ಅಂಕಣ ಬರಹ
ಸಂವೇದನೆ
ಭಾರತಿ ನಲವಡೆ
ತಾಯ್ತನ
“ಇಷ್ಟು ದಿನ ಸುಮ್ಮನಿದ್ದೆ, ಇನ್ನೂ ಸಾಧ್ಯವಿಲ್ಲ ಎಲ್ಲರ ಪ್ರಶ್ನೆಗೂ ಉತ್ತರಿಸಿ ಸಾಕಾಗಿದೆ.ಸುಂದರ ನಿನ್ನ ಹೆಂಡ್ತಿಗೆ ಈ ಜನ್ಮದಲ್ಲಿ ಮಕ್ಕಳಾಗುವ ಭಾಗ್ಯವಿಲ್ಲ ಅಂತ ಕಾಣ್ತದೆ. ಇನ್ನೊಂದು ಮದುವೆ ಕುರಿತು ನಿರ್ಧಾರ ತೆಗೆದುಕೊ, ನಾನು ಮೊಮ್ಮಕ್ಕಳನ್ನು ಆಡಿಸೋದು ಯಾವಾಗ? ನಿನ್ನ ಜೊತೆ ಮದುವೆಯಾದ ಶೆಟ್ಟರ ಮಗನಿಗೆ ಈಗ ಎರಡು ಮಕ್ಕಳು.ವಿಚಾರ ಮಾಡಿ ನೋಡು” ಎಂದು ವನಜಾಕ್ಷಮ್ಮ ಆಫೀಸಿನಿಂದ ಬಂದ ತಮ್ಮ ಮಗ ವಿಶಾಲನಿಗೆ ಚಹ ಕೊಟ್ಟು ಬ್ಯಾಂಕ್ ಉದ್ಯೋಗಿಯಾಗಿದ್ದ ತನ್ನ ಸೊಸೆ ಕಮಲಾ ಬರುವಕ್ಕಿಂತ ಅರ್ಧ ತಾಸು ಮೊದಲು ಬಂದ ಮಗನಿಗೆ ಲಘುಪಹಾರ ನೀಡುತ್ತಾ ಹೇಳಿದ್ದು ಹೊಸತೇನಲ್ಲ.”ಅಮ್ಮ, ಸುಮ್ನಿರು ಕಮಲಾ ಬರುವ ಹೊತ್ತಾಯಿತು ಕೇಳಿಸಿಕೊಂಡರೆ ಬೇಸರಿಸಿಕೊಂಡಾಳು.ಒಳ್ಳೆಯ ವೈದ್ಯರಲ್ಲಿ ತೋರಿಸುತ್ತಿದ್ದೇವಲ್ಲ,ಇಬ್ಬರೂ ಉದ್ಯೋಗಸ್ಥರಾಗಿದ್ದರಿಂದ ಅವರು ಹೇಳಿದ ದಿನಾಂಕಕ್ಕೆ ಹೋಗುವದು ಹೆಚ್ಚುಕಡಿಮೆಯಾಗುತ್ತೆ.ಮದುವೆಯಾಗಿ ಬರೀ ಐದು ವರ್ಷ,ನೋಡೋಣ ವೈದ್ಯರ ಬಳಿ ನಾಳೆ ಹೋಗೊದಿದೆ.ಈ ವಿಷಯ ಇಲ್ಲಿಗೆ ಬಿಡು” ಎನ್ನುವಷ್ಟರಲ್ಲಿ ಕೆಲಸದಿಂದ ಸುಸ್ತಾಗಿ ಬಂದ ಕಮಲಾ ಹಾಲ್ ನಲ್ಲಿದ್ದ ಸೋಫಾದಲ್ಲೇ ಕುಳಿತಳು.ಅತ್ತೆ ನೀಡಿದ ಚಹ ಕುಡಿದು ತುಸು ಚೇತರಿಸಿಕೊಂಡಾಗ,ವಿಶಾಲ ಮತ್ತೆ ಮರುದಿನ ಮಕ್ಕಳ ಕುರಿತು ಚಿಕಿತ್ಸೆ ಪಡೆಯುವ ಆಸ್ಪತ್ರೆಯ ಹೆಸರು ಹೇಳಿ ಸರಿಯಾದ ವೇಳೆಗೆ ತಯಾರಿರಲು ತಿಳಿಸಿದ.ಮನಸ್ಸಿಲ್ಲದ ಮನಸಿಂದ ತಲೆಯಾಡಿಸಿದಳು ಕಮಲಾ. ಇದಕ್ಕೆ ಕಾರಣವೂ ಇದೆ. ಎರಡು ಬಾರಿ ಟೆಸ್ಟಟ್ಯೂಬ ಬೇಬಿ ಚಿಕಿತ್ಸೆ ಅವಳಿಗೆ ಎರಡುವರೆ ತಿಂಗಳಾದಾಗ ಯಶಸ್ವಿಯಾಗದೇ ವಿಫಲವಾದ್ದರಿಂದ ತುಂಬಾ ನೊಂದಿದ್ದಳು.