ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಹಾಗೇ ಸುಮ್ಮನೆ.
ಮನಸಿನ ಗಡಿಯೊಳಗೆ
ನೂರು ಬೇಲಿಗಳು
ಭಾವ ಚೆಂದಕೆ ಮಾತು ಬೆಸುಗೆಗೆ
ಆದರೂ ಒಂದಿಷ್ಟು ದೂರ ಅಂತರ
ಏಕೆ ಮನಸೇ ನಿನ್ನೊಳಗೆ
ಬೀಸುವ ಗಾಳಿ ತಂಗಾಳಿ
ಎಳೆ ಬಿಸಿಲ ಸ್ಪರ್ಶ ಸೋಜಿಗ
ಹೂವಿನ ಅಂದ ಚೆಂದ
ಹಕ್ಕಿಗಳ ಉಲಿವಿನಾನಂದ
ಆದರೂ ಒಂದಿಷ್ಟು ಬೇಸರ
ಪಾತ್ರ ಪರಿಚಯ ಹಲವು
ಕೆಲವು ಅದರಲ್ಲಿ ಒಲವು
ಇನ್ನು ಕೆಲ ಸರಿಸುಮಾರು ಆಚೆಈಚೆ
ಒಂದರ್ಥ ಹಲವರ್ಥ ನಾನಾರ್ಥ ಜೊತೆಗೆ
ಎಲ್ಲವುಗಳ ಆಚೆ ಮತ್ತೆ ಗಡಿ
ಹೀಗೆ ಇರಬೇಕಿತ್ತು
ಹಾಗೇ ಇದ್ದರೆ ಸಾಕೇ
ಅರಿವು ಬೇಡವೇ ಒಂದಿಷ್ಟು
ನಡೆವ ಹೆಜ್ಜೆ ಬೇಡವೇ
ಅದರಾಚೆ ಭರವಸೆ ಸುಪ್ತ ತರಂಗ
ಕಿವಿಯಾಗಬೇಡವೇ ಮನದ ಮಾತಿಗೆ
ಒಟ್ಟಂದದ ಬದುಕು ಪಲ್ಲವಿಯಂತೆ
ಪದೇಪದೇ ಗುನುಗುನಿಸುವ
ಮಗುವಿನ ತೊದಲಂತೆ
ಹುಡುಕಿದರೆ ಸಾವಿರ ಗಡಿಗಳು
ಮಾತಿಗೆ ಭಾವಕೆ ತಲ್ಲಣಕೆ
ದಾಟಿದರೆ ಎಲ್ಲವೂ ಸುಸೂತ್ರ
ಬದುಕು ಆರಾಧನೆಯ ಸಚಿತ್ರ
ನಾಗರಾಜ ಬಿ.ನಾಯ್ಕ.
ಚಂದದ ಕವನ.
super
ಸಮಾಜದಲ್ಲಿ ಬದುಕುವಾಗ ಒಂದು ಚೌಕಟ್ಟು ಇರುತ್ತದೆ. ಯೋಚನೆ ಮೀರಿ ಚೌಕಟ್ಟು ದಾಟುವುದು ಸುಲಭವಲ್ಲ.. ಭಾವಕ್ಕೆ ಯಾವ ಬೇಲಿಯೂ ಇಲ್ಲ. ಸಮಾಜದ ಹತ್ತು ಹಲವು ಪಾತ್ರಗಳಲ್ಲಿ 11ನೇದಾಗಿ ಉಳಿಯುವುದರಲ್ಲಿ ಯಾವ ಅರ್ಥವೂ ಇಲ್ಲ.. ಅದು ಕೇವಲ ವ್ಯರ್ಥ ಪ್ರಲಾಪವಾಗಿ ಬಿಡುತ್ತದೆ. ಮಾತಿಗೆ ಭಾವಕ್ಕೆ ಒಂದು ಸೂತ್ರವಿದ್ದಾಗಲೇ ಚಂದ. ಅದನ್ನು ದಾಟಿ ಹೊರಬರುವ ಪ್ರಯತ್ನ ಇನ್ನೂ ಇನ್ನೂ ಚೆಂದ!!ಪ್ರತಿ ಸಾಲಿನಲ್ಲಿ ಜೀವಂತಿಕೆ ಇದೆ. ಬದುಕಿನ ಆರಾಧನೆ ಇದೆ. ಜೀವನ್ಮುಖಿ ಯೋಚನೆಗಳಿವೆ..ಹಾಗೆ ಸುಮ್ಮನೆ ಓದಿ, ಸುಮ್ಮನಾಗಲು ಬಿಡುವುದಿಲ್ಲ. ಯೋಚನೆಗೆ ಹಚ್ಚುತ್ತದೆ. ವಾಸ್ತವದ ಆಚೆಯ ನೋಟವಿದೆ. ಈ ಸುಂದರ ಕವಿತೆ ಕವಿ ಮನೆಗಳ ಸೆಳೆಯುತ್ತದೆ.. ಇದರಲ್ಲಿಯೇ ಕವಿತೆಯ ಸಾರ್ಥಕತೆ ಅಡಗಿದೆ
ನಾನಾ