ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಇಬ್ಬನಿ


ಮುಂಜಾನೆ ಮಬ್ಬುಗತ್ತಲಲಿ ಮುತ್ತುವ ನೀನು
ಬೆಳ್ಳಿಯ ಬಟ್ಟೆಯನು ಧರಿಸಿದ ಜೇನು
ಹಸಿರು ಗಿಡಮರಗಳ ಆವರಿಸಿ ನೀರಾಗುವೆ
ಎಲೆಗಳ ಮೇಲೆ ಕುಳಿತು ಹೊಳೆಯುವೆ
ಭುವಿಯಲಿ ಮಂಜಿನ ಗೋಪುರ ನಿರ್ಮಿಸಿ
ಹುಲ್ಲಿನ ಗರಿಗೆ ಶಕ್ತಿಯನು ಸಮರ್ಪಿಸಿ
ಮೋಡದ ಮನೆಯ ಪೃಥ್ವಿಯಲಿ ಮಾಡುತ
ಧರಣಿಗೆ ಹಸಿರಿನ ಚಪ್ಪರವ ಉಡಿಸುತ

ಹೂವಿನ ಗಿಡದಲಿ ಇಬ್ಬನಿ ಮೂಡಿಸುವೆ
ರವಿಯ ಕಿರಣಕೆ ನಾಚುತ ಕರುಗುವೆ
ಬೆಳ್ಳಿಯ ರಥದಿ ನಿಸರ್ಗವ ಸುತ್ತುವೇ
ಪರಿಸರ ಸೌಂದರ್ಯಕೆ ರಾಣಿಯೇ ಆಗಿರುವೇ
ಬಿಸಿಲಿಗೆ ಸೋಕಿ ಹನಿಯಾಗಿ ಬಿಡುವೇ
ಮೈಮನದಿ ರೋಮಾಂಚನದ ವಿದ್ಯುತ್ ಹರಿಸುವೇ
ಪ್ರಕೃತಿಯ ಅಚ್ಚರಿಗೆ ನಕ್ಷತ್ರವಾಗಿ ಮಿನುಗುವೇ
ತನ್ನತನವ ಬಿಟ್ಟುಬಿಡದೆ ಜಗದಿ ಮೆರೆಯುವೇ
ಕಾಡಜ್ಜಿ ಮಂಜುನಾಥ