ಅದಕ್ಕೆ ಕಾರಣ ಕೂಡ ಅವಳಿಗೆ ಚನ್ನಾಗಿ ಗೊತ್ತು.ತುಂಬಿದ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಅವಳು ಮೂವರ ಅಣ್ಣಂದಿರ ಮುದ್ದಿನ ತಂಗಿ.ಅವರದು ಅವಿಭಕ್ತ,ಕುಟುಂಬ ಮೇಲಾಗಿ ಅವಳ ತಂದೆ ಆರಕ್ಷಕನಾಗಿ ಸೇವೆ ಸಲ್ಲಿಸುತ್ತಿರು. ಮನೆಯಲ್ಲಿ ಮೇಲಿಂದ ಮೇಲೆ ಹಬ್ಬ ಹರಿದಿನ, ಅಮವಾಸ್ಯೆ ಹುಣ್ಣಿಮೆಯಂದು ತಪ್ಪದೇ ಹೋಳಿಗೆ ಅಥವಾ ಕಡುಬು ಹೀಗೆ ಸಿಹಿ ಅಡುಗೆ ಆಗಲೇ ಬೇಕಿತ್ತು.ಆರು ಜನ ಮೈದುನರ ಮದುವೆ ಮಾಡುವಷ್ಟರಲ್ಲಿ ಕಮಲಾನ ತಾಯಿಗೆ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿಂದ ಸೋತು ಸುಣ್ಣವಾಗಿದ್ದಳು. ಮೊದಲಿನಂತೆ ಅವಳಿಗೆ ಕೆಲಸ ಮಾಡಲಾಗದುದ್ದಕ್ಕೆ ಅಮವಾಸ್ಯೆ ಹುಣ್ಣಿಮೆ ಬರುವ ಮುಂಚೆ ಕಮಲಾಳಿಗೆ ತಿಂಗಳು ಮುಟ್ಟಾಗೀವ ದಿನವನ್ನು ಮುಂದೂಡುವ ಮಾತ್ರೆ ತೆಗೆದುಕೊಳ್ಳಲು ಹೇಳುತ್ತಿದ್ದರಿಂದ ತಾಯಿಗೆ ನೆರವಾಗಲು ಅವಳು ಹಾಗೆ ಮಾಡುತ್ತ ಬಂದಳು.ಮದುವೆಯ ನಂತರವೂ ತಿಂಗಳು ತಿಂಗಳಿಗೆ ಸರಿಯಾಗಿ ಮುಟ್ಟಾಗದೇ ಮೂರು ತಿಂಗಳು, ಆರು ತಿಂಗಳು ಹೀಗೆ ಅನಿಯಮಿತವಾಗಿತ್ತು. ಮದುವೆಯಾದ ಒಂದು ವರ್ಷದಲ್ಲಿ ವೈದ್ಯರ ಬಳಿ ಪರೀಕ್ಷಿಸಿದಾಗ ಗರ್ಭಚೀಲ ಮುದುಡಿದಂತಿದೆ ವಯಸ್ಸಿಗೆ ತಕ್ಕಂತೆ ಬೆಳೆದಿಲ್ಲವೆಂದು ಚಿಕಿತ್ಸೆ ನೀಡುತ್ತ ಬಂದಾಗ ಫಲಪ್ರದವಾಗದೇ ಆಯ್ ವಿ ಎಫ್ ಚಿಕಿತ್ಸೆಯ,ಮೊರೆ ಹೊಕ್ಕರು. ಬೆಡರೆಸ್ಟ್ ಪಡೆದಾಗ್ಯೂಎರಡು ಸಲ ವಿಫಲವಾದಾಗಮಕ್ಕಳಾಗುವದು ಇನ್ನೂ ಅಸಾಧ್ಯ ಎಂದಾಗ ಅವಳ ಪತಿ ದೃತಿಗೆಡದೇ ಆಶಾವಾದಿಯಾಗಿ ತನ್ನ ಮಿತ್ರರೊಬ್ಬರು ಸೂಚಿಸಿದ ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋದಾಗಲೂ ವಯಸ್ಸು ನಲವತ್ತೆರಡಾಗಿದ್ದರಿಂದ ಮತ್ತೆ ಚಿಕಿತ್ಸೆಯ ಕುರಿತು ಹೇಳಿದ್ದರೂ ಸ್ಪಷ್ಟತೆ ನೀಡದ್ದರಿಂದ ಆಸ್ಪತ್ರೆಯಿಂದ ನೇರವಾಗಿ ಅನಾಥಾಶ್ರಮಕ್ಕೆ ಹೋಗಿ ಸೂಕ್ತ ದಿನದಂದು ಹೆಣ್ಣು ಮಗುವನ್ನು ದತ್ತು ಕೊಳ್ಳಲು ಪತಿಯನ್ನು ಒಪ್ಪಿಸಿ ಅತ್ತೆಯನ್ನು ಒಪ್ಪಿಸಲು ಹೇಳಿದಳು. ಈ ಘಟನೆ ಒಬ್ಬ ಹೆಣ್ಣಿಗೆ ತಾಯ್ತನ ಎಷ್ಟು ಮುಖ್ಯ ಅದರ ಅನುಭವ ವರ್ಣನಾತೀತ.ತಾಯ್ತನದ ಅನುಭವ ಹೆಣ್ಣಾಗಿ ಹುಟ್ಟಿದ್ದಕ್ಕೆ ಸಾರ್ಥಕತೆಯ ಭಾವದ ಅಭೂತಪೂರ್ವ ಜನುಮ ಎಂಬ ಮಾತಿದೆ. ತನಗೂ ಮಗು ಬೇಕು ತನ್ನದೇ ಆದ ಕುಟುಂಬ ಹೊಂದಬೇಕೆಂಬ ಕನಸು ಇರುವದು ಸಹಜ.
ತನ್ನ ಒಡಲಲ್ಲೂ ತಾನೆಣಿಸಿದ ಜೀವ ಕೊನರುವ ನೋವಲ್ಲೂ ಪಿಳಿ ಪಿಳಿ ಕಣ್ಣರಳಿಸಿ ನವಲೋಕವನ್ನು ನೋಡುವ ಕಂದಮ್ಮನ ಮೊಗ ಹೆರುವಾಗ ಸತ್ತು ಹುಟ್ಟಿ ಬದುಕಿದ ಬಡಜೀವಕೆ ಆನಂದವನ್ನುಂಟು ಮಾಡಿ ಕ್ಷಣಮಾತ್ರದಲ್ಲಿ ಮಡಿಲ ನಕ್ಷತ್ರವಾದ ಮಗುವನ್ನು ಕಪ್ಪೆಚಿಪ್ಪಿನ ಮುತ್ತಂತೆ ತಬ್ಬಿ ಮುದ್ದಿಡುವಲ್ಲಿ ಇರುವ ಸುಖಕ್ಕೆ ಯಾವುದು ಸಾಟಿ ಇಲ್ಲ.
ಮಕ್ಕಳಿರಲವ್ವ ಮನೆತುಂಬ ಎಂಬ ನಮ್ಮ ಜನಪದರ ಹಾಡು ಇಂದು ಮನೆಗೊಂದಾದರೂ ಮಗುವಿರಲವ್ವ ಎಂಬ ಮಟ್ಟಿಗೆ ಬಂದು ಮುಟ್ಟಿದೆ.ಕೆಲವೊಬ್ಬ ಸಂಪ್ರದಾಯವಾದಿಗಳು ಮಕ್ಕಳನ್ನು ಹೆರದ ಮಹಿಳೆಗೆ ‘ಬಂಜೆ’ಎಂದು ಮೂದಲಿಸಿ ಬೇರೆಯವರ ತೊಟ್ಟಿಲು ಕಾರ್ಯಕ್ರಮದಲ್ಲಿ ಅವಳ ಹತ್ತಿರ ಮಗುವನ್ನು ಎತ್ತಿಕೊಳ್ಳಲು ಬಿಡದೇ ಕೊಂಕು ನುಡಿಯಾಡಿ ಬಿಂಕ ತೋರುವರೇನು ಕಡಿಮೆಯೇ?
