ಒಲ್ಲದ ಮನಸ್ಸಿನಿಂದ ಸುಮತಿ ಕೇಶವನನ್ನು ಬಿಟ್ಟು ಅಲ್ಲಿಯೇ ಹೊರಗೆ ನಿಂತು ತನ್ನ ತರವಾಡನ್ನು ಹೊಸದಾಗಿ ನೋಡುವಂತೆ ಕಣ್ಣೆವೆ ಮಿಟುಕಿಸದೆ ವೀಕ್ಷಿಸಿದಳು. ತಾವು ಆಡಿದ  ಮನೆಯ ಸುತ್ತಲಿನ ಅಂಗಳವು ಇಂದು ಹೊಸತಂತೆ ಅವಳಿಗೆ ತೋರುತ್ತಿತ್ತು. ತಾನು ಅಕ್ಕ ಹಾಗೂ ತಮ್ಮಂದಿರ ಜೊತೆ ಆಡಿ ಬೆಳೆದ ಮನೆಯು ಪರರ ಪಾಲಾಗುತ್ತಿದೆ. ಇನ್ನು ಈ ಮನೆಯ ವಾಸ ನಮಗೆ ಕನಸು. ಈ ಮನೆಯ ಪ್ರತೀ ಮೂಲೆಯು ತನಗೆ ಸುಪರಿಚಿತ. ಪ್ರತಿಯೊಂದು ಸ್ಥಳದಲ್ಲಿ  ಸುಂದರ ಕ್ಷಣಗಳ ನೆನಪಿನ ಸುರುಳಿಗಳು. ಎಲ್ಲಿ ನೋಡಿದರೂ ತನ್ನ ಅಕ್ಕನ ಹಾಗೂ ತಮ್ಮಂದಿರ ಕಿಲ ಕಿಲ ನಗುವಿನ ಪ್ರತಿಧ್ವನಿ ಮಾರ್ಧನಿಸುತ್ತಿದೆ. ಎತ್ತ ಕಣ್ಣು ಹಾಯಿಸಿದರೂ ಅಪ್ಪ ಅಮ್ಮ ಹಾಗೂ ತಮ್ಮೆಲ್ಲರ ಚಿತ್ರಗಳೇ ಕಣ್ಣು ಮುಂದೆ ಸುಳಿಯುತ್ತಿದೆ. ಮನೆಯ ಸುತ್ತ ಒಮ್ಮೆ ಕಣ್ಣಾಡಿಸಿದಳು. ತಾನು ಹಾಗೂ ಅಕ್ಕ ಕೂಡಿ ನೆಟ್ಟ ಹಲವಾರು ತರಹದ ಹೂವಿನ ಗಿಡಗಳು ಅಮ್ಮನ ಪ್ರೀತಿಯ ಸ್ಪರ್ಶದಿಂದ ನಳ ನಳಿಸಿ ಬೆಳೆದು ಸುಗಂಧ ಭರಿತ ಕಂಪು ಬೀರುವ ಹೂಗಳಿಂದ ತುಂಬಿದೆ. ಪಾರಿಜಾತದ ಹೂವುಗಳು ನಿನ್ನೆಯ ರಾತ್ರಿಗೆ ಅರಳಿ ಗಿಡದ ಕೆಳಗೆ ಹೂವಿನ ರಾಶಿಯನ್ನು ಹಾಸಿವೆ. ತನ್ನ ಪ್ರಿಯ ಪೇರಳೆ ಹಣ್ಣಿನ ಮರದ ತುಂಬಾ ಹಣ್ಣುಗಳು ತುಂಬಿ ಪಕ್ಷಿಗಳು ಅರೆತಿಂದು ಕೆಳಗೆ ಬೀಳಿಸಿವೆ. ಹಣ್ಣಿನ ಭಾರಕ್ಕೆ ಗಿಡವು ಬಾಗಿದೆ. ಇಂದೇಕೋ ಪೇರಳೆ ಮರದ ಬಳಿ ಬಂದರೂ ಹಣ್ಣು ಕಿತ್ತು ತಿನ್ನುವ ಮನಸ್ಸಿಲ್ಲದೆ ಅಳಿಲು ಗಿಳಿ ಪಕ್ಷಿಗಳು ಹಣ್ಣು ತಿನ್ನುವುದನ್ನು ನೋಡುತ್ತಾ ನಿಂತಳು ಸುಮತಿ. ಪಕ್ಕದಲ್ಲಿದ್ದ ಜೀರಿಗೆ ಮಾವೂ ಹಣ್ಣುಗಳಿಂದ ತುಂಬಿದ್ದವು. ದಿನವೂ ಸಂಜೆಯಾದರೆ ಗಾಳಿಗೆ ಬಿದ್ದ ಹಣ್ಣುಗಳನ್ನು ಹೆಕ್ಕಿ ಲಂಗದ ತುಂಬಾ ತುಂಬಿ ತಂದು ಅಮ್ಮನಿಂದ  ಬೈಸಿಕೊಳ್ಳುತ್ತಾ ಇದ್ದವಳು ಇಂದು ಮರವನ್ನೇ ನೋಡುತ್ತಾ ಹಾಗೇ ಮೌನವಾಗಿ ನಿಂತಿದ್ದಳು. ಅವಳ ಇಷ್ಟದ ಕೆಂಪು ಜೇನು ಹಲಸಿನ ಮರದಲ್ಲಿ ಬುಡದಿಂದ ತುದಿಯವರೆಗೂ ಕಾಯಿಗಳು ಕೆಲವು ಹಣ್ಣಾಗಿ ಮಂಗಗಳು ತಿಂದು ಅರ್ಥ ಹಾಗೇ ಮರದಲ್ಲಿ ಉಳಿದಿದೆ. ಇದೆಲ್ಲವನ್ನೂ ತಾನು ಕೊನೆಯದಾಗಿ ನೋಡುತ್ತಾ ಇದ್ದೇನೆ ಎಂಬ ನೆನಪು ಮನದಲ್ಲಿ ಮೂಡಿದ ಒಡನೆ ಕಣ್ಣಲ್ಲಿ ಅರಿವಿಲ್ಲದೇ ನೀರು ಜಿನುಗಿತು. 

ಮನೆಯ ವಸ್ತುಗಳೆಲ್ಲವೂ ವಿಲೇವಾರಿ ಆಗುತ್ತಾ ಇರುವುದನ್ನು ನೋಡಿ ಅವಳಿಗೆ ಮನದಲ್ಲಿ ತಳಮಳ. ಹೇಳಲಾಗದ ಅವ್ಯಕ್ತ ನೋವು ಯಾರಲ್ಲಿ ಹೇಳುವುದು. ಅಪ್ಪ ನೋಡಿದರೆ ಮನೆ ಆಸ್ತಿ ಮಾರಿ ಬೇರೆಡೆಗೆ ಹೋಗುವ ತಾರತುರಿಯಲ್ಲಿ ಇದ್ದಾರೆ. ಅಮ್ಮನಾದರೋ ಇಲ್ಲಿಂದ ಬಿಟ್ಟು ಹೋಗಲು ಮನಸ್ಸಿಲ್ಲದೆ ವ್ಯಥೆಯಲ್ಲಿ ಮುಳುಗಿದ್ದಾಳೆ. ಅಕ್ಕನ ಸ್ಥಿತಿ ಕೂಡಾ ಭಿನ್ನವಲ್ಲ. ತಮ್ಮಂದಿರಿಗೆ ಹೇಳಿದರೆ ಅರ್ಥವಾಗದು… ಇನ್ಯಾರಲ್ಲಿ ಹೇಳಿಕೊಳ್ಳಲಿ ಎಂದು ಯೋಚಿಸುತ್ತಾ ಕೊಟ್ಟಿಗೆಯ ಕಡೆ ನಡೆದಳು ಸುಮತಿ. ಅವಳನ್ನು ಕಂಡೊಡನೆ ನಿನ್ನೆ ಮೊನ್ನೆ ಹುಟ್ಟಿದ ಪುಟ್ಟ ಹಸುವಿನ ಕರುವೊಂದು ಛಂಗನೆ ನೆಗೆದು