ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ

ವಸಂತ ಕಾಲದಿ ಕೋಗಿಲೆಯ ಇಂಪಾದ ಕುಹೂ ಕುಹೂ ಧ್ವನಿಯ ಕೇಳುವ ಮುನ್ನ ಪದಗಳ ಕಟ್ಟೋಣ ಬಾ
ಹೊಸ ಮಳೆಯು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋಗುವ ಮುಂಚೆ ಗಟ್ಟಿಯಾಗಿ ನಿಲ್ಲೋಣ ಬಾ

ಮುಂಗಾರು ಮಳೆಯ ಬರಸಿಡಿವ ಮಳೆಗೆ ಮಣ್ಣು ಘಮ ಸೂಸಿದಾಗ ಮನಸು ಹಗುರಾಗುವುದಿಲ್ಲವೇ
ಮುಂಜಾವಲಿ ಎದ್ದು ನೇಗಿಲ ಹಿಡಿದು ಹೊಲಕ್ಕೆ ಹೋಗುವ ರೈತನ ನೋಡಿ ನಗು ಮೊಗದಿ ಹರಸಿ ನಮಿಸೋಣ ಬಾ

ಹಸಿದ ಹೊಟ್ಟೆಯಲಿ ರಟ್ಟೆ ಮುರಿದು ದುಡಿವ ದೀನ ದಲಿತರು ಸರದಿ ಸಾಲಿನಲಿನಿಂತಾಗ ಧನಿಕನಾ ದರ್ಪ ಸಲ್ಲದು
ಕುಸುಮ ಬಾಡುವ ಮೊದಲು ದುಂಬಿಗಳು ಮಕರಂದ ಹೀರುವಂತೆ ಯೌವ್ವನವ ಸವಿಯೋಣ ಬಾ

ನೆತ್ತಿ ಮೇಲಿನ ಸೂರ್ಯ ಪಡುವಣದಿ ಮುಳುಗುವಾಗ ಕೇಸರಿ ಕಿರಣಗಳನ್ನು ಬೀರುವನು
ತತ್ತಿ ಇಡದ ಕೋಳಿ ಬೆಚ್ಚಗೆ ಮಲಗಿರುವ ಮನುಕುಲವನ್ನು ಎಬ್ಬಿಸುವ ಕೂಗು ಕೇಳೋಣ ಬಾ

ಮಾಮರದ ರೆಂಬೆ ಕೊಂಬೆಗಳು ಚಿಗುರಿ ತಂಪನ್ನು ಸೂಸುವಾಗ ಜೋಕಾಲಿ ಕಟ್ಟಿ ಜೀಕುವನು ಕಂಸ
ಬೀಜ ಮೊಳೆತು ಮರವಾಗುವಾಗ ನೆಲದೊಳಗೆ ಬೇರು ಬಿಟ್ಟು ಗಟ್ಟಿಗೊಳ್ಳುವಂತೆ ದೃಢವಾಗಿ ಬೆಳೆಯೋಣ ಬಾ


Leave a Reply

Back To Top