ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಕಷ್ಟದಲ್ಲಿ ಸಹಾಯ ಮಾಡುವ

ಮನಸ್ಸುಗಳಿಗೆ ಸಾವಿರಾರು ನಮನ…

ಅವನು  ಮಾಸಿಹೋದ ಬಟ್ಟೆಯನ್ನು ತೊಟ್ಟು ಕೆದರಿದ ಕೂದಲನ್ನು  ಹೊತ್ತು,  ಭೂಮಿಗೆ ಮುಖ ಮಾಡಿ ಗುದ್ದಲಿಯಿಂದ ಕುಣಿಯನ್ನು ತೊಡುತ್ತಾ,  ಬೆವರನ್ನು ಭೂಮಿ ತಾಯಿಗೆ ಹರಿಸುತ್ತಿದ್ದಾನೆ.

 ಇನ್ನೊಬ್ಬ ತಂದ ಕಟ್ಟಿಗೆಗಳನ್ನು ತುಂಡರಿಸುತ್ತಾ,  ಅಚ್ಚುಕಟ್ಟಾಗಿ ಚೌಕಾಕಾರದಲ್ಲಿ ಹೊಂದಿಸುವಾಗ ಆತನ ಹಣೆಯ ಮೇಲಿನಿಂದ ಉದುರುವ  ಬೆವರಿನ ಹನಿಗಳು ಒಂದೊಂದಾಗಿ ಒಂದೊಂದಾಗಿ ಭೂಮಿಗೆ ತಾಗುತ್ತವೆ.

 ಮೇಲಿನ ಎರಡು ಸನ್ನಿವೇಶಗಳನ್ನು ನಾವು ನೋಡುವಾಗ
ಸಾಮಾನ್ಯವಾಗಿ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಾಗಿ ಬಿದ್ದವರನ್ನು, ಸಾವಿನೊಂದಿಗೆ ಹೋರಾಡುತ್ತಿರುವವರನ್ನು ನೋಡಿಯೂ ನೋಡದಂತೆ ಹೋಗುವವರೇನು ಕಡಿಮೆಯೇ..?   ರಸ್ತೆಯಲ್ಲಿ ಹಾಗೆ ಬಿದ್ದರೂ ಯಾರು ಕಣ್ಣೆತ್ತಿ ನೋಡದೆ ಹೋಗುವ ಅನೇಕ ಸಂದರ್ಭಗಳನ್ನು ನಾವು ಕಾಣುತ್ತೇವೆ.  

ಇಂತಹ ಸಂದರ್ಭದಲ್ಲಿ ಯಾರಾದರೂ ಸಹಸಯ ಮಾಡಿದರೇ  ಕಾನೂನಿನ ದೃಷ್ಟಿಯಿಂದ ಈ ಮೊದಲು ಅನೇಕ ತೊಂದರೆಗಳನ್ನು  ಎದುರಿಸಬೇಕಾಗಿತ್ತು. ಇದನ್ನು ಮನಗಂಡು   ಕಾನೂನಿನಲ್ಲಿ ಅನೇಕ  ಬದಲಾವಣೆಯನ್ನು ಮಾಡಿದ್ದಾರೆ.

ಆದರೆ..

ಅಪಘಾತ ನೋಡಿದ ವ್ಯಕ್ತಿಯು ಗಾಯಾಳುಗಳನ್ನಾಗಲಿ ಮರಣ ಹೊಂದಿದವರನ್ನಾಗಲಿ  ಮುಟ್ಟಲು ಇನ್ನೂ ಹಿಂಜರಿತ ಇರುವುದು ದುರಂತ..!!