ಕುತ್ತಿಗೆಯಲ್ಲಿ ಕಟ್ಟಿದ ಗೆಜ್ಜೆಯ ಗಿಲಿ ಗಿಲಿ ಸದ್ದು ಮಾಡುತ್ತಾ ಆಚೀಚೆ ಓಡಿತು. ಮೆಲ್ಲನೇ ಕರುವನ್ನು ಹಿಡಿದು ಎತ್ತಿಕೊಂಡಳು. ಅದು ಅದರ ಅಮ್ಮನ ಬಳಿ ಓಡಲು ನೋಡಿತು. ಇವಳೇ ಕರುವನ್ನು ಅಮ್ಮನ ಬಳಿ ಬಿಟ್ಟಳು. ಅದು ಅಮ್ಮನ ಕೆಚ್ಚಲಿಗೆ ಬಾಯಿಹಾಕಿ ಹಾಲನ್ನು ಕುಡಿಯುತ್ತಿರಲು ಸುಮತಿಯು ತಾಯಿ ಹಸುವಿನ ಬೆನ್ನು ಸವರುತ್ತಾ ಅದಕ್ಕೆ ಒಂದು ಹಿಡಿ ಹಸಿ ಹುಲ್ಲನ್ನು ಕೊಟ್ಟು ನೋವಿನ ಸ್ವರದಲ್ಲಿ…. ” ಇನ್ನು ಮುಂದೆ ನಿನ್ನ ಹತ್ತಿರ ಬಂದು ಪ್ರೀತಿಯ ಮಾತನಾಡಿ ನಿನಗೆ ಹುಲ್ಲನ್ನು ತಿನ್ನಿಸಿ ಬೆನ್ನು ಸವರಲು ನಾನಿರುವುದಿಲ್ಲ”….. ಎಂದಳು. ಅರ್ಥವಾಗದ ನೋಟದಿಂದ ಆ ಗೋಮಾತೆ ಅವಳು ಕೊಟ್ಟ ಹುಲ್ಲನ್ನು ತಿಂದು ಅವಳ ಬೆರಳುಗಳನ್ನು ನೆಕ್ಕಿ ಅಂಬಾ…. ಎಂದಿತು. ಕರುವು ಮನದಣಿಯೆ ಹಾಲು ಕುಡಿದು ಅಮ್ಮನ ಸಮೀಪವೇ ಮಲಗಿತು. ಅಲ್ಲಿಂದ ಸುಮತಿ ತನ್ನ ಪ್ರಿಯ ಕುರಿಮರಿಯ ಗೂಡಿನತ್ತ ಬಂದಳು. ಮರಿಯು ಇವಳನ್ನು ಕಂಡೊಡನೆ … ಮೇ….ಎಂದು ಕೂಗುತ್ತಾ ಹತ್ತಿರ ಬಂತು ಅದನ್ನು ಎತ್ತಿಕೊಂಡು ಮುದ್ದಾಡಿ ….” ಇನ್ನು ಮುಂದೆ ನಿನ್ನ ಮುದ್ದಾಡಲು ಎತ್ತಿಕೊಳ್ಳಲು ನಾನು ಇರುವುದಿಲ್ಲ. ಅಪ್ಪ ನಮ್ಮನ್ನು ದೂರದೂರಿಗೆ ಕರೆದುಕೊಂಡು ಹೋಗುತ್ತಾ ಇರುವರು. ಎಂದು ತನ್ನ ಮನದ ಅಳಲನ್ನು ಆ ಕುರಿಮರಿಯ ಕಿವಿಯಲ್ಲಿ ಹೇಳಿದಳು. ಆ ಪುಟ್ಟ ಮರಿ ಅವಳ ಕುತ್ತಿಗೆಯ ಮೇಲೆ ತನ್ನ ಕತ್ತನ್ನು ಇಟ್ಟು ಕಣ್ಣು ಮುಚ್ಚಿ ನಿದ್ರಿಸುವಂತೆ ನಟಿಸಿತು. 