ದೇವರಲ್ಲಿ ಹರಕೆ ಹೊತ್ತು ಅದು ಫಲಿಸದೆ ಇದ್ದರೆ ಬೇಸರಪಡದೇ ಎಷ್ಟೋ ಜನ ಅನಾಥ ಮಕ್ಕಳಿರುವ ಅನಾಥಾಶ್ರಮ ಕಂಡಾಗ ಮಾತೃವಾತ್ಸಲ್ಯಕ್ಕಾಗಿ ಕಕ್ಕುಲತೆಯ ನೋಟದ ಕೂಟಕೆ ಹಾತೊರೆವ ಕಂದಮ್ಮಗಳು ತಮ್ಮ ನಗು-ಅಳು,ತೊದಲು ಮಾತಿನಿಂದ ಮನೆಯನ್ನು ಬೃಂದಾವನವನ್ನಾಗಿಸುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಮನೆಗಳಲ್ಲಿ ತಮ್ಮ ಮಗನಲ್ಲಿ ದೋಷವಿದ್ದರೂ ತಮ್ಮ ಸೊಸೆಯನ್ನೇ ದೂರುತ್ತ,ಕಿರುಕುಳ ಕೂಡ ನೀಡಿ ಎರಡನೆಯ ಮದುವೆ ಕೂಡ ಮಾಡುತ್ತಾರೆ. ಒಬ್ಬ ಪುರುಷನಲ್ಲಿ ದೋ಼ಷವಿದೆ ಎಂಬುದನ್ನು ಅರಿತರೂ ಬಹಿರಂಗ ಪಡಿಸದ ಹೆಣ್ಣು ಜೀವಕ್ಕೆ ಬಂಜೆ ಎಂದು ನಾಮಕರಣ ಮಾಡಿ ಅವಳ ಜಂಘಾಬಲವನ್ನೇ ಉಡುಗಿಸಿ ಅವಳ ಸಂತಸವನ್ನು ಕಸಿದು ಮನವನ್ನು ಬರಡಾಗಿಸುತ್ತಾರೆ.
ಇನ್ನೂ ಮುಂದುವರೆದು ಬಾಡಿಗೆ ತಾಯ್ತನವೆಂಬುದೂ ಕೂಡ ಒಂದು ವ್ಯಾಪಾರವಾಗಿದೆ. ಮೂರು ದಿನದ ಈ ಜೀವನ ಪಯಣದಲಿ ಹುಟ್ಟನ್ನು ನಿರ್ಧರಿಸಬಹುದೇ ವಿನಃ ಸಾವನ್ನಲ್ಲ.
ಕೆಲವೊಮ್ಮೆ ತಾಯ್ತನ ಅನುಭವಿಸುವ ಭರದಲ್ಲಿ ಚಿಕಿತ್ಸೆಗಾಗಿ ದುಂದುವೆಚ್ಚ ಮಾಡಿದಾಗ ತಮ್ಮ ಬಯಕೆ ಈಡೇರದಿದ್ದರೆ ತಬ್ಬಲಿಯಾದ ಕಂದಮ್ಮಗಳನ್ನು ದತ್ತು ಪಡೆದು ತಬ್ಬಿ ಪ್ರೀತಿ ವಾತ್ಸಲ್ಯ ತೋರಿದರೆ ಮನೆಮನದ ಸಂತೋಷದೊಂದಿಗೆ ಒಂದು ಮಗುವಿನ ಬಾಳು ಬೆಳಕಾಗುವಲ್ಲಿ ಸಂದೇಹವಿಲ್ಲ.
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ
ಸತ್ಯ ಸಂಗತಿ.ಆರೋಗ್ಯ ದಲ್ಲಿ ಸಮಸ್ಯೆ ಕಂಡಾಗ ನೋವು ಅನುಭವಿಸುವುದಕ್ಕಿಂತ ಅದಕ್ಕೆ ಪರಿಹಾರ ಹುಡುಕಿ ಬದುಕುವುದು ಜಾಣತನ,ಅಲ್ಲದೆ ಹಿರಿಯವರು ಕೂಡಾ ಸಹಕರಿಸಬೇಕು ಉತ್ತಮ ಲೇಖನ