‘ಪುನರ್ಮಿಲನ’ ಅಮೃತ ಪ್ರೀತಮ್ ಕವಿತೆ ಕನ್ನಡಕ್ಕೆ ಮಾಲಿನಿ ಶ್ರೀ

ನಾನು ನಿನ್ನನ್ನು ಪುನಃ ಸಂಧಿಸುವೆ!!
ಎಲ್ಲಿ, ಹೇಗೆ, ಯಾವಾಗ ಅರಿವಿಲ್ಲ!

ಬಹುಶಃ ನಿನ್ನ ಕಲ್ಪನೆಯಲ್ಲಿ ಮಿಣುಕಾಗಿ
ಚಿತ್ರ ಲೇಖನದಲ್ಲಿ ಮೂಡುವೆ!
ಇಲ್ಲಾ ನಿನ್ನ ಚಿತ್ರ ಲೇಖನದ ಹಾಳೆಯ ಮೇಲೆ,
ನಿಗೂಢ ರೇಖೆಗಳಾಗಿ,
ಮೌನವಾಗಿ ನಿನ್ನನು ದಿಟ್ಟಿಸುತ್ತಾ ಉಳಿಯುವೆ!
ಇಲ್ಲವಾದರೆ ದಿನಕರನ ಕಿರಣಗಳಾಗಿ,
ನಿನ್ನ ಬಣ್ಣಗಳಲ್ಲಿ ಮೀಯುವೆ!
ತಿಳಿದಿಲ್ಲ ಎಲ್ಲಿ, ಹೇಗೆ ಯಾವಾಗ ಎಂದು,
ಆದರೆ ಖಂಡಿತ ನಿನ್ನ ಸಂಧಿಸುವೆ.

ಇಲ್ಲವಾದರೆ, ನಿನ್ನ ಕಣ್ಣಿನಿಂದ ಜಾರುವ
ಹೊಳೆಯುವ ಆನಂದ ಬಾಷ್ಪಾಂಜಲಿ ಆಗುವೆ!
ಹೇಗೆಂದರೆ, ತುಂತುರು ಮಳೆ ಸುರಿಸುವ ಚಿಮ್ಮುವ ಕಾರಂಜಿಯಂತೆ!
ಇಲ್ಲವೇ ನೀರಿನ ಬಿಂದುಗಳಂತೆ, ನಿನ್ನ
ತನುವಿನಲ್ಲಿ ಜಾರುವೆ!
ಹಾಗೂ ಮಂಜಿನ ಮಳೆಯಾಗಿ, ನಿನ್ನ
ಹೃದಯದ ತುಂಬೆಲ್ಲಾ ಆವರಿಸುವೆ!

ನನಗೆ ಮತ್ತೇನೂ ತಿಳಿದಿಲ್ಲ, ಆದರೆ ಇಷ್ಟು ಖಚಿತ!
ಸಮಯ ಏನಾದರೂ ಮಾಡಲಿ, ಈ ಜನ್ಮ
ಕೊನೆಯಾಗುತ್ತದೆ!
ಈ ಶರೀರ ನನ್ನೊಂದಿಗೆ ಕೊನೆಗೊಳ್ಳುತ್ತದೆ!

ಆದರೆ…
ನಿನ್ನ ಒಲವಿನ ಚೈತನ್ಯದ ದಾರಗಳು,
ಈ ಜಗತ್ತಿನ ಸೃಷ್ಟಿಯ ಕಣ ಕಣಗಳಾಗಿ ರೂಪಾಂತರ ಹೊಂದುತ್ತದೆ!

ನಾನು ಆ ಕಣಗಳನ್ನೆಲ್ಲಾ ಆರಿಸಿ, ಪೋಣಿಸಿ,
ಮತ್ತೆ ನಿನ್ನನು ಒಲವಿನ ಸಂಬಂಧದಲ್ಲಿ, ಬಂಧಿಸುವ ದಾರವಾಗಿ ಸಂಧಿಸುವೆ!!


2 thoughts on “‘ಪುನರ್ಮಿಲನ’ ಅಮೃತ ಪ್ರೀತಮ್ ಕವಿತೆ ಕನ್ನಡಕ್ಕೆ ಮಾಲಿನಿ ಶ್ರೀ

Leave a Reply

Back To Top