ಕುರಿಮರಿಯನ್ನು ಅದರ ಗೂಡಿನಲ್ಲಿ ಬಿಟ್ಟು ಕಾವಿಗೆ ಬಿದಿರಿನ ಬುಟ್ಟಿಯಲ್ಲಿ ಕುಳಿತಿದ್ದ ಕೋಳಿಯ ಹತ್ತಿರ ಹೋದಳು. ತಾಯಿ ಕೋಳಿಯ ರೆಕ್ಕೆಗಳಲ್ಲಿ ಬೆಚ್ಚಗೆ ಕುಳಿತಿದ್ದ ಮರಿಗಳನ್ನು ಒಂದೊಂದಾಗಿ ಎತ್ತಿಕೊಂಡು ಮುದ್ದಿಸುತ್ತಾ… “ಇನ್ನು ನಾನು ನಿಮ್ಮನ್ನು ಬಿಸಿಲಿಗೆ ಕಾದ ತಟ್ಟೆಯಲ್ಲಿ ಇಟ್ಟು ನೀವು ಆ ಬಿಸಿಗೆ ಕಾಲೆತ್ತಿ ಕುಣಿಯುತ್ತಿದ್ದರೆ  ನೃತ್ಯ ಮಾಡುತ್ತಾ ಇರುವಿರಿ ಎಂದು ಹೇಳಿ ನಗುವುದಿಲ್ಲ”… ಎಂದು ಅಳುತ್ತಾ ಹೇಳಿದಳು. ತಾಯಿ ಕೋಳಿ… ಕೊಕ್… ಕೋಕ್ ಎಂದು ತನ್ನ ಮರಿಗಳನ್ನೆಲ್ಲ ಹತ್ತಿರ ಕರೆದು ಮತ್ತೆ ತನ್ನ ರೆಕ್ಕೆಗಳಲ್ಲಿ  ಬೆಚ್ಚಗೆ ಅಡಗಿಸಿಕೊಂಡಿತು. ಅಲ್ಲಿಂದ ಹೊರಟ ಸುಮತಿ ಅಡುಗೆ ಮನೆಯ ಹಿಂದಿನ ಉಗ್ರಾಣದ ಹತ್ತಿರ ಬಂದಳು. ಅಲ್ಲಿ ಕೆಲಸಗಾರರು ಅವರವರ ಕೆಲಸದಲ್ಲಿ ನಿರತರಾಗಿದ್ದರು. ಸುಮತಿಯನ್ನು ಕಂಡಾಗ ವಿಷಾದದ ನಗೆ ಇತ್ತು ಅವರೆಲ್ಲರ ಮುಖದಲ್ಲಿ. ಮನೆಯೊಳಗೆ ಬಂದು ತೂಗುಯ್ಯಾಲೆಯಲ್ಲಿ ಕುಳಿತಳು. ಮಧ್ಯಾಹ್ನದ ಸಮಯದಲ್ಲಿ ಅಪ್ಪ ಅಲ್ಲಿ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವುದು ರೂಢಿ. ನಂತರದ ಸಮಯಗಳಲ್ಲಿ ಮಕ್ಕಳದೇ ಕಾರುಬಾರು ತೂಗುಯ್ಯಾಲೆಯ ಮೇಲೆ.  ಕಾಲು ಚಾಚಿ ಉಯ್ಯಾಲೆಯಲ್ಲಿ ಕುಳಿತು ಮೌನವಾಗಿ ಸರಪಳಿಯ ಕುಣಿಕೆಗಳನ್ನು ಎಣಿಸುತ್ತಾ ತನ್ನ ಮನದ ವೇದನೆಯನ್ನು ಮರೆಯುವ ವ್ಯರ್ಥ ಪ್ರಯತ್ನ ಮಾಡಿದಳು. ಎಲ್ಲಿ ಹೋದರೂ ಅವಳ ಮನಸ್ಸಿಗೆ ಸಮಾಧಾನ ಸಿಗಲೇ ಇಲ್ಲ ಕೊನೆಗೆ ಅಲ್ಲಿಂದ ಎದ್ದು ತೋಟದ ಕೊಳದ ಬಳಿ ನಡೆದಳು. ದಾರಿಯುದ್ದಕ್ಕೂ ಇರುವ ಗಿಡಗಳಲ್ಲಿ ತನ್ನ ಬೇಸರವನ್ನು ಹೇಳಿಕೊಂಡಳು. ತೋಡಿನ ನೀರಲ್ಲಿ ಇದ್ದ ಪುಟ್ಟ ಮೀನುಗಳನ್ನು ನೋಡಿ…. “ಇನ್ನು ನಾನು ನಿಮ್ಮನ್ನು ತೆಳುವಾದ ಟವೆಲ್ ನಲ್ಲಿ ಹಿಡಿದು ನಿಮ್ಮ ಜೊತೆ ಹೇಗೆ ಆಡಲಿ”…. ಎಂದು ಹೇಳುತ್ತಾ ನೀರಲ್ಲಿ ಕೈ ಆಡಿಸಿದಳು. ಪುಟ್ಟ ಮೀನುಗಳು ಅವಳ ಕೈ ಬೆರಳುಗಳಿಗೆ ಕಚಗುಳಿ ಇಟ್ಟು ನೀರಲ್ಲಿ ಮತ್ತೆ ಮುಳುಗಿದವು. ಅವಳ ಪ್ರಿಯವಾದ ಮಂಜಾಡಿಕ್ಕುರು ಮರದಲ್ಲಿ ತುಂಬಾ ಕಾಯಿಗಳು ಬಿಟ್ಟು ಬಲಿತು ಬೀಜವು ಕಾಯಿಯಿಂದ ಸಿಡಿದು ಬೀಳುವ ಹಂತದಲ್ಲಿ ಇದ್ದವು. ಕಡುಗೆಂಪು ಬಣ್ಣದ ಮುತ್ತಿನ ಮಣಿಗಳಂತಹ ಬೀಜಗಳು ಅವಳಿಗೆ ಬಲು ಇಷ್ಟ. 

ಮರದ ಕೆಳಗೆ ಬಂದು ನಿಂತಳು. ಕಟ್ಟ ಕಡೆಯದಾಗಿ ಮಂಜಾಡಿಕ್ಕುರುಗಳನ್ನು ಆರಿಸಿಕೊಳ್ಳಲೆಂದು ಅವಳು ಬರುವುದಕ್ಕೂ ಸ್ವಲ್ಪ ಜೋರಾದ ಗಾಳಿ ಬೀಸಿವುದಕ್ಕೂ ಸರಿಯಾಯ್ತು. ಜೋರಾದ ಗಾಳಿಗೆ ಮರದ ಕೊಂಬೆಗಳು ಅಲುಗಾಡಿದವು. ಮರದಿಂದ ಮಂಜಾಡಿಕ್ಕುರುಗಳು ಹೂ  ಮಳೆಯಂತೆ ಸುಮತಿಯ ಮೇಲೆ ಉದುರಿದವು. ಸುಮತಿಯ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ತನ್ನನ್ನು ಬೀಳ್ಕೊಡಲು ಮರವು ಸಜ್ಜಾದಂತೆ ತೋರಿತು ಅವಳಿಗೆ. ತನ್ನ ಸುತ್ತೆಲ್ಲವೂ ಕೆಂಬಣ್ಣದ ಮಂಜಾಡಿಕ್ಕುರುಗಳು. ಅವಳ ದುಖಃ ವ್ಯಥೆ ಎಲ್ಲಾ ಒಂದು ಕ್ಷಣದಲ್ಲಿ ಮಾಯವಾದಂತಾಗಿ ಮಂದಹಾಸದೊಡನೆ ಕಣ್ಣು ಮುಚ್ಚಿ ಆ ಕ್ಷಣವನ್ನು ಮನದಲ್ಲಿ ತುಂಬಿಕೊಂಡಳು ಸುಮತಿ.

