ಗಜಲ್ ಜುಗಲ್ ಬಂದಿ – ನಯನ. ಜಿ. ಎಸ್ ವಿಜಯಪ್ರಕಾಶ್ ಕಣಕ್ಕೂರು

ಉರುವಿಟ್ಟ ಭಾವಗಳು ಕಾಲಗರ್ಭದೊಳು ಹುದುಗುತಿರಲು ಸಂಕ್ಷೋಭೆ ಮೆರೆದಿದೆ
ಸದ್ಭಾವಗಳ ಸಾರ ಕೃಶವಾಗಿ ಶೈಶಿರವ ಆಲಿಂಗಿಸಿರಲು ಮೋಹಕ ಏಳಿಗೆ ಕಂದಿದೆ

ಗರ್ವದ ಘಾತಿಗೆ ತತ್ತರಿಸುತ ಕರಟುತಿದೆ ಸೌಖ್ಯತ್ವದ ಹೊನ್ನುಡಿಯ ಭವ್ಯ ಮೆರುಗು
ಪುಷ್ಕಳ ಮಂದಹಾಸಕೆ ಕಣ್ಪನಿಗಳ ಕಳಂಬ ನಾಟುತಿರಲು ಮನೋಜ್ಞತೆ ಮಾಸಿದೆ

ಗಗನಕೆ ಲಗ್ಗೆಯಿಡುತಿದೆ ಅಂಧಾಚಾರಗಳ ನರ್ತನ ಸೌಷ್ಠವತೆಯ ನಿಚ್ಛಣಿಕೆಯಲಿ
ಅವಗತಿಸಿದ ಬಾಳುವೆಯ ದಿವ್ಯ ಸತ್ವ ದಿಕ್ತಪ್ಪಿ ಅಡ್ಡಾಡುತಿರಲು ಪಾವನತೆ ನಶಿಸಿದೆ

ಸಿಹಿ ಸಾರದ ಸತ್ವಕೆ ನೆಚ್ಚಿ ಮುಕ್ಕಿ ಮೆರೆಯುವವರ ನಡುವೆ ದಫನ್ ಆಗಿದೆ ಮಾನವತೆ
ಬಾಳ ರಹದಾರಿಯಲಿ ಗಮ್ಯದೆಡೆಗನ ಚರ್ಯೆ ಹಳಿ ತಪ್ಪಿರಲು ಆಕಾಂಕ್ಷೆ ಕ್ಷಯಿಸಿದೆ

ತನುವ ಹಿಂಡಿ ಹೀರುತಿಹ ಸ್ವೇದ ಬಿಂದುಗಳಲಿ ಕಾರುಣ್ಯವ ಅಪೇಕ್ಷಿಸದಿರು ನಯನ
ವಿದ್ವೇಷದ ನಿತ್ಯ ವಿಹಾರದಲಿ ಭಾವಾಂಶು ಸವೆದಿರಲು ನುಡಿಯ ಶೋಭೆ ನಂದಿದೆ.

****

ಪುಟವಿಟ್ಟ ಮೋಹಗಳು ಜೀವ ಸಮರದೊಳು ಹೈರಾಣಾಗುತಿರಲು ಕ್ಷುಧೆ ಇಂಗಿದೆ
ಸದ್ಧರ್ಮಗಳ ಮರ್ಮ ವೈಕೃತ ಮನದ ಅರಿವಿಗೆ ಬಾರದಿರಲು ವಿದ್ಯೆ ವ್ಯರ್ಥವಾಗಿದೆ

ಉಡುಗಿದ ಛಾತಿಗೆ ಸತ್ವವ ಪರಿತ್ಯಜಿಸಿ ನಿಸ್ತೇಜವಾಗಿದೆ ಆತ್ಮವಿಶ್ವಾಸದ ದಿವ್ಯ ಪ್ರಭೆ
ಶುದ್ಧ ಹೃದಯದ ಮಿಡಿತಕೆ ಸಂಶಯ ಶರವು ಇರಿಯುತಿರಲು ನಂಬಿಕೆ ಕಮರಿದೆ

ಸಧ್ವಿಚಾರಗಳ ಸೊಗಡು ಮರೆಯಾಗಿದೆ ಲೋಲುಪತೆಯ ಮರ್ಕಟ ಮನಸಿನಲಿ
ಆವಿರ್ಭವಿಸಿದ ಅಸುರ ವಾಂಛೆಗಳು ಚಿತ್ತದಲಿ ವೃದ್ಧಿಸುತಿರಲು ನಡತೆ ಎಡವಿದೆ

ತಿರುಳಿರದ ಸೊಲ್ಲುಗಳ ಕುಣಿಕೆಯಲಿ ಸಿಲುಕಿ ನಲುಗಿ ಹೋಗುವುದು ಬದುಕು
ಚಿತ್ತ ಸ್ವಾಸ್ಥ್ಯವು ಕ್ಷೀಣಿಸಿ ಸಹ ಜೀವಿಗಳ ಸಖ್ಯ ಸಹ್ಯವಾಗದಿರಲು ಜಿಹ್ವೆ ಹಬ್ಬುತ್ತಿದೆ

ಹಣ ಪಿಪಾಸುಗಳ ನೋಟದಲ್ಲಿ ಗುಣವು ಗಣನೆಗಿಲ್ಲ ಮರೆಯದಿರದನು ವಿಜಯ
ಜೀವಸಮರಲಿ ಸೆಣಸಾಡುತ ದಿನರಾತ್ರಿಗಳು ಉರುಳುತಿರಲು ಕಾಲಪ್ರಜ್ಞೆ ನಶಿಸಿದೆ


4 thoughts on “ಗಜಲ್ ಜುಗಲ್ ಬಂದಿ – ನಯನ. ಜಿ. ಎಸ್ ವಿಜಯಪ್ರಕಾಶ್ ಕಣಕ್ಕೂರು

  1. ಸ್ವರ ಗಜಲ್ ಆಗಲು ,ಕಾಫಿಯಾದ ರವಿ ಬೇರೆ ಅಕ್ಷರವಾಗಿದ್ದು ಸ್ವರಮಾತ್ರ ಒಂದೇ ಆಗಿರಬೇಕು. ಇಲ್ಲಿ ಆ ಲಕ್ಷಣ ಕಂಡಿಲ್ಲ.

Leave a Reply

Back To Top