 ಗಾಯಾಳುಗಳನ್ನು ಸಂರಕ್ಷಿಸುವಾಗ ಯಾವುದೇ ಕಾನೂನು ಮುಖ್ಯ ಸಾಕ್ಷಿಯಾಗಿ ಪರಿಗಣಿಸುವುದಿಲ್ಲ ಎನ್ನುವ ಆಲೋಚನೆ ಮತ್ತು ವಿಷಯ ಗೊತ್ತಿದ್ದರೂ ಯಾರು ಕೂಡ ಅಂತಹ ಕಷ್ಟ ಸಂದರ್ಭದಲ್ಲಿ ಸಹಾಯ ಮಾಡದೆ ಹಾಗೆಯೇ  ನೋಡುವ ಎಷ್ಟು ಕ್ರೂರ ಮನಸ್ಸುಗಳನ್ನು ಕಾಣುತ್ತೇವೆ.  ಆದರೆ ಇನ್ನೂ ಕೆಲವು ವ್ಯಕ್ತಿಗಳು ಎಲ್ಲರಿಗಿಂತಲೂ ಮುಂಚಿತವಾಗಿ ಗಾಯಾಳುಗಳನ್ನು ರಕ್ಷಿಸಲು ಮುಂದಾಗುವುದು ಅಭಿನಂದನೀಯ.  ಗಾಯಾಳುಗಳಿಗೆ ನೀರು ಕುಡಿಸಿ, ಧೈರ್ಯ ಹೇಳಿ,  ಆಸ್ಪತ್ರೆಗೆ ಸಾಗಿಸುವ ಕರ್ತವ್ಯ ನಿರ್ವಹಿಸುತ್ತಾರಲ್ಲ ಅವರಿಗೆ   ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಅಪಘಾತದಲ್ಲಿ ಮರಣ ಹೊಂದಿದವರನ್ನು ರಸ್ತೆಯಿಂದ ಸರಿಸಿ, ಮನೆಯವರಿಗೆ ವಿಷಯವನ್ನು ಮುಟ್ಟಿಸುವ ಕೆಲಸ  ನಂತರ ಪೊಲೀಸ್ ಇಲಾಖೆಗೆ ಹಾಗೇ ಸಂಬಂಧಿಸಿದ  ಎಲ್ಲರಿಗೂ ವಿಷಯವನ್ನು ತಲುಪಿಸುವ ಅವರ ನೈಜ ಮಾನವೀಯ ಮೌಲ್ಯವುಳ್ಳ ಕಾಳಜಿ ಮೆಚ್ಚುವಂತಹದ್ದು.  ಇನ್ನೂ ಕೆಲವು ಸಂದರ್ಭಗಳಲ್ಲಿ ಮರಣವನ್ನು ಹೊಂದಿದ ವ್ಯಕ್ತಿಯ  ಪರಿವಾರದವರು ದುಃಖದಲ್ಲಿರುವಾಗ,  ಸಂಬಂಧಿಕರನ್ನು ಕಳೆದುಕೊಂಡ  ಪರಿವಾರ ಆಕಾಶವೇ ಕಳಚಿಬಿದ್ದಷ್ಟು ಚಿಂತೆಗೀಡಾದಾಗ ಅಂತಹ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅದು ತನ್ನ ಮನೆಯ ಕಷ್ಟ ಎನ್ನುವ ರೀತಿಯಲ್ಲಿ ನಿಂತು ಸಹಾಯ ಮಾಡುತ್ತಾರೆ.

ಅಂತ್ಯಸಂಸ್ಕಾರಕ್ಕೆ ಬೇಕಾದ  ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಮಾಡುವ ಅನೇಕ ಮಾನವೀಯ ಮನಸ್ಸುಗಳನ್ನು ಕಾಣುತ್ತೇವೆ.  

ಗ್ರಾಮೀಣ ಭಾಗದಲ್ಲಿ ವ್ಯಕ್ತಿಗಳು ಮರಣವನ್ನು
ಹೊಂದಿದರೆ  ಆ ವ್ಯಕ್ತಿಗಳ ಸಂಬಂಧಿಕರಿಗೆ ವಿಷಯಗಳನ್ನು ತಲುಪಿಸುವುದು,  ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಆಚರಣೆಗಳಿಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ತರಿಸುವ, ಅಂತ್ಯಸಂಸ್ಕಾರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುವ ಎಲ್ಲಾ ಕೆಲಸಗಳನ್ನು ತನ್ನದೇ ಮನೆಯ ಕೆಲಸ ಎನ್ನುವಷ್ಟರ ಮಟ್ಟಿಗೆ ಜವಾಬ್ದಾರಿಯಿಂದ ನಿರ್ವಹಿಸುವ ಮನುಷ್ಯತ್ವದ ಮೌಲ್ಯವುಳ್ಳ ಅನೇಕ ವ್ಯಕ್ತಿಗಳನ್ನು ಕಾಣುತ್ತೇವೆ. ಅವರ ಈ ಕಾರ್ಯವನ್ನು ಮನಸಾರೆ ನಾವು ಕೊಂಡಾಡಲೇಬೇಕು.

