆಯ ಕವಿತೆಯ ಮೂಲಕ ಅರ್ಪಿಸಿರುವ…

ಹೀಗೆ ಅವರ ಬಹಳಷ್ಟು ಪ್ರೇಮಾಧಾರಿತ ಕವನಗಳಲ್ಲಿ ಪ್ರೇಮದ ಔನತ್ಯ, ಪ್ರಣಯದ ಸಾಂಗತ್ಯ.ಹಾಗು ಪ್ರೀತಿಯ ಸಾರ್ಥಕತೆ ಎಂಬಂತಹ ಉಪಮಾನ ಉಪಮೇಯಗಳ ಮೈಮನವರಳಿಸುವ ಭಾವೋನ್ಮಾದವಿದೆ.ಕವಯಿತ್ರಿ ಕೇವಲ ಕಲ್ಪನೆಯ ತೆಕ್ಕೆಗೆ ಜೋತು ಬೀಳದೆ. ನಿಜ ಬದುಕಿನ ಅನೇಕ ಸವಾಲುಗಳನ್ನು ,ಮಜಲುಗಳು ಸಹ ನಿಕಷಕ್ಕೆ ಒಡ್ಡಿಕೊಂಡಂತಿವೆ.ಹೀಗೆ ಇವರ ಪ್ರತಿ ಕವಿತೆಗಳು ಒಲವಿಗೆ ಪೂರಕವಾಗಿಯೆ ರಚಿತಗೊಂಡಿವೆ.ಹೀಗೆ ಕವಿ ಬಳಸುವ ನಾನಾ ರೂಪಕ, ಉಪಮೆಗಳಲ್ಲಿನ ತಾಜಾತನ ಆಹ್ಲಾದಕರವಾಗಿ ಮುದ ನೀಡುತ್ತವೆ. ಈ ಕವನಸಂಕಲನಕ್ಕೆ  ರಮೇಶ್ ಅಗ್ರಹಾರರವರು ಆಕರ್ಷಕವಾದ ಮುಖಪುಟ ವಿನ್ಯಾಸ ಮಾಡಿರುವರು.ಹಾಗೆಯೆ ಈ  ಕೃತಿಗೆ ಡಾ.ಕೆ.
ರವೀಂದ್ರನಾಥ ಸರ್ ಪ್ರಾಧ್ಯಾಪಕರು ಅರ್ಥಪೂರ್ಣ ಮುನ್ನುಡಿಯನ್ನು ಬರೆದದ್ದು,ಶ್ರೀ ವೀರೇಶ್ ಆರ್.ಬಿ ಯವರ ಸೊಗಸಾದ ಬೆನ್ನುಡಿ ಇದೆ. ಮೊದಲ ಸಂಕಲನದಲ್ಲೇ ಕವಯಿತ್ರಿಯ ಪ್ರೌಢಿಮೆಗೆ ಸಾಕ್ಷಿಯಾಗಿ ಅನೇಕ ಉತ್ತಮ ಕವಿತೆಗಳ ರಚನೆ ಈ ಒಲವ ದಿಬ್ಬಣದೊಳಗಡಗಿವೆ.ಕವಯಿತ್ರಿಯವರ ಕವಿತೆ ಕಟ್ಟುವ ಕಲೆ ಚನ್ನಾಗಿದೆ. ಮತ್ತಷ್ಟು ಉತ್ತಮ ರಚನೆಗಳಿರಲಿ, ಮಗದಷ್ಟು ಕವಿತೆಗಳಿಗೆ ಉತ್ತಮ ಉಪಮಾನ ಉಪಮೇಯಗಳ ಹೊದಿಕೆಯಿರಲೆಂಬ ಸದಾಶಯದೊಂದಿಗೆ ಕಾವ್ಯ ಪರಂಪರೆಯ ಓದು ಇವರ ಮುಂದಿನ ಕಾವ್ಯದಾರಿಯನ್ನು ಸುಗಮಗೊಳಿಸುವುದೆಂಬ ಭರವಸೆಯೊಂದಿಗೆ ಶುಭಹಾರೈಕೆಗಳು……


Leave a Reply

Back To Top