ಅವಳ ಮನಸ್ಸು ಈಗ ಸ್ವಲ್ಪ ಶಾಂತವಾಯಿತು. ಮರದಡಿ ಬಿದ್ದ ಬೀಜಗಳನ್ನು ಹೆಕ್ಕಿ ಮಡಿಲಲ್ಲಿ ಶೇಖರಿಸಿ ನಿತ್ಯವೂ ಮೀಯುವ ಕೊಳದ ಬಳಿ ಬಂದಳು. ಅಲ್ಲಿ ತಾನು ನೆಟ್ಟಿದ್ದ ಬಿಳಿ ಹಾಗೂ ನೀಲಿ ಬಣ್ಣದ ಶಂಕಪುಷ್ಪ ಬಿಳಿಯ ಘಮ ಘಮಿಸುವ ನಂದಿಬಟ್ಟಲು ದೇವ ಕಣಗಿಲೆ ದಾಸವಾಳ ಹೂವುಗಳನ್ನು ಸಂಜೆಯ ಪೂಜೆಗಾಗಿ ಗಿಡದಿಂದ ಕಿತ್ತುಕೊಂಡು ಅವುಗಳೊಂದಿಗೆ ಉಭಯ ಕುಶಲೋಪರಿ ನಡೆಸುತ್ತಾ….” ನನ್ನ ನಲ್ಮೆಯ ಹೂ ಗಿಡಗಳೇ ಈ ಸುಮತಿಗೆ ಇನ್ನು ವಿದಾಯ ಹೇಳಿ…. ದಿನವೂ ನಿಮ್ಮ ಜೊತೆ ಕಳೆದ ಅನುಪಮ ನಿಮಿಷಗಳ ಹಾಗೂ ನಿಮ್ಮಿಂದ ಹೊರಸೂಸುವ ಘಮ ಘಮ ಪರಿಮಳವನ್ನು ನನ್ನ ನೆನಪಿನ ಬುತ್ತಿಯಲ್ಲಿ ಕೊಂಡೊಯ್ಯುವೆ”…. ಎಂದು ಹೇಳುತ್ತಾ ಹೂವುಗಳನ್ನು  ಹಾಗೂ ಮಂಜಾಡಿಕ್ಕುರುಗಳನ್ನು ಸಮೀಪದಲ್ಲೇ ಇದ್ದ ಬಾಳೆಯ ಗಿಡದಿಂದ  ಎಲೆ ಕತ್ತರಿಸಿ ಅದರಲ್ಲಿ ಇಟ್ಟು ಕೊಳದ ಬಳಿ ಬಂದಳು. ಕೊಳದ ಮೆಟ್ಟಿಲ ಮೇಲೆ ಕುಳಿತು ನೀರಲ್ಲಿ  ಕಾಲು ಇಳಿ ಬಿಟ್ಟಾಗ ಪ್ರಶಾಂತವಾಗಿದ್ದ ಕೊಳದ ನೀರಲ್ಲಿ ತರಂಗದ ಉಂಗುರಗಳು ಕಾಣಿಸಿಕೊಂಡವು.  ಆ ತರಂಗದ ಉಂಗುರಗಳನ್ನು ನೋಡಿ ತನ್ನ ಮನ ಸ್ಥಿತಿಯೂ ಕೂಡಾ ಈಗ ಹೀಗೇ ಇದೆ ಅಲ್ಲವೇ ಎಂದು ಯೋಚಿಸುತ್ತಾ  ಉಂಗುರಗಳು ನಿಧಾನವಾಗಿ ಮರೆಯಾಗುವುದನ್ನೇ ನೋಡುತ್ತಾ ಕುಳಿತಳು ಸುಮತಿ. 


Leave a Reply

Back To Top