  ನೋವು ಸಾವು ಯಾರನ್ನು ಬಿಡಲಾರದ ಪೆಂಡಭೂತ. ನೋವಿನಲ್ಲಿ ಅಳುತ್ತಾ,  ಕಣ್ಣೀರು ಹಾಕುತ್ತಾ ಕುಳಿತರೆ ಹೇಗೆ..?  ಸಾಂತ್ವಾನ ಹೇಳುವ ಕೆಲವು ಕರುಣಾಜನಕ ಮನಸ್ಸುಗಳು ಈ ಸಮಾಜದಲ್ಲಿರುವುದನ್ನು ನಾವು ಗುರುತಿಸಬಹುದಾಗಿದೆ. ಹಾಗೆಯೇ ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಅತ್ಯಂತ ಗೌರವದಿಂದ ಮಾಡಬೇಕಾಗಿರುವುದು ಮನುಷ್ಯ ಧರ್ಮ. ಮಾನವೀಯ ಮೌಲ್ಯವುಳ್ಳ ವ್ಯಕ್ತಿಗಳು ಅಂತ್ಯ ಸಂಸ್ಕಾರಕ್ಕೆ ಬೇಕಾದ ಪೂರ್ವ ಸಿದ್ಧತೆಯ ಜೊತೆ ಜೊತೆಗೆ ‘ಮಣ್ಣು ಮಾಡುವ’ ಪದ್ಧತಿ ಕೆಲವು ಸಮಾಜದಲ್ಲಿ ಇರುವುದರಿಂದ ‘ಕುಣಿ ತೆಗೆಯುವ’  ಕೆಲಸ ಅತ್ಯಂತ ಕಠಿಣವಾದುದು. ಅಂತಹ ಕೆಲಸವನ್ನು  ದು:ಖದ ಆಪ್ತತೆಯಿಂದ ಸರಿಯಾದ ರೀತಿಯಲ್ಲಿ ತೆಗೆಯುವ ರಟ್ಟೆಗಳಿಗೆ ನಮ್ಮದೊಂದು ಸಲಾಂ..!!  ಭೂಮಿಯನ್ನು ಅಗೆದು ಕುಣಿ ತೋಡುವಾಗ ಅವರ ಬೆವರ ಹನಿಗಳು ಸತ್ತ ವ್ಯಕ್ತಿಗೆ ಸಲ್ಲಿಸುವ ಗೌರವವೆಂದೇ ಭಾವಿಸಬಹುದು.

 ಇನ್ನು ಕೆಲವು ಸಮಾಜಗಳಲ್ಲಿ ‘ಕಿಚ್ಚು ಮಾಡುವ’ ಪದ್ಧತಿ ಇರುವುದರಿಂದ, ಕಿಚ್ಚು ಮಾಡಲು ಬೇಕಾದ ಕಟ್ಟಿಗೆಯ ವ್ಯವಸ್ಥೆಯನ್ನು ಟ್ರ್ಯಾಕ್ಟರ್ ಮೂಲಕವೋ, ಚಕ್ಕಡಿಯ ಮೂಲಕವೋ  ಅಂತ್ಯಸಂಸ್ಕಾರದ ಸ್ಮಶಾನಕ್ಕೆ ಸಾಗಿಸಿ ಅವುಗಳನ್ನು ಅಚ್ಚುಕಟ್ಟಾಗಿ ಹೊಂದಿಸುವಾಗ ಕಟ್ಟಿಗೆಯನ್ನು ಸಣ್ಣಗೆ ಕಡಿಯುವ ಸಂದರ್ಭದಲ್ಲಿ ಸುರಿಸುವ ಬೆವರ ಹನಿಗಳು ನಿಜವಾಗಿಯೂ ಸತ್ತ ವ್ಯಕ್ತಿಗಳಿಗೆ ಸಲ್ಲಿಸುವ ಗೌರವಂದೇ ಭಾವಿಸಬಹುದು.

 ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ  ಸತ್ತ ವ್ಯಕ್ತಿಯನ್ನು ವಾಹನದ ಮೂಲಕವೋ  ಅಥವಾ ‘ಚಟ್ಟ’ ಎನ್ನುವ ಸಾಧನದ ಮೂಲಕ  ಹೆಗಲು ಕೊಡುವ   ನಂತರ ಅಂತ್ಯ ಸಂಸ್ಕಾರ ಮಾಡುವುದನ್ನು ನಾವು ಕಾಣುತ್ತೇವೆ.

