ಮಧುಕುಮಾರ ಸಿ ಎಚ್ ಚಾಮನಹಳ್ಳಿ-ಕವಿತೆ-ಅಮ್ಮನಿಗಷ್ಟೇ ಅರ್ಥವಾಗುವ ಸತ್ಯಗಳು

ತೂತು ಬಿದ್ದ ಅಪ್ಪನ ಚಡ್ಡಿ ಬನಿಯನ್ನುಗಳು
ಕೈ ಕಾಲುಗಳ ಹೈರುಗಳು,ಜಡ್ಡು ಬಿದ್ದ ಉಗುರುಗಳು
ಅಮ್ಮನಿಗೆ ಕಾಣುವ ಹಾಗೆ ಮಕ್ಕಳಿಗೆ ಕಾಣುವುದಿಲ್ಲ!

ಅಪ್ಪನ ಕಮಟು ಬೆವರು ವಾಸನೆ
ಅಮ್ಮನ ಮೂಗಿಗೆ ಬಡಿಯುವ ಹಾಗೆ
ಮಕ್ಕಳ ಮೂಗಿಗೆ ದಕ್ಕುವುದಿಲ್ಲ!

ಅಪ್ಪನ ಸುಕ್ಕಾದ ಮುಖ ಮುಕ್ಕಾಗದ ಪ್ರೀತಿ
ಅಮ್ಮನಿಗೆ ತಿಳಿಯುವಷ್ಟು ಸಲೀಸು
ಮಕ್ಕಳ ಅರಿವಿಗೆ ಬರುವುದೇ ಇಲ್ಲ!

ಕೂದಲು ಉದುರಿದ ಬಕ್ಕ ತಲೆಯಲ್ಲಿಯೇ
ಚಾಣ್ಮೆಯಿಂದ ವ್ಯವಹರಿಸುವ ಅಪ್ಪನ ಕಲೆ
ಅಮ್ಮನಿಗೆ ತಿಳಿಯುವಷ್ಟು ಮಕ್ಕಳಿಗೆ ತಿಳಿಯುವುದಿಲ್ಲ!

ಹೆಂಡತಿಯ ಕೈಲಿ ಮೂರು ಮುದ್ದೆ ಉಣ್ಣುವ ಅಪ್ಪ
ಪರರ ಮನೆಯಲ್ಲಿ ತುತ್ತು ಅನ್ನಕ್ಕೂ ಕೈಒಡ್ಡದ
ಸ್ವಾಭಿಮಾನಿ ಎಂಬ ಸತ್ಯ ಮಕ್ಕಳಿಗೆ ಹೊಳೆಯುವುದಿಲ್ಲ!

‘ಹೆಂಡತಿ ತನ್ನ ಪಾಲಿನ ಚಿನ್ನ’
‘ನಾನು ಅವಳ ಪಾಲಿಗೆ ವಜ್ರ’ ವೆಂಬ ಅಪ್ಪನ ಮನದಿಂಗಿತ ಅಮ್ಮ ಗೊತ್ತು ಮಾಡಿಕೊಂಡಿರುವ ಹಾಗೆ ಮಕ್ಕಳು ಪತ್ತೆ ಮಾಡಲಾರರು!

ಕದ್ದು ಮುಚ್ಚಿ ಕಿವಿಯಲ್ಲಿ ಅಪ್ಪ ಉದುರಿಸಿದ
ಪಿಸು ಮಾತುಗಳು ಕಟ್ಟಿಕೊಟ್ಟ ಗಟ್ಟಿತನವನ್ನು ಅಮ್ಮನಿಗೆ ಮಕ್ಕಳೆಂದು ಕಟ್ಟಿಕೊಡಲಾರರು!

———————————————–

6 thoughts on “ಮಧುಕುಮಾರ ಸಿ ಎಚ್ ಚಾಮನಹಳ್ಳಿ-ಕವಿತೆ-ಅಮ್ಮನಿಗಷ್ಟೇ ಅರ್ಥವಾಗುವ ಸತ್ಯಗಳು

Leave a Reply

Back To Top