ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಕವಿತೆ
ಗಝಲ್
ನಾಡಿನ ವೈಭವ ಸಾಹಿತ್ಯದಿ ಬರೆದು
ತೇರನು ಎಳೆದು ಬಿಡು
ಹಾಡಿನ ಸಾಲಲು ಸಾಹಸಗಾತೆಯ
ಪಾಡುತ ನಲಿದು ಬಿಡು
ಶಿಲೆಯಲಿ ತಳೆದಿಹ ಕಲೆಯನು ನೋಡಲು
ಸಾಲವು ಕಂಗಳು ಎರಡು
ದಿಕ್ಕಲು ದಿಕ್ಕಲು ಹೊಕ್ಕಿದೆ ಚರಿತೆಯು
ಅರಿವಿನ ಪರದೆ ತೆರೆದು ಬಿಡು
ಋಷಿಗಳು ಮುನಿಗಳು ಸಂಚರಿಸಿಹರಿಲ್ಲಿ
ಪಾವನ, ಪುಣ್ಯ ಭೂಮಿಯಿದು
ಖುಷಿಯಲಿ ಸಂಸ್ಕೃತಿ ಸಾರವ ಸಾರುತಲಿ
ಬಿಗುವಿನ ಭಾವ ತೊರೆದು ಬಿಡು
ಶತಮಾನಗಳ ಹಿಂದೆ ಜನಿಸಿದ ಭಾಷೆಯು
ವ್ಯಸನವ ಪಡದೇ ನುಡಿಯುತಿರು
ಲತೆಯಂತೆ ಹಬ್ಬಿಸಿ ಪುಷ್ಪಗಳಿಂದ ಸಿಂಗರಿಸಿ
ಸುಂದರ ನಿಲುವನ್ನು ತಳೆದು ಬಿಡು
ಪೀಳಿಗೆಗಳಿಗೂ ಏಳಿಗೆ ತಂದ ಭಾಷೆ
ಕನ್ನಡವೆಂದು ಅರಿತವಳು ಮಾಲಾ
ಸೀಳಲಿ ನಾಲಿಗೆ ಮರೆಯದು ಆತ್ಮವು
ಬಾಳಿಗೆ ನೆಮ್ಮದಿ ತಿಳಿದು ಬಿಡು
ಮಾಲಾ ಚೆಲುವನಹಳ್ಳಿ