 ಈ ಎಲ್ಲಾ ಘಟನೆಗಳನ್ನು ನಾವು  ಅವಲೋಕನ ಮಾಡಿಕೊಂಡಾಗ ಅಪಘಾತವಾಗಿರಲಿ, ಕಷ್ಟವಿರಲಿ, ಸಾವು ನೋವುಗಳಿರಲಿ ಯಾವುದೇ ಸಂದರ್ಭದಲ್ಲಿ “ನಿಮ್ಮ ಜೊತೆಗೆ ನಾನೀದ್ದೇನೆ”  ಎನ್ನುವ ಹತ್ತು ಹಲವಾರು ಮನಸ್ಸುಗಳು ನಮ್ಮ ಸಮಾಜದಲ್ಲಿರುವುದು ಸಮಾಧಾನದ ವಿಷಯ.  ಅಂತಹವರು  “ಇವರು ನಮ್ಮ ಸಂಬಂಧಿಕರು, ಇವರು ನಮ್ಮ ಸ್ನೇಹಿತರು, ಇವರು ನಮಗೆ ಬೇಕಾದವರು” ಎಂದು  ಯಾವುದನ್ನು ಅವರು ಪರಿಗಣಿಸುವುದಿಲ್ಲ.  ಅವರಿಗೆ  ಯಾರೇ ಆಗಿರಲಿ ಕಷ್ಟ ಇದ್ದಲ್ಲಿದ್ದರೆ ಕಣ್ಣೀರು ಒರೆಸುವ, ಕೈಚಾಚಿ ಸಾಹಯಹಸ್ತ ಮಾಡುವ, ಆದ ಕಷ್ಟಕ್ಕೆ ಹೆಗಲು ಕೊಡುವ, ಸಾಂತ್ವಾನದ ನಾಲ್ಕು ಪ್ರೀತಿಯ ಮಾತುಗಳನ್ನಾಡುವ ಅವರ ವಿಶಾಲವಾದ ಮನಸ್ಸುಗಳನ್ನು ಇಂದಿಗೂ ನಾವು ಬಹುತೇಕ ಗ್ರಾಮೀಣ ಭಾಗದಲ್ಲಿ  ಕಾಣುತ್ತೇವೆ.

 ಅಂತವರೇ  ಮನುಷ್ಯ ಪ್ರೀತಿಯನ್ನು ಈ ಭೂಮಿಗೆ ಹಂಚುತ್ತಾರೆ.  ಅಂತಹವರ ಸಂತತಿ ಸಾವಿರಾಗಲಿ, ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವೆಲ್ಲ ನಮ್ಮ ಅಹಂನ ಅಡ್ಡಗೋಡೆಗಳನ್ನು ಕಟ್ಟಿಕೊಂಡು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡದೆ “ಅದು ನಮಗೆ ಸಂಬಂಧವಿಲ್ಲ” ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ನಾಚಿಕೆಯ ಸಂಗತಿ. ಇಂದಿನ  ಸಮಾಜಕ್ಕೆ   ಇವರು ಮಾರ್ಗದರ್ಶನವಾಗಬಲ್ಲರು. ಅಂತಹವರನ್ನು ನೋಡಿ ನಾವು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯ.  ಇಲ್ಲದೆ ಹೋದರೆ ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಅಂತ್ಯಸಂಸ್ಕಾರ ಮಾಡುವ, ಪ್ರೀತಿಯಿಂದ ಕಣ್ಣೀರು ಒರೆಸುವ, ಇಂತಹ ಮನಸ್ಸುಗಳಿಗೆ ಸಾವಿರ ಸಾವಿರ ನಮನಗಳು. ಅಂತವರು ಮನಸ್ಸು ಮತ್ತು  ಬದುಕು ಇನಷ್ಟು ಹಿರಿದಾಗಲಿ.  ನಾವೂ ಈ ಭೂಮಿಯ ಮೇಲೆ ಇರುವುದರಿಂದ ಮನುಷ್ಯ ಪ್ರೀತಿಯನ್ನು ಹಂಚಬೇಕಾಗಿದೆ.  ಪ್ರೀತಿಯ ಒಲವಧಾರೆಯನ್ನು ನಾವು ಬೆಳೆಸಿಕೊಂಡಾಗ ಮಾತ್ರ ಮನುಷ್ಯತ್ವದ ಮಾನವೀಯ ಮೌಲ್ಯಗಳನ್ನು  ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಮನುಷ್ಯ ಪ್ರೀತಿಯ ಎಲ್ಲಡೆ ಹರಡಲೆಂದು ಆಶಿಸುವೆ.

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

Leave a Reply

Back To Top