ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಮ್ಮೂರ ಸುದ್ಧಿ
ಏಷ್ಟೋ ವರುಷಗಳ ಮೇಲೆ
ನಾನು ನಮ್ಮೂರಿಗೆ ಹೋಗಿದ್ದೆ
ಅದೇ ಡಾಂಬರು ಇರದ
ಧೂಳು ಮುತ್ತುವ ರಸ್ತೆ
ಅರಳಿ ಗಿಡದ ಬುಡದಲ್ಲಿ
ಜನರು ಇನ್ನೂ ಹರಟೆ ಹೊಡೆಯುತ್ತಿದ್ದರೆ
ಹನಮಂತ ದೇವರ ಗುಡಿಯ ಪೌಳಿ
ಹಿರಿಯರು ಇಸ್ಪೀಟು ಆಡುತಿದ್ದಾರೆ
ಮೊನ್ನೆ ಮೊನ್ನೆ ಓಕಳಿ ಮುಗಿಯಿತಂತೆ
ಊರ ಗೌಡರಿಗೆ ಪಟೇಲರಿಗೆ
ಭಾರಿ ಗಲಾಟೆ ಕದನ
ಚುನಾವಣೆಯಲ್ಲಿ ಎಲ್ಲರೂ
ದುಡ್ಡು ತೆಗೆದುಕೊಂಡು
ಮತ ಹಾಕಿದ್ದಾರೆ
ಕೇರಿಯ ದುರ್ಗಿಯನ್ನು
ಶಾನುಭೋಗರ ಶೀನ
ಮುಂಬೈಗೆ ಹಾರಿಸಿಕೊಂಡು ಹೋದ
ಮಸೀದಿಯ ಮೇಲೆ ಹಸಿರು
ಗುಡಿಯ ಮೇಲೆ ಕೇಸರಿ ನಿಶಾನೆ
ಮೊನ್ನೆ ಮೊಹರಂ ಗಣಪತಿ ಹಬ್ಬ
ಹಿಂದೂ ಮುಸ್ಲಿಂ ಜಗಳ
ಅಂಗನವಾಡಿ ಆಶಾ
ಕಾರ್ಯಕರ್ತೆಯರಿಗೆ ಐದು
ತಿಂಗಳು ಸಂಬಳ ಇಲ್ಲ
ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿ
ಅಡುಗೆ ಮಾಡುತ್ತಿದ್ದಾರೆ
ಮೊಟ್ಟೆ ಕೊಡಬೇಡಿ
ಹೊರಗೆ ಘೋಷಣೆ
ಹಿಜಾಬ ಧರಿಸದಂತೆ
ಪಡ್ಡೆ ಹುಡುಗರ ಹೋರಾಟ
ಬೋರು ಬತ್ತಿವೆ
ಕೆರೆ ಒತ್ತುವರಿ
ನಾಟಕದ ಚಿಮನಾ
ಗೌಡರ ಜೊತೆಗೆ ಕೂಡಿ ಕೊಂಡಳು
ಊರಲ್ಲಿ ಉರುಸು ಜಾತ್ರೆ
ಮಕ್ಕಳ ಕೈಯಲ್ಲಿ ಮೊಬೈಲ್
ಶಾಲೆ ಬಿದ್ದಿದೆ ಪಕ್ಕದಲ್ಲಿ ಕಟುಗರ ಕೇರಿ
ಹೆರಿಗೆಗೆ ಹೋದ ಶಿಕ್ಷಕಿ
ಮರಳಿ ಇನ್ನೂ ಬಂದಿಲ್ಲ
ಊಟಕ್ಕೆ ಕುಳಿತಾಗ
ಅವ್ವ ಹೇಳಿದ ಸುದ್ಧಿ
ದೊಡ್ಡ ಗೌಡರು ತೀರಿ ಕೊಂಡರು
ಮನೆ ಬಿಟ್ಟು ಮರಳಿ ಹೊರಟಾಗ
ತಳವಾರ ಭೀಮ ಬೀಡಿ ಎಸೆದು
ಡೋಗ್ಗಿ ಸಲಾಮು ಹೊಡೆದ
