ಇಂದಿರಾ ಮೋಟೆಬೆನ್ನೂರ-ನೀನಲ್ಲವೇ ದೇವ

ಸುರಿದ ಮುಳ್ಳುಗಳ ಬದಿಗೆ ಸರಿಸಿ
ಹೂವುಗಳ ಮಳೆ ಸುರಿಸಿ
ಹರಸ ಬೇಕಾದವನು ನೀನಲ್ಲವೇ…ದೇವ

ಅಳಿಸಿದ ಚಿತ್ತಾರವ ಮತ್ತೆ ಬಿಡಿಸಿ
ರಂಗು ರಂಗಿನ ಬಣ್ಣಗಳ ಬಳಿಸಿ
ಹರುಷದ ಹಸೆ ಬರೆಯಬೇಕಾದವನು ನೀನಲ್ಲವೇ…ದೇವ

ಕಸಿದ ಮಲ್ಲಿಗೆ ಮನದ ನಗೆಯ
ಮತ್ತರಳಿಸಿ ಮೊಗದಿ ನಗೆಮಲ್ಲಿಗೆಯ
ಸುರಿಯ ಬೇಕಾದವನು ನೀನಲ್ಲವೇ…ದೇವ

ಬಿತ್ತಿ ಬೆಳೆದ ಭಾವಗಳ ಕಿತ್ತೆಸೆದ
ನೀನಲ್ಲವೇ ಹಸಿರಾಗಿಸಿ ಮತ್ತುಸಿರ
ತುಂಬ ಬೇಕಾದವನು ನೀನಲ್ಲವೇ.. ದೇವ

ಬೆಳೆದ ಕನಸುಗಳ ಕರಗಿಸಿದ ನೀನೇ
ಮತ್ತೆ ಉತ್ತಿ ನನಸ ಸೆರಗಿನಲಿ ಕಂಗಳ
ಬೆಳದಿಂಗಳಾಗಿಸಬೇಕಲ್ಲವೇ.. ದೇವ….

ಆರಿಸಿದ ದೀಪಗಳ ಕುಡಿಗೆ ಬೆಳಕ ಮುಡಿಸಿ
ನೀನೇ ಮತ್ತೆ ತಮವ ಸರಿಸಿ ಘಮವ ಭರಿಸಿ
ದಾರಿ ತೋರಬೇಕಾದವನು ನೀನಲ್ಲವೇ ದೇವ…

ಹೊರದೂಡಿದ ಮನ ಮನೆಯ ಮಂದಿರದಿ
ಮತ್ತೆ ಕರೆದು ಸಮ್ಮಾನ ಸಂಪ್ರೀತಿ
ತೋರಬೇಕಾದವನು ನೀನಲ್ಲವೇ ದೇವ…

ರೆಕ್ಕೆ ಕಟ್ಟಿ ಬಾಂದಳಕೆ ಹಾರಿಬಿಟ್ಟ ಭಾವ ಹಕ್ಕಿಯ
ಜೀವವ ಮತ್ತೆಳೆದು ಪಂಜರದಿ ಬಂಧಿಸಿದೆ
ಮತ್ತಂಬರದಿ ಹಾರಿಸಬೇಕಾದವನು ನೀನಲ್ಲವೇ ದೇವ

ಅಪಮಾನ ಅಪನಿಂದೆ ಕಳೆದು ಪಯಣದ
ಜೊತೆ ಹೆಜ್ಜೆಯ ಗೆಜ್ಜೆಯಾಗಿಸಿ ಕೈ ಹಿಡಿದು
ನಡೆಸಬೇಕಾದವನು ನೀನಲ್ಲವೇ ದೇವ….

ನಿನ್ನೆದೆಯ ನೆಳಲ ನೇಹದ ನೀಲಿಯಾಗಸದ
ತಂಪಿನಲಿ ಕಿರುತಾರೆಗೊಂದು ನೀಡಿ ತಾವ
ಮಿನುಗಿಸಬೇಕಾದವನು ನೀನಲ್ಲವೇ ದೇವ…


One thought on “ಇಂದಿರಾ ಮೋಟೆಬೆನ್ನೂರ-ನೀನಲ್ಲವೇ ದೇವ

Leave a Reply

Back To Top