ಪ್ರೊ. ಸಿದ್ದು ಸಾವಳಸಂಗ, ವಿಜಯಪುರ-ಕವಿತೆ ಭ್ರೂಣಗೊಳುತ್ತದೆ

ನೀವು…
ಓದಲಿ ಬಿಡಲಿ ; ಮೆಚ್ಚಲಿ ಬಿಡಲಿ
ಆದರೆ ನೀವು…
ಓದುತ್ತೀರಿ ಮತ್ತು ಮೆಚ್ಚುತ್ತೀರೆಂಬ
ಭರವಸೆಯೊಂದಿಗೆ ಕವನ ಬರೆಯುತ್ತೇನೆ !
ಮನದಲ್ಲಿ ಗೂಡುಗಟ್ಟಿದ ಭಾವನೆಗಳು
ಮರಿಯಾಗಿ ಹೊರಬರಲು ಕಾಯುತ್ತವೆ !
ಮನದಾಳದ ನೂರಾರು ಸಂಘರ್ಷಗಳು,
ತಾಕಲಾಟಗಳು ಕವಿತೆಯಾಗಿ ರೂಪುಗೊಳ್ಳುತ್ತವೆ !
ಹೇಳಬೇಕಾದುದ್ದನ್ನು ಹೇಳಲಾಗದೆ ಒದ್ದಾಡುತ್ತಿರುವಾಗ ಕವಿತೆ ಭ್ರೂಣಗೊಳ್ಳುತ್ತದೆ !
ನನ್ನ ಕಣ್ಣು ಕಿವಿಗಳು ಸದಾ ತೆರೆದಿರುತ್ತವೆ
ಹೊಸದನ್ನು ಏನೋ ಹುಡುಕುತ್ತವೆ !
ಆ ಹುಡುಕಾಟದಲ್ಲಿ ಏನಾದರೂ ಸಿಕ್ಕರೆ
ನನ್ನ ಭಾವನೆಗಳು ಕವಿತೆಯಾಗಿ
ಅಕ್ಷರರೂಪಕ್ಕೆ ಇಳಿಯುತ್ತವೆ !
ಒಂದು ಸಣ್ಣ ಪ್ರೋತ್ಸಾಹ, ಒಂದು ಸಣ್ಣ ತಿವಿತ,
ಒಂದು ಸಣ್ಣ ತಿರಸ್ಕಾರ, ಒಂದು ಸಣ್ಣ ಪುರಸ್ಕಾರ,
ಒಂದು ಸಣ್ಣ ಮತ್ಸರ, ಒಂದು ಸಣ್ಣ ತುಳಿತ,
ಒಂದು ಸಣ್ಣ ಸ್ನೇಹ, ಒಂದು ಸಣ್ಣ ವೈರ
ಎಲ್ಲವೂ ನನ್ನನ್ನು ಕಾಡಿ ಚಿಂತನೆಗೆ ಹಚ್ಚುತ್ತವೆ !
ಏನು ಮಾಡಲಿ ಗೆಳೆಯರೆ ನಾನೂ ಮನುಷ್ಯನೆ
ನನ್ನಲ್ಲಿ ಸಹ ರಾಗ-ದ್ವೇಷಗಳಿವೆ
ಆದರೆ ಎಲ್ಲವನ್ನು ಸರಿದೂಗಿಸುತ್ತೇನೆ !
ಹಾಗಂತ ನನ್ನೊಳಗಿನ ಕವಿ ಸುಮ್ಮನಿರಲಾರ
ಆತ ತೋಚಿದ್ದನ್ನು ಕವಿತೆಯಾಗಿ ಗೀಚುತ್ತಾನೆ !
ಸಮಾಜ ಸುಧಾರಣೆಯಾಗುತ್ತದೆಂಬ ಭ್ರಮೆ ನನಗಿಲ್ಲ
ಜನ ಬದಲಾಗುತ್ತಾರೆಂಬ ಹುಚ್ಚೂ ನನಗಿಲ್ಲ !
ಆದ್ದರಿಂದ ಬರೆಯುವುದು ಮಾತ್ರ ನನ್ನ ಕೆಲಸ
ಬರೆದಾದ ಮೇಲೆ ನಿಮ್ಮ ಮುಂದೆ ಹರಿಯಬಿಡುತ್ತೇನೆ !
ಓದುವವರು ಓದಲಿ ; ಬಿಡುವವರು ಬಿಡಲಿ
ಹೊಗಳುವವರು ಹೊಗಳಲಿ ; ತೆಗಳುವವರು ತೆಗಳಲಿ
ನಾನು ಮಾತ್ರ ಸುಮ್ಮನಿದ್ದು ಎಲ್ಲವನ್ನು ನೋಡುತ್ತೇನೆ !


ತದನಂತರ…
ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ
ಚುಚ್ಚಿದರೆ ಎಚ್ಚರಗೊಳ್ಳುತ್ತೇನೆ
ಮೆಚ್ಚಿದರೆ ಸಂತೋಷಗೊಳ್ಳುತ್ತೇನೆ !!


Leave a Reply

Back To Top