ಆಸ್ಪತ್ರೆಯಲ್ಲಿ ವೈದ್ಯರಿಲ್ಲ
ಔಷಧಿ ಗುಳಿಗೆ ಮಾರಿಕೊಂಡಿದ್ದಾರೆ
ಬಸ್ಸಿಗಾಗಿ ಕಾಯುತ್ತಿದ್ದೆ
ಹುತಾತ್ಮ ಚೌಕಿನಲ್ಲಿ
ನನಗೆ ಪಾಠ ಮಾಡಿದ
ಮಾಸ್ತರರು ಸಿಕ್ಕಿದ್ದರು
ಅವರಿನ್ನೂ ಬಾಪು ಬೋಸ್
ಭಗತ್ ಎಂದು ಕನವರಿಸುತ್ತಿದ್ದರೆ
ಹಳ್ಳದಲ್ಲಿ ಮಡಿವಾಳ ಮಾರುತಿ
ನಮ್ಮ ಬಟ್ಟೆ ಒಗೆಯುತ್ತಿದ್ದ
ನಿಟ್ಟುಸಿರು ಬಿಟ್ಟು ಬಸ್ ಹತ್ತಿದೆ
ಕಣ್ಣು ವದ್ದೆಯಾದವು
ನಮ್ಮೂರು ಸುದ್ಧಿ ಕೇಳಿ
ನೋವಿಗೂ ಧೂಳಿಗೋ
ಗೊತ್ತಾಗಲೇ ಇಲ್ಲಾ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಮ್ಮೂರು …… ಇದ್ದ ಹಾಗೆ ಇದೆ……….
ಸೂಪರ್ ..
ಅಕ್ಕಮಹಾದೇವಿ
ನಿಮ್ಮ ಹಳ್ಳಿಯ ಸಮಸ್ತ ವಿಚಾರವನ್ನು ಅರಹುವ ನಿಮ್ಮ ಕವನ… ಮತ್ತು ಅಷ್ಟೇ ಊರಿನ ಬಗೆಗೆ ಕಾಳಜಿ ಇರುವ ನಿಮ್ಮ ನುಡಿಗಳು ಕವನದಲ್ಲಿ ಎದ್ದು ಕಾಣುತ್ತವೆ
ಸುಶಿ
ಗಾಂಧಿ ತಾತ ಹೇಳಿದ ವಾಣಿ.”””ಹಳ್ಳಿಗಳ ಉದ್ದರವೆ ದೇಶೋದ್ದಾರ..”ಅದು ನಿಮ್ಮೂರಿನ .ಸಾಮಾಜಿಕ.ಆರ್ಥಿಕ. ದಾರ್ಮಿಕ. ಶೈ್ಕ್ಷಣಿಕ.ಸಾಂಸ್ಕೃತಿಕ. ಸಂಪ್ರದಾಯಿಕ..ತಳಸಮುದಾಯದ. ಬೆಳವಣಿಗೆ.ಅನಾವರಣ ಸ್ವತಂತ್ರ ಭಾರತದ.ಚಿತ್ರಣ..ಮತ್ತೆ ಗಾಂಧಿ ಬಂದರೆ ಹುಟ್ಟಿ ಏನಾಗಬಹುದು ಎಂಬ ಚಿಂತನೆ.ಡಾ.ಶಶಿಕಾಂತ ಪಟ್ಟಣರ ಕವಿತೆಯ ವಸ್ತು.
ಡಾ.ಕಸ್ತೂರಿ ದಳವಾಯಿ
ಗದಗ ಕಾಲೇಜು.
Excellent poem
ಸುಂದರ ಭಾವದ ಹಾಡು
ಅತ್ಯುತ್ತಮ ಸುಂದರ ಕವನ ಸರ್
ಶಿವಯೋಗಿ ರಾಜೇಂದ್ರ ಪಾಟೀಲ
ಹಳ್ಳಿಯ ನೈಜ ಕಥೆ ಕವನ
ವಾಸ್ತವದ ವಸ್ತುಸ್ಥಿತಿ ಬಿಂಬಿಸುವ ಸುಂದರ ಅನುಭಾವದ ಕವನ ಸರ್